ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಸಾಮಗ್ರಿಯಿಂದ
ಪೂರೈಸಬೇಕು ಎಲ್ಲರ ಇಷ್ಟ
ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು
ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು
ಕಪ್ಪು ಕರಾಳ ಕುರೂಪದೊಳಗೇ
ಸುಂದರ ಲೋಕ ತೆರೆದು ತೋರಿಸಬೇಕು
ದಿನದಿನವೂ ಹೊಸಹೂಸದನ್ನೇ ಕಾಣಬೇಕು
ಮೂರನೆ ಕಣ್ಣಿಂದ
ಕಂಡದ್ದು ಶಬ್ದಜಾಲದ ಮೋಡಿಯಲ್ಲಿ
ಬಣ್ಣಿಸಬೇಕು ಬಣ್ಣ ಬಣ್ಣ
ಅವರ ಕೈಯಲ್ಲೇನಿದೆ ಬಂಡವಾಳ
ಅದೇ ಹಿಡಿಯಷ್ಟು ಚಿಕ್ಕಿಗಳು
ತಟ್ಟೆಗಳಂಥ ಸೂರ್ಯಚಂದ್ರರು
ಅದೇ ಗಿಡ ಮರ ಬಳ್ಳಿಗಳು
ಅವುಗಳಲೊಂದಿಷ್ಟು ಮೊಗ್ಗು ಕಾಯಿ ಹೀಚು ಹಣ್ಣು
ಅವುಗಳ ಸುತ್ತಾಡುವ ಚಿಟ್ಟೆಗಳು
ಗಿಳಿ ಕೋಗಿಲೆ ಕಾಜಾಣ ಪಾರಿವಾಳ ನವಿಲುಗಳು
ಕೊಳದಲ್ಲಿ ನೀರಿದ್ದರೆ ಅಲ್ಲೊಂದಿಷ್ಟು
ಕಮಲಗಳು ಹಂಸಗಳು (ಈಗೀಗ ಇವು ಕನಸುಗಳು)
ಇವನೆಲ್ಲ ಅಂಗಾಂಗಗಳಲ್ಲಿ
ಮೆತ್ತಿಕೊಂಡ ಮಾನಿನಿಯರು ಚೆಲುವೆಯರು
ಕವಿಗಳ ನಿರಂತರ ಸ್ಪೂರ್ತಿಯ ಚಿಲುಮೆಗಳು
ಇವರ ಬಿಟ್ಟರೆ ಅಥವಾ ಇವಳ ಬಿಟ್ಟರೆ
ಕವಿಗಳಿಗೆ ಉಳಿಯುವುದೇನು ಮಣ್ಣು
ಸ್ವಲ್ಪ ಕಣ್ಣು ಆಚೆ ಹಾಯಿಸಿದರೆ
ನದಿಗಳ ಬಳುಕೋ ಕಡಲಿನ ಮಿಡುಕೋ
ಅದೇ ನೆಲ ಜಲ ಅದೇ ಭೂಮಿ ಬಾನು
ಗಿರಿಸಾನು- ಬಾನಲ್ಲಷ್ಟು ಗಾಳಿಯ ಗೊಂದಲ
ಮೋಡ ಮಿಂಚುಗಳ ಗದ್ದಲ ಅಪರೂಪಕ್ಕೆ
ಅದೇ ಅರುಣೋದಯ ಸೂರ್ಯೋದಯ
ಸೂರ್ಯಾಸ್ತಗಳ ತಿರುಗು ಮುರುಗು
ಇನ್ನೇನಿದೆ ಕವಿಗಳ ಕೈಗಳಲ್ಲಿ ಮಣ್ಣು ಮಸಿ
ಉಪಮೆ ರೂಪಕಾದಿಗಳ ನುಣ್ಣು ನುಸಿ
ವೇದಗಳ ಕಾಲದ ಉಷೆ ಸೂರ್ಯೋಪಾಸನೆ
ಗಿಡಮರಗಳ ನಡುವೆ ಬೆಂಕಿ ತುಪ್ಪದ ವಾಸನೆ
ಅಲ್ಲಿಂದ ಹಿಡಿದು ಇಲ್ಲಿಯವರೆಗೂ
ಕವಿಗಳಿಗೆ ಅವೇ ಸಾಮಗ್ರಿಗಳು
ನಿಸರ್ಗ ನೀಡುವ ಪರಿಕರಣಗಳು
ಅವುಗಳಿಂದಲೇ ಹೆಣೆಯಬೇಕು
ನವರಸಾದಿಗಳ ಕುಣಿಕೆಗಳ
ಮಾನವನ ನೂರಾರು ಭಾವಭಣಿತೆಗಳ
ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಅವೇ ಹಳಸಲು ವಸ್ತುಗಳಿಂದ
ಪೂರೈಸಬೇಕು ಎಲ್ಲರ ಇಷ್ಟ
*****