ಮಲೆನಾಡಿನ ಮಳೆಗಾಲದಲ್ಲಿ
ನಮ್ಮೂರು ಕಾಲೇಜು ಬಾಗಿಲುಗಳು
ತೆಗೆದುಕೊಳ್ಳುತ್ತವೆ.
ಬಣ್ಣ ಬಣ್ಣದ ಛತ್ರಿಗಳು
ಬಿಚ್ಚಿಕೊಳ್ಳುತ್ತವೆ.
ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು
ಘಮ ಘಮಿಸುತ್ತವೆ.
ಕಾಲೇಜು ಮೆಟ್ಟಲೇರುವ ಹುಡುಗಿಯರ
ಗಲ್ಲಗಳು ಕೇದಿಗೆಯಾದರೆ ಕಣ್ಣುಗಳು
ನೀರಳೆಯಾಗುತ್ತವೆ.
ಸ್ಟೇಷನರಿ ಅಂಗಡಿಯಲ್ಲಿಯ
ಲಿಪ್‌ಸ್ಟಿಕ್, ರೋಜ್, ಪರ್ಸಗಳು ಕರಗುತ್ತವೆ.
ಮಳೆಗೆ ಮಿಂದು ನಡುಗುವ
ಬೆಡಗಿಯರನ್ನು ನೋಡಿ Book stall
ದವರೂ ಬಿಸಿಯಾಗಿ ಬೆವರುತ್ತವೆ.
ಹಳೇ ಮೇಷ್ಟ್ರುಗಳು,
ಛೇಡಿಸುವ ಹೊಸ ಹುಡುಗಿಯರೆಂದು
ಇದ್ದ ಎರಡು ಕೂದಲುಗಳಿಂದ
ಬೋಳು ತಲೆ ಮುಚ್ಚುತ್ತ
ಇಸ್ತ್ರಿ ಹೊಡೆವ, ಕಾಲರ್ ಹರೆದ
ಶರ್ಟ್ ಹಾಕಿಕೊಂಡು,
ವಯಸ್ಸಾಗಿ ಒಳಗೆ ಠೊಳ್ಳಾಗಿದ್ದರೂ
ಜೊಳ್ಳು ಎಲುಬಿನ ಎದೆ ಏರಿಸಿ
ಇಲ್ಲದ ಮೀಸೆ ತಿರುಗಿಸಿ
ಭಲ ಭೀಮನ ಠೀವಿಯಂತೆ
ಕ್ಲಾಸಿಗೆ ಬಂದೇ ಬಿಡುತ್ತಾರೆ.
ಹುಡುಗಿಯರ ಕಿಲ ಕಿಲ ನಗು
ಹುಡುಗರ ಕಲ ಕಲ ಮಾತುಗಳಲ್ಲಿ
ಕ್ಲಾಸು ಸುರುವಾಗುತ್ತದೆ.
ಬಾಣಗಳು ಬೋಳು ತಲೆಗೆ ಬೀಳುತ್ತವೆ
ಮೇಷ್ಟ್ರು ಸುಸ್ತಾಗುತ್ತಾರೆ
ಜೊಳ್ಳು ಎಲುಬಿನ ಬೊಜ್ಜು ಮೇಷ್ಟ್ರು
‘ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ
ರಪ ರಪ ಮಳೆ ಹೊಡೆಯುತ್ತದೆ
ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ
ಮೇಷ್ಟ್ರನ್ನು ಮುತ್ತುತ್ತವೆ
ಧನ್ಯ ನಾ ಎನ್ನುತ್ತಾರೆ
ಕಾಲೇಜು ಹುಡುಗರು
ಕವಿಗಳಾಗುವ
ಮೊದಲನೆಯ ಕವನ
ಸುರುವಾಗುತ್ತದೆ.
*****