ನೀನು ಬರಿ ನೋವ ಕೊಟ್ಟೆ,
ಚಿಂತಿಸುವ ಭಾರ ಎನ್ನದೆ.
ಈಗ ನಂಬಿಕೂಡುವ ಕಾಲ ಇಲ್ಲ,
ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ.
ಗೊತ್ತು ನನ್ನ ಹಾಗೆ ವಿಚಾರಿಸುವರು
ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ.
ನೀನು ಬರೀ ನೆನಪು ಬಟ್ಟೆ
ಅದರಪಟ್ಟಿಗೆ ಗುದ್ದಾಡುತ್ತ ನಾನು
ಬದುಕಲೆತ್ನಿಸಿದೆ, ನೂರು ಮಾತುಗಳು
ಕುಹಕಗಳು, ಮನಸ್ಸನ್ನು ಕೆಡಿಸಲಿಲ್ಲ,
ನನ್ನ ಓಟದ ಬದುಕು ನನ್ನದಾಗಿತ್ತು,
ಅವರಿವರು ಹೀಗೆ ಯೋಚಿಸುತ್ತಿದ್ದಾರೆ ಯಾರ ಹಂಗೂ ಇಲ್ಲದೇ.
ನೀನು ಬರೀ ಕನಸುಗಳ ಕೊಟ್ಟೆ
ಎಲ್ಲವನು ಉಡಿಯಲಿರಿಸಿ ಬಣ್ಣದ
ಕಾಮನ ಬಿಲ್ಲನ್ನೇರಿ ಪಯಣಿಸಿದೆ,
ಸಾವಿರ ಕಣ್ಣುಗಳ ಚುಚ್ಚು ನೋಟ
ವಿಶಾಲ ಪ್ರೀತಿಗೆ ಎಲ್ಲಿಲ್ಲ ಹೇಳು ನೋವು?
ಕೆಲವರು ನಡೆಯುತ್ತಿದ್ದಾರೆ ಯಾರ ಹಂಗೂ ಇಲ್ಲದೇ.
ನೀನು ಬರೀ ಸುಳ್ಳುಗಳ ಹೇಳಿದೆ
ಸತ್ಯವೆಂದು ನಂಬಿ ಎಳೆ ರಂಗೋಲಿ
ಎಳೆ ಬದುಕು ಚಿತ್ರ ವಿಚಿತ್ರವೆಂದು
ಮಾತಿನ ಮಂಟಪವ ಕಟ್ಟಿದೆ,
ನೋಯಿಸುವ ನುಡಿ ನೊಂದ ತಪ್ತ ಹೃದಯ,
ಆದರೂ ಎಲ್ಲರೂ ಓಡುತ್ತಿದ್ದಾರೆ ಯಾರ ಹಂಗೂ ಇಲ್ಲದೇ.
*****