ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ
ಕಿಟಕಿಯಾಚೆ ನೋಡಲೇನಿದ್ದಿತು!
ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ
ಸಮುದ್ರದ ಹಡಗಿನ ದೀಪಗಳು,
ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು
ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!
ನಿದ್ದೆ ಸಮಯ ಬೇರೆ ಗಡದ್ದಾದ ನಿದ್ದೆ-
ನಿದ್ದೆ ನಿದ್ದೆ ನಿದ್ದೆ
ಕೈ ಕುಲುಕಿ ಭುಜ ಅಲುಗಾಡಿಸಿ ಏನೋ ಕೇಳಿದಂತೆ….
ಎಚ್ಚರ, ಕಣ್ಮುಚ್ಚಿ ಕಣ್ಣು ಬಿಟ್ಟರೆ
ಮಬ್ಬು ಬೆಳಕಿನಲ್ಲಿ ನಿಶ್ಶಬ್ದ ಮೌನ
ಹೊದಿಕೆಯೊಳಗೆ ಪಯಣಿಗರ ನಿದ್ರೆ
ಬೆನ್ನು ತಿರುಗಿಸಿ ಕಪ್ಪು ಕೋಟಿನ ಆಕೆ ಸರಕ್ಕನೆ ಸರಿದಳು.
ಗಗನಸಖಿ ಅಲ್ಲದೆ ಮತ್ಯಾರಿದ್ದಾರು!
ಹಿಂದೊರಗಿ ಕಣ್ಣು ಮುಚ್ಚಲು ಪ್ರಯತ್ನಿಸಿದೆ
ಕಾಲಿಗೆ ಜಡ ವಸ್ತು ತಗುಲಿ ಮತ್ತೆ ಎಚ್ಚರ
ಹ್ಯಾಂಡ್ ಬ್ಯಾಗ್ ಅಲ್ಲದೇ ಮತ್ತಿನ್ನೇನು?
ಸಮಾಧಾನಿಸಿಕೊಳ್ಳುವಿಕೆ-
ವಿಮಾನ ಕೆಳಮನೆಯ ಸ್ಟೋರೇಜ್
ಕಾರ್ಗೋ ಕಂಟೈನರ್‌ಗಳ ಬಿಡಿಬಿಡಿಯಾದ ದೃಶ್ಯ.
ನೂರಾರು ಸೂಟ್‌ಕೇಸ ಬ್ಯಾಗುಗಳ ಗುಡ್ಡೆ
ಇರಲಿ ಅದಕ್ಕೇನಂತೆ!
ಅದರೊಳಗಡೆ ಅದೆಷ್ಟೋ ಪ್ರೀತಿ ಪ್ರೇಮದ ಪತ್ರಗಳು
ರಾಜಕೀಯ ವ್ಯವಹಾರಗಳ ಕಾಗದಗಳು
ಡಾಲರ್‍ಸ್, ಚೆಕ್, ಡ್ರಾಫ್ಟ್‌ಗಳ ರಾಶಿ
ಚಿನ್ನ ಬೆಳ್ಳಿ ಗಾಂಜಾ ಅಫೀಮುಗಳ ಬಚ್ಚಿಟ್ಟ ಸ್ಥಳ.
ಅದೇ ಅದೇ ಜಾಗತೀಕರಣದ ಪೇಟೆ ಪೇಟೆ….
ಇರಲಿ ಅದಕ್ಕೇನಂತೆ!
ಈ ಕಡೆಗೆ ಶೀತಾಗಾರ ಒಂದರ ಮೇಲೊಂದು ಶೆಲ್ಫ್‌ಗಳು
ಅದರೊಳಗೆ ಹೆಣಗಳ ಪೆಟ್ಟಿಗೆಗಳು
ವಿದೇಶಗಳೊಳಗೆ ಹೆಣವಾದವರು
ಮರಳಿ ಮಣ್ಣಿಗೆ ಮಣ್ಣಾಗಲು ಬರುತ್ತಿದ್ದಾರೆ.
ದಡಕ್ಕನೇ ಎದೆಬಡಿತ ಜೋರಾದದ್ದು.
ನನ್ನ ಕಾಲ ಕೆಳಗಿನ ಮನೆಯಲ್ಲೇ
ಅನಾಥ ಹೆಣಗಳಿದ್ದು ಕೂತಿರಬಹುದೆ
ಹೊರಟಾಗ ಇದೇ ಸೀಟಿನಲ್ಲಿ ಕುಳಿತು
ಈಗ ಇದೇ ಸೀಟಿನ ಕೆಳಗೆ ಏಕಾಂಗಿಯಾಗಿ
ರೋಧಿಸುತ್ತಿರಬಹುದೆ!
ಕೆಳಗೆ ನಿರ್ಜೀವಿಗಳ ಸ್ಮಶಾನ
ಮೇಲೆ ರಾಜನರಮನೆ ಟಚ್
ಕ್ಷಣಾರ್ಧದಲ್ಲಿ ಎದೆಯೊಡೆದು ಭೀತಿ ಮೂಡಿ
ಮೈತುಂಬ ಸಣ್ಣಗೆ ಬೆವರು ನಡುಕ-
ಈ ವಿಮಾನದೊಳಗೆ ಇದೆಲ್ಲ ಇರದಿರಲಿ ದೇವರೆ-
ನನ್ನ ಸೀಟಿನ ಎಲ್ಲ ಲೈಟು ಬಟನ್‌ಗಳು ಶುರುಮಾಡಿ ಕಣ್ಮುಚ್ಚಿದೆ.
*****