ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ?
ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ?
ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ
ಸತ್ತ ನೀ ಮರಳಿ ಬರಲಿಲ್ಲ!
ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು
ಬಾಲಕರು ಬಂದು ಹರಸಿದರೂ
ಮಾಡಿಟ್ಟ ನೈವೇದ್ಯ ಹಳಸಿದರೂ
ಕೂಗಿದರೂ ಓಗೊಲಿಲ್ಲ
ಪಾತಾಳದಿಂದ ಬಲೀಂದ್ರ ಬರಲಿಲ್ಲ ಮತ್ತಿಲ್ಲಿಗೆ
ಸತ್ತರೆ ಅಜೀರ್ಣದಿಂದ ಇಂದ್ರಾಗ್ನಿ ವರುಣರು ಮತ್ತೆ ಹುಟ್ಟಲಿಲ್ಲ
ಈ ಬ್ರಹ್ಮವಿಷ್ಣುರುದ್ರರೂ ವಯೋವೃದ್ಧರಾಗಿ ಮನುಷ್ಯ
ಜನಾಂಗ ಸ್ವರ್ಗದ ಸಂಪರ್ಕ ಕಳೆದಾಗ
ಸ್ವಂತ ಭೂಖಂಡವೂ ಕತ್ತಲೆಯ ಅಭೇದ್ಯ ಖಂಡ
ಅರ್ಥ ಚ್ಯುತಿಗೊಂಡ ಭಾಷೆ ಬರೇ ಗೊಂದಲಗೇರಿ ಸದ್ದುಗದ್ದಲದ
ಸುತ್ತು ಮುಖಗಳ ಮೇಲೆ ಕಿತ್ತರೂ ಬಾರದಂಥ ಅಂಟುಮೌನ
ಅಂತರ್ಮುಖದೊಳಗೆ ಕೂಡ ಅಪರಿಚಿತತ್ವ ಮುಖಾಮುಖಿಯ
ಈ ಹೆಪ್ಪುಗತ್ತಲೆಯಲ್ಲಿ ಹುಡುಕಿದರೆ
ಕ್ಯೂಬ ಬೊಲೀವಿಯಾ ಶೇಗವೇರಾ ಸಹ ದಾಟಿ
ಮತ್ತೆ ಹಿಪ್ಪಿ ಅತಿಮಾನಸಗಳನ್ನೂ ಅತಿಕ್ರಮಿಸಿ
ಅಂತ್ಯಗಳನ್ನೂ ಸೀಮೆಗಳನ್ನೂ ತಿರಸ್ಕರಿಸಿ
ಬೆಳೆದರೆ ಜೀವವಿಕಾಸವಲ್ಲ ಸಾಕ್ಷಾತ್ ಸ್ವಯಂಭೂ
ಸ್ವಂತ ಸನ್ನಿವೇಶಗಳ ತುರ್ತು ಆಶಯಗಳೇ ಮೈತಳೆದು
ನಮ್ಮ ನಾಭಿಕುಹರಗಳಿಂದ ತೊಡೆಗಳಿಂದ ನರಗಳಿಂದ
ಮೈ ಮನಸ್ಸಿನ ಭಾಗವಾಗಿ ನಮ್ಮೆಲ್ಲರ ಸಮಗ್ರ
ಸಂಕೇತವಾಗಿ ಏಳುತ್ತಾರೆ ಎದ್ದು ಸ್ವರ್ಣಗೋಪುರ ಸ್ಥಾಪನೆಗಳ
ಕೆಡವಿ-ಕೆಡವಿದರೆ ಉಸಿರಾಟ-ಉಸಿರಾಡಿದರೆ
ನಮ್ಮ ಬಿಡುಗಡೆ ಬಿಡುಗಡೆಯಲ್ಲಿ ಹೊಸ ಹುಟ್ಟು ಬೆಳವಣಿಗೆ.
*****