ಯಾಕೆ ಚುಚ್ಚುತ್ತವೋ ಹೀಗೆ
ಹೋದೆಡೆ ಬಂದೆಡೆ ಎಲ್ಲಾ
ಈ ಸೂಜಿಗಳು
ಅಂಗಾತ ಮಲಗಿದಾಗ ಹೊಟ್ಟೆಗೆ
ಬೋರಲಾದಾಗ ಬೆನ್ನಿಗೆ
ಆಸೆ-ಕನಸುಗಳ
ಬೆಲೂನಿಗೆ ಗಾಳಿ ತುಂಬಿ ಎತ್ತರೆತ್ತರಕ್ಕೆ
ಹಾರುವಾಗ ಫಕ್ಕನೆ ಚುಚ್ಚಿ
ಸೂಜಿ, ಅಟ್ಟಹಾಸಗೈಯುವಾಗ
ಜೀವ ಕಳೆದುಕೊಂಡ
ಬೆಲೂನು ತೊಪ್ಪೆಯಾಗಿ
ನೆಲಕ್ಕೆ ಕವುಚಿ ಬಿಕ್ಕುತ್ತವೆ
ಸೂಜಿ ಚುಚ್ಚಿದೆಡೆಯೆಲ್ಲಾ
ದುರ್ಗಂಧ ಬೀರುವ
ಭಯಂಕರ ವ್ರಣಗಳ ಸಾಲು!
ಪರಚಿಕೊಂಡರೂ ಕಿರುಚಿಕೊಂಡರೂ
ಒಳಗೆಲ್ಲೋ ನಿರಂತರ
ಚುಚ್ಚುವಿಕೆಯ ಅನಿಸಿಕೆ
ಮೇಲೆ ಸುಂದರವಾಗಿ
ಒಳಗೇ ಹುಳ ತಿಂದು
ಟೊಳ್ಳಾದ ಹಣ್ಣಿನಂತೆ
ಒಳಗಿನ ಈ ಚಡಪಡಿಕೆ
ಕಣ್ಗೆ ಕಾಣದ ಆ ಸೂಜಿ ಮೊನೆ
ಮುರಿದು ಬಿಡಲೇ ಎಂಬ ತಹತಹಿಕೆ!
ಚುಚ್ಚುವಿಕೆಯ ನೋವುಗಳ
ಸಹಿಸದೇ ಕಣ್‌ಕತ್ತಲಿಟ್ಟು
ಗುರಿಯೂ ಕಾಣದೇ ದಾರಿಯೂ ಸಾಗದೇ
ದಿನವೂ ಇಂಚಿಂಚು ಸತ್ತಂತೆ!
*****