ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ
ನಾಡ ನಾಯಕರೆಲ್ಲರೊಂದುಗೂಡಿ;
ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು
ಹರಸು, ಹೇ! ಭಾರತದ ಭಾಗ್ಯದೈವ!
ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು
ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು
ಭಾರತಾಂಬೆಯನೇಕನಿಷ್ಠೆಯಲಿ ಭಜಿಪಂತೆ
ಹರಸು, ಹೇ! ಭಾರತದ ಭಾಗ್ಯದೈವ!
ಮೇಲು ಕೀಳುಗಳೆಂಬ ಬಡವ ಬಲ್ಲಿದನೆಂಬ
ಭೇದಭಾವನೆಯ ಮೋಡಗಳು ಚೆದರಿ
ಸ್ವಾತಂತ್ರ್‍ಯ ಸೂರ್‍ಯನೆಲ್ಲೆಡೆಯು ಬೆಳಗುವ ತೆರದಿ
ಹರಸು, ಹೇ! ಭಾರತದ ಭಾಗ್ಯದೈವ!
ಮನೆಯೊಳಗೆ ಇರವೆ ಹಲವಾರು ವಾಸದ ಕೋಣೆ?
ಭಾರತದ ಹೊಸಮನೆಯೊಳಿರಲಿ ನೂರು.
ಮನೆಯೊಂದೆ, ಮನೆದೇವರೊಂದೆ ತಾನಪ್ಪಂತೆ
ಹರಸು, ಹೇ! ಭಾರತದ ಭಾಗ್ಯದೈವ!
ಸತ್ಯ ಸರ್ವಪ್ರೇಮ ಸಮಭಾವನೆ ಅಹಿಂಸೆ
ಇವೆ ನವ್ಯ ಭಾರತದ ಮನೆ ದೇವರು;
ಮನೆ ದೇವರನ್ನೊಲಿದು ಎಲ್ಲರರ್ಚಿಸುವಂತೆ
ಹರಸು, ಹೇ! ಭಾರತದ ಭಾಗ್ಯದೈವ!
ಸ್ವಾತಂತ್ರ್‍ಯದರಮನೆಯ ಸಮ್ರಾಜ್ಞಿ ತಾನೆನಿಸಿ
ಮಾತೆ ಮಕ್ಕಳ ಏಳ್ಗೆ ಕಂಡು ನಲಿದು,
ಅವಳ ಮನೆ ಮಂಗಳದ ಮನೆಯಾಗಿ ಮೆರೆವಂತೆ
ಹರಸು, ಹೇ! ಭಾರತದ ಭಾಗ್ಯದೈವ!
*****