ಈ ಊರು ಕೇರಿಗೆ ಅಂತರವೇನು?
ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ,
ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ…
ನಡೆವ ನೆಲ, ಕುಡಿವ ಜಲ,
ಉಂಭೊ ಬಾನ, ಉಡೋ ಬಟ್ಟೆವೊಂದೇ…
ಸುರಿವ ಮಳೆ, ಕರೆವ ಹೆಸರೊಂದೇ…
ಈ ಊರು ಕೇರಿಗೆ ಬಿಸಿಲು, ನೆರಳೂ, ಮಳೆವೊಂದೇ…
ಈ ಮನುಜರಲ್ಲೆಕೋ… ಮೇಲು, ಕೀಳು, ನಾ ಕಾಣೆ!?
೨
ಸತ್ತ ಬಳಿಕ ನೆಲದ ಒಳಗೆ.
ಜಾತಿ, ಭೇದ, ಮನದೊಳಗೆ.
ಈ ಊರು, ಕೇರಿನ, ಬೇರೆ ಮಾಡಿ,
ಕೇರಿಗೂ ಹೊಲಸು,
ಈ ನಿಮ್ಮ ಮನಸು!
೩
ಈ ನಿಮ್ಮ ಕೊಳಕು ಬುದ್ಧಿಗೆ-
ಹಂದಿ, ಕಾಗೆ, ಹದ್ದು, ನಾಯಿ, ಗೂಬೆಗಿಂತ ಕಡೆಯೆಂಬೆ…
ಸತ್ತ ದನ ತಿಂದು, ತಿಂದು,
ಸತ್ತತ್ತಿಹರನು, ಬಡಿದೆಚ್ಚರಿಸದೇ…
ಬಿಡದೆ, ನಿತ್ಯ ಹರಿದು ತಿನ್ನೊ…
ಈ ನಿಮ್ಮ ಜಾಣಕುರುಡಿಗೆ-
‘ಥೂ!’ ಎಂಬೆ…
೪
ಅಸ್ಪೃಶ್ಯರೆಂಬಾಪಟ್ಟಿ ಕಟ್ಟಿ,
ನಮಗೂ ಕೆಟ್ಟದಾಗಿ…
ಈ ನಿಮ್ಮ ಬದುಕು, ಭವಣೆಗೆ-
‘ಛೀ!’ ಎಂಬೆ…
೫
ಈ ಊರು, ಕೇರಿನ, ಒಂದು ಮಾಡಿ,
ಕುಡಿವಾ ನೀರು, ಉಂಬಾ ಬಾನಾ, ಗಾಳಿ ಸೇವನೆ…
ಎಲ್ಲ ಒಂದೂ ಎಂದೂ-
ಅಕ್ಕಪಕ್ಕ ಮನೆಗಳಲ್ಲಿ, ನೆಲಸಬಲ್ಲಿರಾ??
ಆಗ ‘ಹೌದು’ ಎಂಬೆ…
೬
ಹೆಣ್ಣು, ಗಂಡು, ಸಮವೆಂದೂ…
ಲಗ್ನ ಮಾಡಿ, ಜಾತಿ, ಮತ, ಕುಲ, ಭೇದ,
ಮರೆಯ ಬಲ್ಲಿರಾ??
ಆಗ ‘ಭಪ್ಪರೆ’ ಎಂಬೆ…
೭
ಎಂಬೆ… ಎಂಬೆ… ಸರ್ವಜನರೂ…
ಸಮಾನರೆಂಬೆ…
ರಂಬೆ, ಕೊಂಬೆ, ಗೊಂಬೆ, ಆಗುಂಬೆ ಎಂಬೆ…
ಈ ಊರು, ಕೇರಿ, ಕಲಿತ ದಿನವೇ-
‘ಸ್ವರ್ಗ’ ಎಂಬೆ…!
*****