ತಿಮ್ಮ ಬೋರ ನಂಜ ಕೂಡಿ
ರಾಗಿ ಹಿಟ್ಟು ಕಲಸುವಾಗ
ಬಾಯ್ಗೆ ಬಾಯಿ ಮಾತು ಎದ್ದು
ಅವರನ್ನವರು ಮರೆತು ಕುಡಿದು
ನಂಜ ಕುಪ್ಪಿ ಎತ್ತಿದ-
ಬೋರ ಪಾಲು ಕೇಳಿದ!
ಹಿಂದಿನಿರುಳು ಬೇಟೆಯಲ್ಲಿ
ಕೊಚ್ಚೆ ಹಾರ್ದ ಮೊಲದ ಕಾಲ
ಹಿಡಿದು ತಿಮ್ಮ ಅಂತೆ ತಂದು
ಮಾಂಸ ತುಂಡು ಮಾಡಿ ಕಡೆಗೆ
ಸುಟ್ಟು ಕೂತ ಮಾಂಸವ;
ಸೇಂದಿ ಜತೆಗೆ ರಸವಲ!
ನಂಜ ಒದರಿ ಪಾಲು ಕೇಳೆ
ಹರಕು ಜೇಬು ಮೂಲೆಯಿಂದ,
ಇಲಿಯು ಒಂದು ಬೆನ್ನುಹತ್ತಿ
ಹಾಗೆ ಕೂತು ಹೆಗಲ ಮೇಲೆ
ನೋಡಿ ಆಚೆ ಈಚೆಗೆ;
ಬಿತ್ತು ಹಿಟ್ಟು ಪಾತ್ರಕೆ!
ರಾಗಿ ಮುದ್ದೆ ಇಲಿಯ ಗಾತ್ರ,
ಹಿಟ್ಟೊ ಇಲಿಯೊ ಎಂದು ಬೋರ
ಬೆಪ್ಪು ಹಿಡಿದು ನೋಡುತಿರಲು,
ಹಿಟ್ಟು ಓಡುತ್ತದೆಯೆ-ಎಂದು
ಸಿಡಿದು ಹಾರ್ದ ಇಲಿಯನು
ಓಡಿ ಕಾಡಿ ಕೊಲ್ಲಲು!
ಇಲಿಯು ಹೆಕ್ಕಿ ಮುದ್ದೆಯೊಂದ
ನಂಜನ್ ಕಾಲ ಮಧ್ಯಕ್ಕಾಗಿ
ಓಡೆ-ಅವನು ಬೋರನೆಗಲ
ಹತ್ತಿ ಕೂತು ಗಾಬ್ರಿಯಿಂದ,
ಅಯ್ಯೊ ಇಲಿಯು ಅಂದನು.
ಹಿಟ್ಟು ಹೋಯ್ತೆಂದತ್ತನು!
ತಿಮ್ಮ ಓಡಿ ಓಡಿ ಇಲಿಯ
ಬೆರಸಲಿತ್ತ ಬೋರ ಬಂದು
ಅಲ್ಲೆ ಇದ್ದ ಗುಂಡುಕಲ್ಲ
ಎತ್ತಿ ಓಡ್ದ ಇಲಿಯನಟ್ಟಿ
ಕೊಲ್ವೆನಿಲಿಯನೆನ್ನುತ
ಬಡಿವೆ ತಲೆಗೆಂದೇಳುತ!
ಇತ್ತ ಅತ್ತ ಇಲಿಯ ಸುತ್ತ
ಓಡಿ ದಣಿಯೆ ಬೋರ ತಿಮ್ಮ
ನಂಜ ಅತ್ತ ಕಾಡು ಸುತ್ತಿ
ಆಯ್ದು ತಂದು ದೊಣ್ಣೆ ಒಂದು-
ಇಲಿಯ ತಲೆಗೆ ಬಡಿಯಲು
ಮುದ್ದೆ ಸೇಡು ತೀರ್‍ಸಲು!
ಇಲಿಗೆ ಎಂದು ಬಡಿದ ಪೆಟ್ಟು
ಪಾತ್ರೆ ತಾಗೆ ಹಿಟ್ಟು ಚದರಿ-
ಕುಪ್ಪಿ ಚೂರು ಸಿಡಿದು ಹಾರಿ-
ಹೋಯ್ತೊ ಕಣ್ಣು-ಎಂದು ತಿಮ್ಮ
ಬೊಬ್ಬೆಹಾಕೆ ಇಲಿಯದೊ
ಬಿಲವ ಸರ್‍ರನ್ಹೊಕ್ಕಿತ್ತೊ!
*****