ಅವರಿವರ ಕೈಜಾರಿ
ಇಟ್ಟಿಗೆ ಬಿದ್ದಲ್ಲೆಲ್ಲಾ
ಧುತ್ತನೆ ಎದ್ದು ನಿಂತ
ನನಗೆ ನಾನೇ ನಿರ್ಮಿಸಿಕೊಂಡ
ಎತ್ತರೆತ್ತರ ಗೋಡೆಗಳು
ನಿಜ ಮುಖ ತೋರದ
ಮುಸುಗುಗಳು!
ಗೋಡೆ ಮೇಲೊಂದು ಗೋಡೆ
ಕಿರಿಗೋಡೆ, ಮರಿಗೋಡೆ
ಬಾನಿನೆತ್ತರಕ್ಕೆ ಏರಿನಿಂತ
ಹಿರಿಗೋಡೆಗಳು!
ನನಗೆ ನಾನೇ ಕಟ್ಟಿಕೊಂಡ
ಪದರು ಪದರು
ರೇಷ್ಮೆ ಗೂಡುಗಳು!
ಒಂದಕ್ಕಿಂತಾ ಇನ್ನೊಂದು
ಸುಂದರ ಗೋಡೆಗಳು
ಶಿಲ್ಪವೇನು? ಕಲೆಯೇನು?
ಸೂಕ್ಷ್ಮಕುಸುರಿ ಕೆತ್ತನೆಯೇನು?
ನನ್ನದೇ ಕೈಚಳಕ!
ನೆನೆದೊಡನೆ ಮೈ ಪುಳಕ
ಜೀವಮಾನವೇ ಬೆರಗು
ನನಗೆ ನಾನು!
ನನ್ನ ನೈಪುಣ್ಯಕ್ಕೆ
ನಾನೇ ತಲೆಬಾಗಿ
ನಾ ಕಟ್ಟಿದ ಗೋಡೆಗಳೇ
ನನ್ನ ಉಸಿರಾಗಿ
ಉಸಿರು ಕಟ್ಟಿಸುವ ಗೋಡೆಗಳೇ
ನನ್ನ ಬದುಕಾಗಿ
ಬೃಹದಾಕಾರವಾಗಿ ನಿಂತ
ಗೋಡೆಗಳೊಂದಿಗೇ
ನಾ ಬೆರೆತು ಹೋಗಿ
ನಾನೆಂದರೆ ಗೋಡೆಗಳು
ಗೋಡೆಗಳೆಂದರೆ ನಾನೇ!
ಗೋಡೆಗಳಿಲ್ಲದ ನಾನೇ!
ಗೋಡೆಗಳಿಲ್ಲದ ನಾನು ನಾನೇ?
*****