ಉಮರನ ಒಸಗೆ – ೪೨

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****

ಉಮರನ ಒಸಗೆ – ೪೧

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****

ಉಮರನ ಒಸಗೆ – ೩೯

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****

ಉಮರನ ಒಸಗೆ – ೩೬

ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ ಗಂಧರ್‍ವನೊರ್‍ವನೆನ್ನೆಡೆಗೈದಿ ನಗುತೆ ತೋಳಿನಲಿ ತಳೆದಿರ್‍ದ ಪಾತ್ರೆಯನ್ನು ತೋರುತ್ತ ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು. *****

ಉಮರನ ಒಸಗೆ – ೩೫

ಅಸ್ತಿ ನಾಸ್ತಿಗಳೆಂಬ ತತ್ತ್ವಗಳ ಬಿತ್ತರಿಸಿ ಮೇಲು ಬೀಳುಗಳೆಂಬ ನಿಯಮಗಳ ತೋರ್‍ಪಾ ಕಲೆಯ ನಾಂ ಕಲಿತೊಡಂ, ತಳವನಾಂ ಮುಟ್ಟಿರ್‍ಪಾ ಕಲೆಯೊಂದದಾವುದೆನೆ-ಮಧು ದೈವ ಭಜನೆ. *****

ಉಮರನ ಒಸಗೆ – ೩೪

ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****