ಅತ್ತೇ ಮಾವರಿಗಂಜಿ
ಸುತ್ತೇಳು ನೆರೆಗಂಜಿ
ಮತ್ತೇ ಪತಿ, ಭಾವ
ಮೈದುನರಿಗಂಜಿ
ಅವರಿಗಂಜಿ, ಇವರಿಗಂಜಿ
ಅಂಜಿ, ಅಂಜಿ
ಅಳುಕುತ್ತಲೇ ಬಾಳುವ
ಕರ್ಮ ಬೇಡ ಮಗಳೇ
ಎಲ್ಲರಿಗಂಜಿ ಬಾಳಿದವರೆಲ್ಲ
ಕಾಲನ ಛಾಯೆಯ
ತಿಮಿರವಾದರು
ಹೊಸಲಿನಾಚೆಯ
ಬೆಳಕ ಕಾಣದಾದರು
ಮುಚ್ಚಿಟ್ಟ ಹಣ್ಣಾಗಿ
ಕೊಳೆತು ಹೋದವರು
ಕೊಟ್ಟಿದ್ದನ್ನೆಲ್ಲ ಹೀರುವ
ಪಾರದರ್ಶಕವಾದರು
ಪುಟಿದೆದ್ದು ನಿಲುವ
ಚೆಂಡು ನೀನು
ಪಡೆದದ್ದನ್ನೆ ಕೊಡುವ
ದರ್ಪಣ ವಾಗೇ
ಭೂಮಿತೂಕದ
ತಾಳ್ಮೆಬೇಡ ಕಣೆ
*****