ಅಯ್ಯ ನಾನು ಬಂದ ಭವಾಂತರದಲ್ಲಿ ನೀವು
ಕಡೆ ಹಾಯಿಸಿದಿರೆಂಬುದನರಿಯೆ.
ಕಂಗಳಿಗೆ ಕನ್ನಡಿಯ ತೋರಿದರು.
ನಿಮ್ಮ ಕಾಣದೆ ಇದ್ದೆನಯ್ಯ.
ಅದು ಕಾರಣದಿಂದ ಮನಕೆ
ಪ್ರಾಣವಾಗಿ ಬಂದು ನಿಂದಿರಿ.
ತನುವಿಂಗೆ ರೂಪಾಗಿ ಬಂದು ಸುಳಿದಿರಿ.
ನಿಮ್ಮ ಸುಳುಹ ಕಾಣಲೊಡನೆ
ಎನ್ನ ತನು ಕರಗಿ ಮನ ಮಗ್ನವಾಯಿತ್ತು.
ಎನ್ನ ಮರಣದ ಭಯ ಹಿಂಗಿತ್ತು.
ಎನ್ನ ಕಾಯಗುಣ ಕೆಟ್ಟಿತ್ತು.
ಕರಣಗುಣ ಸುಟ್ಟವು. ಭವವಳಿಯಿತ್ತು.
ಬಯಕೆ ಸವೆಯಿತ್ತು. ಮಹಾದೇವನಾದ
ಶರಣ ಚನ್ನಮಲ್ಲೇಶ್ವರನ ಪಾದವಿಡಿದು,
ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ