ಕನ್ನಡಕ್ಕೆ ಶ್ರೀಕಂಠಯ್ಯಂದಿರು ಇಬ್ಬರು. ಒಬ್ಬರು ಬಿಎಂಶ್ರೀ-ಮತ್ತೊಬ್ಬರು ತೀನಂಶ್ರೀ- ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ. ಮೊದಲಿನವರು ‘ಕನ್ನಡದ ಕಣ್ವ’; ಎರಡನೆಯವರು ‘ಕನ್ನಡದ ಕಲ್ಪವೃಕ್ಷ’.
ತೀನಂಶ್ರೀ ಅವರನ್ನು ನಮ್ಮ ಗೆಳೆಯರ ಗುಂಪಿನಲ್ಲಿ ‘ತೀರ್ಥರೂಪು ನಂ ಶ್ರೀಕಂಠಯ್ಯ’ ಎಂದು ಕರೆಯುತ್ತಿದ್ದುದಾಗಿ ಗೊರೂರು ರಾಮಸ್ವಾಮಿ ಆಯ್ಯಂಗಾರ್ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ. ತೀನಂಶ್ರೀ ಆವರ ‘ಕನ್ನಡ ಬದುಕು’ ಗಮನಿಸಿದರೆ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿಕ್ಕೆ ಇದಕ್ಕಿಂಥ ಸಮರ್ಪಕ ವಿಶೇಷಣ ಇನ್ನೊಂದು ಸಿಗದು.
ರಾಷ್ಟಕವಿ ಜಿ.ಎಸ್.ಶಿವರುದ್ರಪ್ಪ ಅವರಿಗೂ ತೀನಂಶ್ರೀ ಬಗ್ಗೆ ಅಪಾರ ಗೌರವ. ತೆಂಗಿನ ಮರ ಅವರಿಗೆ ಹೊಳೆಯುವ ಉಪಮೆ. ತೆಂಗಿನ ಎತ್ತರ ಹಾಗೂ ಬಹು ಉಪಯೋಗ ತೀನಂಶ್ರೀ ಅವರ ವ್ಯಕ್ತಿತ್ವಕ್ಕೂ ಹೊಂದುತ್ತದೆ ಎನ್ನುವುದು ಜಿಎಸ್‌ಎಸ್ ಆಭಿಪ್ರಾಯ. ಕಾಕತಾಳೀಯ ನೋಡಿ: ಈ ತೆಂಗಿನ ನಂಟು ಶ್ರೀಕಂಠಯ್ಯನವರ ಊರಿನಲ್ಲೇ ಇದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ ಅವರ ತವರು, ಈ ಪರಿಸರ ತೆಂಗಿನ ತೋಟಗಳಿಗೆ ಹೆಸರಾದುದು.
ವಿದ್ವತ್ ಮತ್ತು ವಿನಯಕ್ಕೆ ತೀನಂಶ್ರೀ ಪರ್ಯಾಯ ಹೆಸರು. ಹಾಗಲವಾಡಿ ರಾಜಮನೆತನಕ್ಕೆ ಸೇರಿದ ಅವರು ಜನಿಸಿದ್ದು ೧೯೦೬ರ ನವೆಂಬರ್ ೨೬ ರಂದು (ಮರಣ:ಸೆಪ್ಪಂಬರ್ ೭, ೧೯೬೬). ಪ್ರತಿಭಾವಂತ ವಿದ್ಯಾರ್ಥಿಯಾದ ಶ್ರೀಕಂಠಯ್ಯ ಅರ್ಧ ಡಜನ್ ಚಿನ್ನದ ಪದಕಗಳೊಂದಿಗೆ ಪದವಿ ಪೂರೈಸಿದವರು. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಂದಿನ ‘ಎಂಸಿಎಸ್’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಮಲ್ದಾರ ಹುದ್ದೆ ಪಡೆದಿದ್ದರು. ತಮ್ಮ ಕ್ಷೇತ್ರ ಅದಲ್ಲ ಎನ್ನುವುದನ್ನು ಬೇಗನೆ ಅರ್ಥ ಮಾಡಿಕೊಂಡ ಅವರು ಸಾಹಿತ್ಯದತ್ತ ಹೊರಳಿದರು; ಮೇಷ್ಟ್ರು ಕೆಲಸಕ್ಕೆ ಸೇರಿದರು. ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿ ಪಾಠ ಹೇಳಿದರು.
ಕನ್ನಡ, ಸಂಸ್ಕೃತದಷ್ಟೇ ಇಂಗ್ಲಿಷ್‌ನಲ್ಲೂ ಪಾಂಡಿತ್ಯ ಪಡೆದಿದ್ದ ಶ್ರೀಕಂಠಯ್ಯ, ಸಹಲೇಖಕರು ಕವಿತೆಯ ಗುಂಗಿನಲ್ಲಿ ಮುಳುಗಿಹೋಗಿದ್ದ ದಿನಗಳಲ್ಲಿ ಜನಪ್ರಿಯತೆ ದೃಷ್ಟಿಯಿಂದ ಬರಹಗಾರನಿಗೆ ಅಷ್ಟೇನೂ ಲಾಭದಾಯಕವಲ್ಲದ ವಿಮರ್ಶೆ, ಭಾಷಾಶಾಸ್ತ್ರ ಕಾವ್ಯ ಮೀಮಾಂಸೆ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಭಾರತೀಯ ಕಾವ್ಯ ಮೀಮಾಂಸೆ’ ಭಾರತೀಯ ಕಾವ್ಯ ಸಂದರ್ಭದಲ್ಲೇ ಅಪರೂಪದ ಕೃತಿ. ಅದನ್ನು ‘ಆಚಾರ್ಯ ಕೃತಿ’ ಎಂದರು ಕುವೆಂಪು. ಕನ್ನಡದ ಭಾಗ್ಯ ದೊಡ್ಡದು; ಇಂಥ ಕೃತಿ ಇತರ ಭಾರತೀಯ ಭಾಷೆಗಳಲ್ಲಿಲ್ಲ ಎಂದು ಡಿ.ಎಲ್.ನರಸಿಂಹಾಚಾರ್ ಕೊಂಡಾಡಿದರು. ‘ಕಾವ್ಯ ಸಮೀಕ್ಷೆ’ ಮತ್ತು ‘ಸಮಾಲೋಕನ’ ಶ್ರೀಕಂಠಯ್ಯನವರ ಕಾವ್ಯಪ್ರೀತಿಗೆ ಸಾಕ್ಷಿಯಾದ ಇನ್ನೆರಡು ಕೃತಿಗಳು. ಅವರ ವ್ಯಕ್ತಿತ್ವದ ನವಿರುತನವೆಲ್ಲ ‘ನಂಟರು’ ಪ್ರಬಂಧ ಸಂಕಲನದಲ್ಲಿ ಒಡಮೂಡಿದೆ.
‘ಒಲುಮೆ’ ಅವರ ಏಕೈಕ ಜನಪ್ರಿಯ ಕವನ ಸಂಕಲನ. ಕನ್ನಡ ಕಾವ್ಯಕ್ಕೆ ಶುದ್ಧ ಪ್ರೇಮವನ್ನು ಪರಿಚಯಿಸಿದ್ದಕ್ಕಾಗಿ ‘ಮೈಸೂರು ಮಲ್ಲಿಗೆ’ಯ ಕೆ.ಎಸ್. ನರಸಿಂಹಸ್ವಾಮಿ ಅವರನ್ನು ನೆನೆಯುತ್ತೇವೆ. ಕೆಎಸ್‍ನ ಅವರ ಮಲ್ಲಿಗೆಗೆ ತೀನಂಶ್ರೀ ಅವರ ‘ಒಲುಮೆ’ ಮುನ್ನುಡಿಯಂತಿರುವುದನ್ನು ಗಮನಿಸಬೇಕು.
ನಿಘಂಟು, ಅನುವಾದ ಕ್ಷೇತ್ರದಲ್ಲೂ ತೀನಂಶ್ರೀ ಛಾಪಿದೆ. ಸಂಸ್ಕೃತದ ನಾಟಕ-ಮುಕ್ತಕಗಳನ್ನು ಕನ್ನಡಕ್ಕೆ ತಂದ ಅವರು, ಇಂಗ್ಲಿಷಿನ ‘ಪ್ರೆಸಿಡೆಂಟ್’ ಶಬ್ದಕ್ಕೆ ಸಂವಾದಿಯಾಗಿ ಭಾರತೀಯ ಪದದ ತಲಾಷು ನಡೆದಿದ್ದಾಗ ‘ರಾಷ್ಟಪತಿ’ ಶಬ್ದವನ್ನು ಸೂಚಿಸಿದರು. ಇಂದು ‘ರಾಷ್ಟ್ರಪತಿ’ ಶಬ್ಬದ ಬಳಕೆ ಸರ್ವೆಸಾಮಾನ್ಯ. ರಾಕ್ಫೆಲ್ಲರ್ ವಿದ್ಯಾರ್ಥಿ ವೇತನ ಪಡೆದು ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಅಧ್ಯಯನ ನಡೆಸಿದ ತೀನಂಶ್ರೀ ರಾಜ್ಯದ
ವಿವಿಗಳಲ್ಲಿ ಅಧ್ಯಯನಕ್ಕೆ ಬಲವಾದ ನೆಲೆ ಒದಗಿಸಿದರು.
ಬಿಎಂಶ್ರೀ, ವೆಂಕಣ್ಣಯ್ಯ ಮತ್ತು ಎಂ.ಹಿರಿಯಣ್ಣನವರಂಥ ಗುರುವೃಂದ ಪಡೆದಿದ್ದ ತೀನಂಶ್ರೀ ಕನ್ನಡದ ಮಾದರಿ ಗುರುಪರಂಪರೆಯನ್ನು ಮುಂದುವರಿಸಿದರು. ಅವರ ವಿದ್ವತ್ತು ಒಂದು ತೂಕವಾದರೆ ಶಿಷ್ಯ ವಾತ್ಸಲ್ಯ ಇನ್ನೊಂದು ತೂಕ.
*****