ಗುರ್….. ಟೈಗರ್
ಎಂಬ ಹೆಸರಿನಲೆ ಒಂದು ಕಾವ್ಯವಿದೆ.
ಆದ್ದರಿಂದ
ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು.
ಇವರಿಗೆಲ್ಲ ಏರಿದೆ ಏನೋ ಮತ್ತು
ಬೊಗಳಬೇಕು ಒಂದು ಭಾಷಣ
ಪರ್ವತದಿಂದ ಕ್ರೈಸ್ತನ ಹಾಗೆ
ನಾನು ಟೈಗರ್ ಎಂಬ ರಾಜನಾಯಿ
ಎಲ್ಲರೂ ಆಗಿ ನನ್ನ ಅನುಯಾಯಿ
ಈ ಕ್ಷಣ
ಭಾಕ್ಷಣ
ಅರೆ! ಎಂತಹ ನಾಜೂಕು ಪ್ರಾಸ!
ಟೈಗರ್ ವೇದವ್ಯಾಸ
ಹರಿಸುತ್ತೇನೆ ಕಾವ್ಯ
ಛೇ ಇದೇಕೆ ಹೀಗೆ ಜೊಲ್ಲು?
ಕಾವ್ಯಕ್ಕಿಷ್ಟು ಬೆಂಕಿ
ಈಗ ಬೇಕಾದ್ದು ಓಟ
ಒಲಂಪಿಕ್ ರೇಸು
ಇದು ರೇಸಿನ ಯುಗ
ಎಲ್ಲ ಸೂಪರ್ ಸಾನಿಕ್
ನಿಂತಲ್ಲಿ ನಿಲ್ಲದೆ ಓಟ
ಹಾಯಾಗಿ ಕಾಲೆತ್ತಿ ಮೂತ್ರ
ಮಾಡುವುದಕ್ಕೂ ಇಲ್ಲ ಪುರುಸತ್ತು
ಇದು ಆಧುನಿಕ ಜಗತ್ತು
ಅರೆ! ಇದೇನು
ಓಡುವಾಗಲೂ ಏಳುವುದಿಲ್ಲ ಲಾಂಗೂಲ?
ಪ್ರಕೃತಿಗೆ ಬಂದಿದೆ ಟೈಫಾಯ್ಡ್ ಜ್ವರ
ಇಲ್ಲದಿದ್ದರೆ ಏಕೆ ಈ ಅವ್ಯವಸ್ಥೆ, ಅಶಿಸ್ತು?
ರುಮ್ಮನೆ ತಿರುಗುತಿದೆ ಪ್ರಪಂಚೆ
ಭಟ್ಟರ ಬ್ರಹ್ಮಾಂಡ ಪಂಚೆ
ಹೀಗಿರಲಿಲ್ಲ ಮುಂಚೆ
ಓಡುವಾಗೆಲ್ಲ ಏಳುತಿತ್ತು ಬಾಲ
ಬೇಕೆಂದಾಗ ಕೂಡ
ಈ ಟೈಗರಿನ ಬಾಲ
ಹರಿಯುತಿದೆ ಜೊಲ್ಲು
ಎಸೆಯುತಿದಾರೆ ಕಲ್ಲು
ಹರಿವಾಗಿದೆ ಹಲ್ಲು
ಆ ಮೇಲೆ ? ಆಮೇಲೆ?
ಥತ್ ಹಾಳಾಯಿತು ಪ್ರಾಸ.
ಡೆನ್ಮಾರ್ಕ್ ಎಂಬ ಕುಂಬಳಕಾಯಿ
ಕೊಳೆತು ನಾರುತ್ತಿದೆ
ನೊಣ ನೊಣ ನೊಣ
ಯಾಕೆ ಬರುತಾವೆ ಹೀಗೆ?
ನಾನೇನು ಹೆಣವೋ?
ಸಾತ್ವ್ರವೇ ಹೇಳಬೇಕಷ್ಟೆ.
ಛೇ! ನಾನಾರ ಲಾಂಗೂಲವೂ ಆಗಲೊಲ್ಲೆ
ನಾ ಹುಟ್ಟಿದಾಗ ಆತನೂ ಹುಟ್ಟಿದ
ನಾನು ಸತ್ತಾಗ ಆತನೂ ಸತ್ತ
ನಾತ ನಾತ
ಆತನ ಮುಖಕ್ಕೂ ಬರುತ್ತಾ ಇವೆ ನೊಣ
ಈ ಜಗತ್ತಿಗೆ ನಾನು ಕೊಟ್ಟಿದ್ದೆ ಅರ್ಥ
ಅನ್ನುತ್ತೇನೆ ನಾನು
ಇದೆಲ್ಲ ವ್ಯರ್ಥ
ಆದರೂ ಈ ಜಗತ್ತಿನ
ಹುಚ್ಚಿನಲು ಒಂದು ಕ್ರಮ ಉಂಟು
A method there is
ನಾನು ಹ್ಯಾಮ್ಲೆಟ್ಟು
ಕೆಂಪಗೆ ಕಾದ ಕಾವಲಿಯಲ್ಲಿ ಯಾರೋ ಎರೆದು
ಮರೆತೇ ಹೋದ
ಆಮ್ಲೆಟ್ಟು ನಾನು ಹ್ಯಾಮ್ಲೆಟ್ಟು ನಾನು ಆಮ್ಲೆಟ್ಟು
ನಾನು ಹ್ಯಾಮ್ಲೆಟ್ಟು…..
*****