೧
ಕಟ್ಟಿ ಜರತಾರಿ ಕಚ್ಚೆ ಸೊಂಟದ ಪಟ್ಟಿ ಗೆಜ್ಜೆ ಅಭ್ರಕದ ಮಿಂಚು
ಬಣ್ಣ ಬಳಿದಾಟ ಕಿರೀಟ ವೇಷ ಈ ಮಜಬೂತು ಶೃಂಗಾರ
ತೇಗಿ ಢರ್ರನೆ ಸೋಮರಸ ಅಹಹ ತನ್ನಿರೋ ಖಡ್ಗ
ಬಡಿಯಿರೋ ಚಂಡೆ ಜಾಗಟೆ ಭೇರಿ ಚೌಕಿಯಿಂದೆದ್ದು ಹೊರಟು ಸವಾರಿ
ರಂಗಸ್ಥಳಕ್ಕೆ ಒತ್ತರಿಸಿ ಸೆರೆ ಸೀರೆ ಒಡ್ಡೋಲಗ ಸಮೆದು
ವಿಜೃಂಭಿಸಿದ ಅಟ್ಟಹಾಸ ಆಹಾ! ಭಳಿರೇ ಬಂದಂಥ ಕಾರ್ಯ?
ಹೇಳಲೇ? ಹೇಳದೆ ಇರಲೆ? ಪ್ರತಿಮೆಗಳಿಂದ ಅಥವ
ಮುದ್ರೆಗಳಿಂದ ಅಥವ ಗೆಜ್ಜೆ ಕಾಲುಗಳಿಂದ ಧ್ವನಿಸಲೇ?
ತಡವರಿಸುತ್ತಿದ್ದೇವೆ ಮಾತುಗಳಿಗಾಗಿ ಅರ್ಥಗಳಿಗಾಗಿ
ಆದರೂ ಕೇಳಿರಯ್ಯಾ ಭಾಗವತರೆ ಬಂದಂಥ ಕಾರ್ಯ.
ಹುಟ್ಟಿದ್ದು ಹೊಲೆಯೂರು ಮನೆಮಾಡಿದ್ದು ಸಂತೆಯೊಳಗಯ್ಯಾ ನಾವು
ಗೆದ್ದದ್ದು ಹಸ್ತಿನಾವತಿ ಗೆದ್ದು ಒಂದೊಂದೇ ಸಾಲಭಂಜಿಕೆಗಳಿಗೆ ಉತ್ತರಿಸಿ
ಗೆದ್ದು ಸಿಂಹಾಸನವೇರಿ ಕುಳಿತು ಕೊಟ್ಟು ಒಡ್ಡೋಲಗವ ನಾವು
ಯಾರಲ್ಲಿ ಎಂದರೆ ಎಂದು ನೋಡಿದರೆ ನೋಡಿದರೆ ಉದ್ದಗಲ
ಖಾಲಿ ಮಹಾಲು ಮುಚ್ಚಿರುವ ಬಾಗಿಲುಗಳು ಬಿಚ್ಚುತ್ತಿರುವ ಶೂನ್ಯ
ಮೇಖಲೆಗಳು ಹಾಗೂ ಹಾಳು ಬಿದ್ದ ಪಾಳೆಯಗಳಷ್ಟೇ ಮುರಿದು
ಬಿದ್ದ ಕೋಟೆಗಳಷ್ಟೇ ಕತೆ ಹೇಳುವ ಮುದುಕರೂ ಒಲೆಯ ಬಳಿ
ಹೂಂಗುಟ್ಟುವ ಹುಡುಗರೂ ಕತೆಕತೆ ಕಾಂಚಣ ಕುಡುತೇ ಲೆಕ್ಕಣ
ಹಾನೇಲಿಕ್ಕಣ ಡಿಕ್ಕಣಡೀರಣ ಮೈ ನವಿರೆಬ್ಬಿಸುವ ಕತೆ
ಗೋಡೆಗಳಲ್ಲಿ ಬರೆದ ಚಿತ್ರಗಳೂ ಹೇಳುತ್ತವೆ ಮಾತನಾಡುವ ಬೊಂಬೆಗಳೂ
ಹೇಳುತ್ತವೆ ಈ ಶೂನ್ಯ ದರ್ಬಾರಿನ ಸಿಂಹಾಸನದ ಮೇಲೆ ಮಾತ್ರ
ಅದು ಬೇರೆಯೇ ಕತೆ ಬೇಸರದ ದೀರ್ಘ ಕತೆ
ಮೂಕ ಸಂಜ್ಞೆಗಳ ಎದುರು ತಲೆತಗ್ಗಿಸುತ್ತೇನೆ ಅಸ್ವಸ್ಥ
ದಿಢೀರನೆ ಏಳುತ್ತೇನೆ ಛತ್ರಚಾಮರ ತೇಜಿಗಳ ಬಿಟ್ಟು ಹೊರ
ಬರುತ್ತೇನೆ ಈ ನಿರ್ಜನ ಬೀದಿಗಳಲ್ಲಿ ಅಲೆಯುತ್ತೇನೆ ಹುಡುಕುತ್ತೇನೆ
ಇಲ್ಲಿ ಇದ್ದವರು ಎದ್ದು ಹೋದಂತೆ ಅರ್ಧದಲ್ಲೇ ಎದ್ದು ಹೋದವರು
ಹೋದಲ್ಲೆ ಒಲೆಯ ಮೇಲಿಟ್ಟ ಮಡಕೆಗಳು ಇಟ್ಟಲ್ಲೆ ಚೂರು
ಉಳಿಕೆಗಳ ಅಳಿಕೆಗಳ ಮೌನಗಳು ಬಾವಲಿಗಳಂತೆ
ಸುಳಿದಾಡುತ್ತಿವೆ ಮತ್ತು ಇಲ್ಲಿ ಭಾರವಾದ ಹೆಜ್ಜೆಗಳ ಸಪ್ಪಳವುಂಟು
ಎದುರುಗತ್ತಲೆಗೆ ಎಲ್ಲಿಂದಲೋ ಎದ್ದು ನೆರಳುಗಳುಂಟು
ಬಿದ್ದ ಗೋಡೆಗಳ ಮರೆಗೆ ಹುಡುಕುವಂತೆ ನಿಷ್ಠುರವಾಗಿ
ಯಾರು ಯಾರನ್ನೋ ಹುಡುಕುವಂತೆ
ಇಲ್ಲಿ ದಿಬ್ಬಗಳು ಎದ್ದಿದ್ದಾವೆ ಮಣ್ಣ ವಿಸ್ತಾರದಲ್ಲಿ ಎತ್ತರಗಳು
ಬಿದ್ದಿದ್ದಾವೆ ಅಸ್ಥಿಗಳು ಮಲಗಿದ್ದಾವೆ ಆತ್ಮಗಳು ತೂಕಡಿಸುತ್ತಿದ್ದಾವೆ
ಇಲ್ಲಿ ಹಿಂದೆ ರಣ ಹದ್ದುಗಳು ವರ್ತುಲವಾಗಿ ದಪ್ಪ ರೆಕ್ಕೆ ಬಡಿದು
ಹಾರಾಡುತ್ತಾ ಬಂದಿಳಿದು ಕುಕ್ಕಿ ಕೂಗಿ ಹಾರಿಹೋಗಿದ್ದವು ಆಕಾಶದಲ್ಲಿ
ಮತ್ತು ಶ್ವಾನಗಳು ಕಚ್ಚಾಡಿ ತಿಂದು ಹೋದ ಮೇಲೆ ಇರುಳೂ
ಅಳಿದುಳಿದ ಮಾಂಸದ ವಾಸನೆಗೆ ನರಿಗಳ ಹಿಂಡು ಬಂದು ಕೆದಕಿ
ಆಕಾಶಕ್ಕೆ ಮುಖಮಾಡಿ ಊಳಿಟ್ಟು ಹೋಗಿದ್ದವು ಆಮೇಲೆ
ನೊಣಗಳು ಕುಳಿತು ಹುಳುಗಳೂ ಹುಟ್ಟಿ ಎರೆಹುಳುಗಳೂ ಎದ್ದು
ಮಣ್ಣೆಬ್ಬಿಸಿದವು ಅವಸಾನ ದಿಬ್ಬಗಳು ಮೂಡಿದವು
ಮತ್ತೊಮ್ಮೆ ಪೃಥು ಹುಟ್ಟುವುದಿಲ್ಲ ಪರಶು ತೋಡಿ ತುಂಬಿದ
ರಕ್ತ ಭಾವಿಗಳಿಗೆ ನಿರರ್ಥಕ ಆರ್ಘ್ಯ ಸಂದು ಬತ್ತಿ ಆವರ್ತಿಸಿದ
ವಸಂತಕ್ಕೂ ಬಂಜೆಭೂಮಿ ಕುರುಕ್ಷೇತ್ರ ಇದು ಯಾತರ ಸಾಕ್ಷ್ಯ ಚಿತ್ರ?
ಶಬ್ದಗಳೆ ಪ್ರತಿಮೆಗಳೆ ಪ್ರತೀಕಗಳೆ ಬನ್ನಿ ಧ್ವನಿಗಳೇ ಬನ್ನಿ ಮೂಡಿಸಿರಿ
ಬಿದ್ದ ಈ ಹೋರಿಯ ಈ ಕುದುರೆಯ ಈ ಮಾನವನ ಈ
ಭಗ್ನಾವಶೇಷ ಅಸ್ತವ್ಯಸ್ತದಲ್ಲಿ ನಿಂತ ಹೆಣ್ಣಿನ
ಮಣ್ಣಿನ ರಕ್ತದ ಕ್ರೌರ್ಯದಲ್ಲಿ ಬಿಟ್ಟ ಕಲೆಯ ಅರ್ಥ
ಶಬ್ದಗಳೆ ಪ್ರತಿಮೆಗಳೆ ಪ್ರತೀಕಗಳೆ ಪ್ರತಿಧ್ವನಿಗಳೇ
ನನ್ನ ಧ್ವನಿಗಳೇ ಬನ್ನಿ
೨
ನಗರದ ಹೊರಬಾಗಿಲಿಗೆ ಬೆನ್ನುಹಾಕಿ ಕೊನೆಗೊಮ್ಮೆ ನಾವು ಹೊರಟೆವು
ರೋದನದ ಶಬ್ದ ಹಿಂದೆ ಕಂದಕ ಬಿರಿದ ಶಬ್ದ ದೂರಕ್ಕೆ ಮಸಳಿಸಿ
ಕಾಲಾಂತರದಲ್ಲಿ ನಮ್ಮ ಚಪ್ಪಲಿಯ ಶಬ್ದವೊಂದೇ ಉಳಿದಂತೆ ನಮ್ಮೊಡನೆ
ಉಳಿದ ನೆನಪೂ ಅಳಿದಂತೆ ಒಂದು ಯುಗ ಕೊನೆಗೊಂಡಂತೆ ಅನಿಸಿತು
ಹೀಗೆ ಶೈವಲಿನಿಯ ದಾಟಿದೆವು ಪೂರ್ವ ದಕ್ಷಿಣ ಸಮುದ್ರಗಳಲ್ಲಿ ಮಿಂದು
ಪ್ರದಕ್ಷಿಣಾಕಾರದಲ್ಲಿ ಬಡಗು ದಿಕ್ಕಿಗೆ ತಿರುಗಿ ಅಡವಿಗಳನದ್ರಿಗಳ ಪೊಡವಿಗಳ
ಕಳೆದು ಸಾಗಿದೆವು ಮುಂದೆ ಬೆಂಗಾಡು ಬಿಚ್ಚಿಕೊಂಡಂತೆ ಸುತ್ತಲೂ
ಉಸುಬಿನಲ್ಲಿ ಕುಸಿದು ಸೋತ ಕಾಲುಗಳನ್ನು ಎಳೆದಂತೆ ಸೋಲೊಪ್ಪದೆ ಮುಂದೆ
ನಡೆದಂತೆ ಮೆಲ್ಲಗೆ ದಿಗಂತಗಳು ದೂರಕ್ಕೆ ಸರಿದಾಗ ಹೊಸ
ಪ್ರಕಾರಗಳು ಎದ್ದಾಗ ಹೆಜ್ಜೆಗಳ ಹುಡುಕಿದಾಗ ಇಲ್ಲಿ ಯಾರೂ
ನಡೆದಿಲ್ಲ ನಡೆದರೂ ದಾರಿಗುರುತು ಬಿಟ್ಟಿಲ್ಲ ಅಥವ ಬಿರುಗಾಳಿಯ ಕೆಳಗೆ
ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ಮರಳುದಿಣ್ಣೆಭಾವಿಗಳ ಈ ಮರುಭೂಮಿಯಲ್ಲಿ
ಹೆಜ್ಜೆ ಮೂಡುವುದೆ ಇಲ್ಲ ಯಾರೂ ಬಿಟ್ಟು ಹೋಗುವುದಿಲ್ಲ ಚರಿತ್ರೆ
ಆದರೂ ಸುತ್ತಿದೆವು ಈ ಹರಹಿನಲ್ಲಿ ದೃಷ್ಟಿ ಮಾಯುವ ತನಕ
ಕೊನೆ ಮುಟ್ಟಿತೇ ಅಥವ ಹೊರಟಲ್ಲಿಗೇ ಬಂದು ತಲುಪಿತೇ ದಾರಿ ತಪ್ಪಿತೇ
ಎಂಭ ಭ್ರಮೆಯಲ್ಲಿ ಸುತ್ತಿದೆವು ಅಂತೂ ನಡೆದೆವು ದಾರಿ
ದಾರಿ ಸಾಗದಿದ್ದರು ಕೂಡ ದಾರಿ ಇಲ್ಲದಿದ್ದರು ಕೂಡ
ಧ್ವನಿ ಪ್ರತಿಧ್ವನಿ ಮೂಡದ ನೆರಳು ಬೀಳದ ಕೇಳದ ಕಾಣದ ಹರಹಿಗೆ
ಮಧ್ಯವೇ ಅಂಚೇ ಇಲ್ಲದ ಇಲ್ಲಿ ಕೊನೆಗೊಮ್ಮೆ ತಿರುಗಿದಾಗ ಸಂಶಯದಿಂದ
ಬೆನ್ನಿಗೆ ಸುತ್ತ ಸುತ್ತಿದಾಗಲೂ ಒಂಟಿಯಾಗಿಬಿಟ್ಟು ತಪ್ಪಿಸಿಕೊಂಡಂತೆ
ಹಿಂದೆ ಐದು ಜನ ಅನುಸರಿಸಿದಂತೆ ತೋರಿತ್ತು ದಾರಿಯುದ್ದಕ್ಕೂ
ಹೂಂಗುಟ್ಟಿದಂತೆ ಜತೆಗಿದ್ದಂತೆ ಅನಿಸಿದ್ದು ಹುಸಿಯಾಗಿ ಈಗ
ಒಬ್ಬನೇ ಉಳಿದು ಅಥವ ಒಬ್ಬನನ್ನೇ ತ್ಯಜಿಸಿ ಅನಾಥನಾಗಿ
ಒಬ್ಬನೇ ಉಳಿದರೆ ಎಂದರೆ ಈ ಹಿಂದೆ ಕಂಡದ್ದು ಕೇಳಿದ್ದು
ಭ್ರಮೆಯಾದರೆ ಭವಿಷ್ಯವೂ ಈ ಉಳಿವಿಗೂ ಅಳಿವಿಗೂ ಅನಿಸಿಕೆಗೂ
ಭ್ರಮೆಯಲ್ಲದೆ ಬೇರೆ ಅಸ್ತಿತ್ವ ಇರದಿದ್ದರೆ ಈ ಬದುಕು ಶತ ಛಿದ್ರ
ಕುಂಭದ ಕತೆಯಾದರೆ ಈ ಆನ್ವೇಷಣೆ ಸಿಸಿಫಸನ ಕಥೆಯಾದರೆ
ಇದರ ತೊಡಗುವಿಕೆಯ ಸಮರ್ಥನೆಯೇನು?
ಇದೆಲ್ಲದರ ಅರ್ಥವೇನು? ಯಕ್ಷ! ನೀನೇ ಹೇಳು.
೩
ಪದರಗಳಲ್ಲಿ ಸರಿದಾಡಿ ಸುಷುಪ್ತಿಯಲ್ಲಿ ತಡಕಾಡಿ ವ್ಯರ್ಥ
ಯಾಕೆಂದು ಕೇಳಿ ಕೇಳದೇ ಬೇಸತ್ತು ತಿಳಿದು ತಿಳಿಯದೇ ನೋಡಿ
ನೋಡದೇ ಅನುಭವಿಸಿ ಅನುಭವಿಸದೇ ಘಾತ ಸ್ವಂತಕ್ಕೆ ಬೀಳದೇ
ವಸ್ತು ಸ್ಥಲ ವೇಗ ನಿರಂತರ ಸಂಘರ್ಷ ಸೈಖೆಡೆಲಿಕ್ ಸಹಸ್ರಾರದಲ್ಲಿ
ಹೊಸ ಶಬ್ದಗಳ ಚಂಡೆ ಮದ್ದಳೆ ಮೇಳ ವಿವರ್ಣ ಯಕ್ಷಗಾನ ಕರಾಳ
ವೇಷ ರಾಳದ ಬೆಂಕಿವೃತ್ತನತ್ತದಲ್ಲಿ ಸುತ್ತುವುದು ಇದು
ಕೊರಕಲು ದಂಡೆಯರೆಗೆ ಪ್ರಶ್ನಾರ್ಥಕ ಜೋತು ಹಳೆ ವಠಾರದ
ವಿಷವೃತ್ತಿಬಂದಿ ಉತ್ತರಾಯಣಕ್ಕೆ ಕಾಯುತ್ತ ಕೊಳೆವ ಮೊಂಡು
ಕಾಸಶ್ವಾಸಿ ಅಜಗರಯುಗಕ್ಕಿಂತ ಈಚಿನ ಇಂದಿನ ಜರೂರು
ಮಹಾಪ್ರಸ್ಥಾನ ಇನ್ನು ನಿರಂತರ ಯಾನ ಎಂದೆ ಪ್ರವರ್ಧಮಾನ
ಈತ ಉದ್ದಂಡ ಎದ್ದ ಎದ್ದು ಬೆನ್ನಹಿಂದೆ ಕತ್ತಲಿನಲ್ಲಿ ಕುರುಕ್ಷೇತ್ರಗಳ
ಶವಗಳ ಗುಪ್ಪೆ ಮೇದಸ್ಸು ಕರಗುವುದು ಕಂಡ ಕರಗಿ ಚಟ್ಟದಿಂಗಾಳು
ಅಸ್ಥಿಹೋಳು ಸ್ವಯಂಪ್ರಭೆ ನಿಷ್ಪ್ರಭೆಯಾಗುವುದು ಕಂಡ
ನಿಷ್ಪ್ರಭೆಯಾಗಿ ಗುಡಿಗೋಪುರಗಳ ಬಂಗಾರ ಶಿಖರ ಬೀಳುವುದು ಕಂಡ
ಬಿದ್ದು ಅಪರಿಚಿತತ್ವ ಪೂರ್ಣಗೊಂಡು ಬರೇ ಸ್ಮೃತಿಯಲ್ಲಿ ಸಹಾ
ಸಂಪರ್ಕ ಖಂಡತುಂಡು ಇನ್ನೆಂದಿಗೂ ಎಂದೆ ಮುಂದಕ್ಕೆ
ಈ ಕಾಡುಮೇಡುಗಳ ಕತ್ತಲೆಬೆಳಕುಗಳ ತಮಸ್ರ ಸ್ವರ್ಗಗಳ
ಈ ವೈತರಣಿಗಳ ವಿಸ್ತಾರಗಳ ಆಳಗಳ ಹುಡುಕುತ್ತ
ಹುಡುಕುವಿಕೆಯಲ್ಲಿ ತನ್ನ ತೊಡಗಿಸಿಕೊಂಡು ಹುಡುಕುತ್ತಿರುವಂತೆ
ಸರಿಯುತ್ತಿರುವ ದಿಗಂತಗಳ ಎದುರಿನಲ್ಲಿ ಎಕಾಕಿ ಅಸಂಖ್ಯ ಮನಸ್ಸಾಕ್ಷಿ.
*****