ಶತಶತಮಾನಗಳಿಂದ
ನಿನಗ ‘ಅವಳು’
ಅರ್ಥವಾದದ್ದೆಷ್ಟು?
ಬರೀ ಇಷ್ಟೇ ಇಷ್ಟು!
ಸಾಕಪ್ಪ ಸಾಕು ನಿನ್ನೀ
ಕಾಗಕ್ಕ-ಗುಬ್ಬಕ್ಕನ ಕಥೆ
‘ಅವಳ’ ಅಂಗಾಂಗ ವರ್ಣಿಸುತ್ತಾ
ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ
ಅಡ್ಡಹಾದಿಗೆಳೆವ ರಸಿಕತೆ!
ಆ ಸಂಸ್ಕೃತ ಕವಿಗಳ ಅಪರಾವತಾರ
ಹೇಳಿದ್ದೇ ಪರಾಕು
ಮತ್ತೆ ಮತ್ತೆ ಹೇಳುವ ಶೂರ!
ನೀ ಏನೇ ಹೇಳು
ಎರಡೆರಡಲಿ ನಾಲ್ಕು
ಆಗುತ್ತದೆಯೇ ಹದಿನಾಲ್ಕು?
ಹತ್ತಾರು ಗೋಡೆಗೆ ಒಂದೇ ಮಾಡು
ನೂರಾರು ಕಡ್ಡಿಗಳ ಹಿಡಿದಿಟ್ಟಿದೆ
ಪೊರಕೆಯೊಂದರ ನೂಲು
ಕಾಣುವ ಮುಖವೊಂದಕ್ಕೆ
ಕಾಣದ ಭಾವಗಳೆನಿತೋ
ಬಲ್ಲವರು ಯಾರು?
ತಿರುಳು ಬಿಟ್ಟು ಕರಟ ಹೆರೆವ
ನಿನ್ನ ಈ ಪರಿಗೆ ನಗಲೇ?
ಅಳಲೇ?
ಶತಶತಮಾನಗಳಿಂದ ನಿನಗೆ ‘ಅವಳು’
ಅರ್ಥವಾದದ್ದೆಷ್ಟು?
ಬರೀ ಇಷ್ಟೇ ಇಷ್ಟು!
ಒಮ್ಮೆ ಕಣ್ಮುಚ್ಚಿ ಮನವ ತೆರೆದಿಡು
‘ಖುಲ್ ಜ್ಹಾ ಸಿಮ್ ಸಿಮ್’ ಹಾಡು
ನಿಜಕ್ಕೂ ಧೈರ್ಯವಿದ್ದರೆ
ಆಳದಲ್ಲೇ ಹುದುಗಿ ಹೋದ
‘ಅವಳ’ ಭಾವಗಳ ಅರ್ಥೈಸಲು ನೋಡು!
*****