ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ
ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ
ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ
ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ
ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು
ಇಳಿದುಕೊಳ್ಳುವುದಕ್ಕೆ ರೂಮು ಆನ್ವೇಷಿಸಿದೆ
ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ
ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ
ನಡೆದು ಆಶ್ರಯಕ್ಕಾಗಿ ತಿರುಗಿ
ಜನಸ್ತೋಮ ರಣಹೋಮ ಘೋಷ ತಿರುಗಿ
ಡಬಲ್ ಡೆಕ್ಕರ್ ಘೋಷ ಟರ್ಮಿನಸ್ ಘೋಷ
ಹಿಪ್ಪಿಯಿಪ್ಪಿ ಹರೇಕೃಷ್ಣ ಸೈರನ್ ಘೋಷ
ಸತ್ಯಾಗ್ರಹ ಸಮರ ಘೋಷ ತಿರುವನಂತಪುರ
ಶ್ರೀ ಪದ್ಮನಾಭ ಮಂತ್ರಘೋಷ
ಮತ್ತೆ ನನ್ನೀ ವೇಷ ಅಸಹಾಯಕ ರೋಷ
ದಾಮರಿನಂತೆ ಕುದಿದು ರೋಷ
ಚಪ್ಪಡಿಗಳೆಡೆಯಿಂದ ಬೊಕ್ಕೆ ಏಳುತ್ತಾ ಚಪ್ಪಡಿಗಳೆಡೆಯಿಂದ
ಇಂಗಿ ಹೋಗುತ್ತಾ ಹೋದೆ ತಿರುಗಿ
ವರ್ಷಗಳ ಹಿಂದೆ ಇದೇ ಬೀದಿಗಳಲ್ಲಿ ನಡೆದಿದ್ದೆ ಹೀಗೆ
ಇದೇ ಬೀದಿಗಳಲ್ಲಿ ಪಾರ್ಕುಗಳಲ್ಲಿ ಬೀದಿಗಳಲ್ಲಿ ಹೋಟೆಲುಗಳಲ್ಲಿ
ಬೀದಿಗಳಲ್ಲಿ ಅಂಗಡಿಗಳಲ್ಲಿ ಬೀದಿಗಳಲ್ಲಿ ಬೀದಿಗಳಲ್ಲಿ
ನಡೆದಿದ್ದೆ ನಡೆದಿದ್ದರೂ ವ್ಯವಹರಿಸಿದ್ದರೂ
ಪರಿಚಯ ಅನಿಸಿದ್ದರೂ ಈ
ಮೂಲ ಕಣಗಳು ಆಗಂತುಕವಾಗಿ ಬಿದ್ದಿದ್ದಾವೆ ಈಗ ಕಣ
ಕಣಗಳೂ ಎಂದಾಗ ಈ ತಿರುವ
ನಂತಪುರ ನಂತಪುರ ನಂತಪುರನಗರ ನಂತಪುರ ನಗರ
ದೀರ್ಘ ಉದ್ದಗಲ ವಾಲುತ್ತಾ
ನನ್ನೆಡೆಗೆ ಹರಿಯುತ್ತಿದೆ ಎಂದಾಗ
ಕಾಲು ಕುಸಿಯುತ್ತಿದೆ.
*****