ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ
ಮುದವಾಗುತಿದೆ ಇವಳ ನಡೆ ನುಡಿಯ ನೋಡೆ
ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು
ಉಡುಗುವಳು ವರ್ತನೆಯ ಮನೆಗಳೊಳು ಕಸವ
ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು
ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು
ಚೆಲ್ವ ಪಣೆಯೊಳು ಬಿದ್ದು ಅಲುಗಾಡುತಿವೆ ಕುರುಳು
ರಸಿಕತೆಯು ಚಿಮ್ಮುತಿದೆ ಇವಳ ಮಾತಿನೊಳು
ತೊಳೆಯುವಳು ಮುಸುರೆಗಳ ಥಳಥಳನೆ ಕ್ಷಣದಿ
ಓಡುವಳು ಮತ್ತೊಂದು ಮನೆಗಿವಳು ಮುದದಿ
ಬೆಳಸುವಳು ಗೆಳೆತನವ ಹುಡುಗರೊಳು ಬೆರೆತು
ದುಡಿತದೊಳಗಿದ್ದರೂ ದುಗುಡವನು ಮರೆತು
ಬಾರದಿರಲೊಂದು ದಿನ ಮನೆಗೆಲಸಕಿವಳು
ಮೀರಿದಳೆ? ಆಜ್ಞೆಯನು ಎನುತ ದುಡುಕಿದೆನು
ಬರಲಿಲ್ಲವಿಂದೇಕೆ ಮನೆಗೆಲಸಕೆಲೆ ನರಸಿ,
ತಿರುದು ತಿಂಬುವ ನಿನಗೆ ಜಂಬವೇ ಮೂಳಿ!
ಹಿಡಿಯುವೆನು ನಾ ನಿನ್ನ ಕೂಲಿಯೊಳಗೊಂದಾಣೆ
ಬಿಡಿಸುವೆನು ನೀನಿನ್ನು ಬೇಕಿಲ್ಲ ನಡಿ ಎಂದೆ
ಸಿಟ್ಟಾಗ ಬೇಡಮ್ಮ ತಾಸು ತಡವಾಯ್ತು
ಹಿಟ್ಟಿನಾರತಿ ಹೊತ್ತು ಗುಡಿಗೆ ಹೋಗಿದ್ದೆ
ಬೀರಪ್ಪ ಹೊರಟಿದ್ದ, ತೇರು ನೋಡಲು ಹೋದೆ
ಎಲೆ ಪೂಜೆ ಕಟ್ಟಿದರು ತಡವಾಯಿತಲ್ಲಿ
ಎಡೆಯನಿಟ್ಟವು ಎಲ್ಲ ಸ್ವಾಮಿಗೊಂದೊಂದಾಗಿ
ನೆನೆಯಕ್ಕಿ ತಂಬಿಟ್ಟು ಕಾಯಿ ಬಾಳೇಹಣ್ಣು
ಉಡಿಯೊಳಗೆ ಮಡಗಿದ್ದ ಚೂರು ಕೊಬ್ಬರಿಯೊಂದು
ತೆಗೆದುಕೊಟ್ಟಳು ನನಗೆ ಪರಸಾದವೆಂದು
ತೇರಿನೊಳು ಬೀರಪ್ಪಗಾರತಿಯ ಬೆಳಗಿದರು
ಹೊಂಬಾಳೆ ದವನಗಳ ನಾವು ಸೂರಿದೆವು
ತೇರು ಕದಲಿಸುವಾಗ ಭೋರೆಂದು ವುರಿಮೆಗಳು
ಕುಣಿಕುಣಿದು ಜನರೆಲ್ಲ ಕೇಕೆ ಹಾಕಿದರು
ನಾಗಮ್ಮ ಕರಿಯಮ್ಮ ಸಿತ್ತಮ್ಮ ಸಿರಿಯಮ್ಮ
ಪದಗಳನು ಹಾಡಿದರು ಏನೇಳಲಮ್ಮ!
ಹೊರಟಿಲ್ಲವೇನಮ್ಮ ನೀನಿನ್ನು ಪರಿಸೆಗೆ
ತರಿಸಮ್ಮ ಕಾಯೊಂದ ಇರಲಿ ದಿನಗೆಲಸ
ಬಾರಮ್ಮ ಸ್ವಾಮಿಯ ತೇರ ನೋಡಮ್ಮ
ಊರೂರೆ ಬಂದಿಹುದು ನೀನಿಲ್ಲೆ ಇರುವೆ
ತೊಡಿಸಮ್ಮ ಪರಿಸೆಯೊಳು ನನ ಕೈಗೆ ಬಳೆಗಳನು
ಕೊಡಿಸಮ್ಮ ಮಕ್ಕಳಿಗೆ ಗೊಂಬೆಗಳನೆಂದಳು
ಆಗಿಲ್ಲವೇ ನರಸಿ ಮದುವೆ ನಿನಗೆಂದರೆ
ಸೆರಗ ಬಾಯಿಗೆ ಮುಚ್ಚಿ ಸಿರಬಾಗಿ ನಗುವಳು
ಮದುವೆಯೊಳಗಿನ ತತ್ವ ಗೊತ್ತಿಲ್ಲ ಪಸುಳೆಗೆ
ನಿಸ್ಪೃಹದ ಮನಸಿನೊಳು ನಲಿದಾಡುತಿಹಳು
ಇರಲಿರಲಿ ನರಸೀ ಮದುವೆಯಂತಿರಲಿ
ಬೀರಪ್ಪನಾ ಪರಿಸೆ ಬಂಗಾರವಾದೀತು
ನಿನ್ನ ಜೀವನ ಬೆಳಸು ಬೆಳೆಯುತಿರಲಿಂತೆ
ನಿನ್ನ ರಸಿಕತೆ ಬೆಳಗಿ ಬೆಳಗುತಿರಲಿಂತೆ
ನಿನ್ನ ದುಡಿತವು ಜನಕೆ ಸಲ್ಲುತಿರಲಿಂತೆ
ನಿನ್ನ ಪರಿಸೆಯ ಕುಣಿತ ಕುಣಿಯುತಿರಲಿಂತೆ
ಬಂಧನದಿ ಸಿಲುಕಿದಾ ಬಾಳಿನನುಭವಕಿಂತ
ಎಳೆತನದ ಕುಣಿತವೇ ಜನಕಜೆಗೆ ಹಿತವು
*****