ಕೈ ಕಾಲು ಕಟ್ಟಿ ಹಾಕಿ
ದೇಹದೊಂದಿಂಚೂ
ಹೊಸಗಾಳಿಗೆ, ಹೊಸ ಬೆಳಕಿಗೆ
ಸೋಕದಂತೆ ಮುಸುಕೆಳೆದು
ಕೂರಿಸಿ
ಎಷ್ಟೊಂದು ದಿನಕಳೆದವೋ
ಕೂತಲ್ಲೇ ಕೆಟ್ಟು!
ಸಮುದ್ರದ ಅದದೇ ಅಲೆಗಳೂ
ವ್ಯರ್ಥ ದಂಡೆಗಪ್ಪಳಿಸಿ
ಹಿಂದಿರುಗುವಂತೆ
ಅದದೇ ನಿಟ್ಟುಸಿರು
ಮತ್ತೆ ಮತ್ತೆ ಉಸಿರಾಡಿ
ಇತ್ತೀಚೆಗೆ,
ಬೆಳಕು ಕಗ್ಗತ್ತಲಿನೊಡೆನೆ
ಚಿನ್ನಾಟವಾಡಿ, ಅಲ್ಲಲ್ಲ ಹೋರಾಡಿ
ಬದುಕೆಂದರೆ ಕತ್ತಲಲಿ ನಿಶ್ಶಬ್ಧ
ಉಸಿರಾಡು ಮೋಡಿ!
ಬೆಳಕು ಸೂಸುವ
ಶಕ್ತ ಕಣ್ಬೆಳಕಿನ ಕಿಡಿ
ನಿರಂತರ ಸಿಡಿದೋ ಏನೋ
ಮುಸುಗಿಗೀಗ ಒಂದೋ, ಎರಡೋ
ಸಣ್ಣ ತೂತು!
ನಾಳೆಗಾಗಬಹುದು ಮತ್ತಷ್ಟು ಹೊಸತು!
ಕೊನೆಗೊಮ್ಮೆ,
ಮುಸುಗು ಹರಿಯಬಹುದು
ಬಂಧನ ಕಡಿಯಬಹುದು
ಹೊಸಗಾಳಿಗೆ, ಹೊಸ ಬೆಳಕಿಗೆ
ಮೈಯೊಡ್ಡಬಹುದು
ನಾಳಿನ ಭವ್ಯ ಭವಿತವ್ಯಕೆ
ಇಂದಿನೀ ಕಲ್ಲು ಅಡಿಪಾಯಕ್ಕೆ!
*****