ಎಲ್ಲಿ ಹೋದಳು ಕತೀಜ, ನನ್ನ ಮಗಳು
ಮೀನು ತರುತ್ತೇನೆಂದು ಹೋದವಳು
ಬೇಗನೆ ಬರುವೆ ಎಂದವಳು?
ಸಂಜೆಯಾಯಿತು
ಕೊನೆಯ ಬಸ್ಸೂ ಹೊರಟು ಹೋಯಿತು
ಏನು ನೋಡುತ್ತ ನಿಂತಳೊ ಏನೊ-
ಸಂತೆಯ ದೀಪಗಳಲ್ಲಿ
ಹೊಳೆಯುವ ಬಣ್ಣದ ಲಂಗ
ಪೇಟೆಯವರು ಹಾಕುವಂಥ ಚಪ್ಪಲಿ
ಹೊಸ ನಮೂನೆಯ ಬಳೆಗಳು-ಅವಳ ಅಸೆ
ದೊಂಬರಾಟಕ್ಕೆ ಮಾರುಹೋಗುವಳು
ಹೊಸಬರ ಕಂಡರೆ ಬೆರಗಾಗುವಳು
ನಯದ ಮಾತಿಗೆ ಕರಗುವಳು
ಮೀನಿನ ಕೋಪೆ ಹಿಡಿದು ನಿಂತಿರುವಳು
ಎಲ್ಲಿ ಹೋದಳು ಕತೀಜ. ನನ್ನ ಮಗಳು
ಬೇಗನೆ ಬರುವೆ ಎಂದವಳು?
*****