ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು
ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು
ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ
ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ!
ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು
ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ!
ತಮ್ಮ ಹೃದಯದ ಬಯಕೆ ಪದ್ಯ ಸಾಲ್ಗಳ ಮಾಲೆ.
ಕವಿಯು ಮರೆ ಮೋಸವನು ಎತ್ತಿ ತೋರುವ ಇಹದ
ಬಿಚ್ಚು ಮನಸಿನ ಬೇಹುಗಾರನೆಂದರೆ ಏನು?
ಅವನ ಬಯಕೆ ಅದೇನು? ಜೀವನದ ಸಮರವನು
ಸಾಮರಸ ವಾದದಲಿ ಹಾಡಿತೋರಿಸಿ ನಲಿದು
ಜನದ ಪಾಡಿಗೆ ತಾನು ಪಾಲುಗಾರನು ಆಗಿ
ಕಳ್ಳ ಜೀವದ ತಂತ್ರಗಳ ಬಯಲಿಗೆಳೆ ತಂದು
ಜ್ಞಾನಿಗಳ ನಿಷ್ಪಕ್ಷ ತಲೆಗಳನು ತೂಗಿಸುತ
ತಾನು ಹಾಡಿದ ಗಾನ ಯಾರು ಪೊಗಳುವರೆಂದು
ತನ್ನ ವಾದಕೆ ಯಾರು ಮನ್ನಣೆಯ ಸಲಿಸುವರು
ಎಂದು ನೋಡುವ ತಾನು ಬರೆದ ಹಾಡ್ಗಳನೆಲ್ಲ
ಕ್ರಮವಾಂತು ಹೇಳಯವುದೆ ಅವನ ಜೀವದ ಬಯಕೆ!
ಮಧುರವಾದಾ ಕೀರ್ತಿ ಕವಿವರನೆ ಬಯಸುವನು
ತಾನು ಲೋಕಕೆ ಅಂದ ವಿಶ್ವರಹಸ್ಯದ ಸೊಲ್ಲು
ಪಾಪಿಯಾದವನೊಬ್ಬ ಹೇಳಿ ನಲಿದೊಡೆ ಕವಿಯು
ಹಿಗ್ಗುವನು, ಎಲ್ಲರಂತೆಯೆ ಪೇಳಲಿಚ್ಚಿಪನು!
ಆದಿ ಕವಿಯನು ಮೀರ್ವ ಬಯಕೆ ಅವನಲ್ಲಿಲ್ಲ!
ತನ್ನ ಒಣ ಮಾತುಗಳು ಮನ್ನಣೆಯ ದೃಷ್ಟಿಯಲಿ
ಹೊರಳಿದರೆ, ತನ್ನ ಸೇವೆಯು ರಸಿಕ ವೃಂದವದು
ಗಣಿಸಿದರೆ, ತನ್ನ ಬಿರುನುಡಿ ಜನಕೆ ನೀತಿಯನು
ಕಲಿಸಿದರೆ, ಅದೆ ಜಗದ ಕವಿ ಪ್ರಯತ್ನದ ಫಲವು.
*****