ಹಕ್ಕಿ ಫಡಫಡಿಸಿ ಹಾರಿ
ನೀಲಿ ಆಕಾಶದ ಪರದೆ
ತುಂಬ ಹುಚ್ಚೆದ್ದ ಪದಗಳು
ಬೆಳಕಿನ ಕಿರಣಗಳೊಂದಿಗೆ ಜಾರಿ
ಹಿಡಿದು ಬಿಂಬಿಸಿದ ಹುಲ್ಲುಗರಿ
ತುಂಬ ಇಬ್ಬನಿ ಕವಿತೆಗಳ ಸಾಲು.
ಮೂಡಿದ ಹರುಷ ವೃತಸ್ನಾನ
ಮುಗಿಸಿ ಎಳೆ ರಂಗೋಲಿ ಎಳೆದ
ಬೆರಳುಗಳು ನಾದಿ ಹದ ಮಾಡಿದ
ರೊಟ್ಟಿಗಳು ಭೂಮಿ ಗೋಲ ತಿರುಗಿ
ಹಬ್ಬದ ಬಾಳೆ ತುಂಬ ಭಕ್ಷ್ಯಗಳ ಸಾಲು.
ಉತ್ತಿ ಬಿತ್ತಿ ಉಂಡು ಹದ ಮಾಡಿದ
ಪಾಕ ರಸಪಾಕಗಳ ಪ್ರಸನ್ನತೆ
ಹರಿದು ರಸಗಳ ಸೃವಿಸಿದ ಭಾವ
ಅನುಭಾವಗಳ ಸಾಲು ಹಣತೆಗಳು
ಬಿಂಬಿಸಿ ಕಾಂತಿಗಳ ಕಣ್ಣತುಂಬ ದೀಪಗಳ ಸಾಲು.
ಮರಗಿಡಗಳ ಸುಳಿಗಾಳಿ ಬೀಸಿ
ಭೂಮಿ ಕವಿತೆಯ ಸಾಲು ಮಾಡಿ
ಬತ್ತಿದ ಪಟ್ಟಿಯಲಿ ಹಸಿರು ಮೊಳಕೆ
ಚಿಗುರಿದ ಜೀವಭಾವ ಜಲವ
ಹೀರಿ ಹೀರಿ ಚೀಪಿತ ತಾಯ ಮೊಲೆ ಹಾಲು.
ಹೊಸ ಹೊಸ ರೂಹುಗಳ ಸಂಕೇತ
ಮುದಗೊಂಡು ಹದ ಪಾಕ ಕುದಿದು
ಘಮ್ಮೆಂದು ಹೊಮ್ಮಿ ಚಿಮ್ಮುವ ರಾಗಗಳು
ಬದುಕು, ಕವಿತೆ, ಖುಷಿ, ಹುಟ್ಟುವ ಕಾಲ.
*****