ಅದೆಶ್ಟು ಬಿರುಸು
ಅಶ್ಟೆ ಹುಲುಸು
ಘಮ ಘಮ ಹಲಸಿನಂತೆ!
ಪುಟ್ಟ ಚಂದ್ರ ಚಕೋರ,
ಧರೆಗಿಳಿದು ಬೆರಗು ಮೂಡಿಸಿದನಲ್ಲ?
ನವ ಮಾಸ ಕಳೆದ,
ನವ ನೀತ ಚೋರ!
ಪುಟ್ಟ ಪೋರಾ!
ತಂದೆಯ ರೂಪ,
ತಾಯಿಯ ಕೋಪ,
ಜಗದಾ ಪರಿತಾಪ ಎಲ್ಲವೂ…
*
ಹಾಲುಗೆನ್ನೆಯ ಹಸುಗೂಸು
ಮುದ್ದು ಮುದ್ದು ಮುಖಾರವಿಂದ
ತೊಂಡೆಣ್ಣೆನ ತುಟಿ, ದಾಳಿಂಬೆ ಹಲ್ಲು
ಗೋಲಿಗಣ್ಣು, ಸೇಬುಗಲ್ಲ, ಹಾಲು ಹಲ್ಲು
ಬೇವಿನ ಎಸಳ ನೋಟ!
ಆಟ, ಪಾಠ, ನೋಟವೆಲ್ಲ ಲವಕುಶರ ಹಠ!
ತೊದಲು ಮಾತು, ಅಂಬೆಗಾಲು
ನವಿಲು ಕುಣಿತ ಸಾಧ್ಯವು!
*
ಹಸಿ ಹಸಿ ಹಾಲ ಶಿಶು, ಪ್ರತಿಮನೆಯ ಶಶಿ!
ಮುಸಿ ಮುಸಿ ಮುಗ್ಧ ಹಸು!
ಹೋರಿಯಂಗೆ ಬೆಳೆದ ಪರಿಯೇ ಬೆರಗು
‘ಮೂರು ವರ್ಷದ ಬುದ್ಧಿ, ನೂರು ವರ್ಷ’
ಸದಾ ಜಿಂಕೆ ಮರಿಯಂಗೇ… ಜಿಗಿತ!
ವರ್ಷ ವರ್ಷ ಸದಾ, ಹರಿದು ಬರುವ ತೇರಿನಂಗೆ…
ಹರ್ಷ ಹರ್ಷವೆನಲು ಸ್ವಲ್ಪವೇ?!
*
ಎದ್ದು ಬಿದ್ದು ಬಾನಂಗಳಕೆ ಪುಟಿದ!
ನವ ವಸಂತಗಳ ದಾಟಿ, ಜಗದ ತೊಟ್ಟಿಲಿಳಿದ
ಕುಡಿ ಮೀಸೆ ಕುವರ, ಚೆಲುವ ಚೆನ್ನಿಗ!
ಬುದ್ಧ, ಬಸವ, ಪಂಪ, ರನ್ನ, ಹಂಸರಂಗೆ…
ಏನೆಲ್ಲ ಕನಸನೇರಿ
ಭಾರತಾಂಬೆಗೆ ಕೀರ್ತಿ ಶಿಖರ ತರುವ!
*
ಜಯಹೋ… ಕನ್ನಡ ಕೀರ್ತಿಕುವರ!
ಶೂರ, ವೀರ, ಧೀರ… ಧೀರಾಽಽ ಮಗಧೀರ…
ನವ ನವೋನ್ಮೇಶ, ಶ್ಯಾಮ ಶ್ರೀರಾಮನವತಾರ!
ದೇಶ, ವಿದೇಶ ಸುತ್ತಿ, ಮೆರೆವ ಧೃವತಾರೆ…
ಹಾಲುಜೇನು, ಒಟ್ಟಿಗೆ ಕರೆವ ಧಾರೆ!
ಜಗದ ಬೆಳಕೋ? ಯುಗದ ಬೆಳಕೋ? ಕಾಣೇ…
ಬೆಳೆ ಬೆಳೆದು ಆಲವಾದ, ಕನಸ್ಸಿನ ಕುವರನೇ…
ಭಾರತದ ಕೀರ್ತಿ ಶಿಖರ, ಭಾನೆತ್ತರ ಬೆಳಗೋ…
ಈ ಜಗವೇ ನಿನ್ನೊಳಗೆ… ಈಗೋ ಉತ್ತರ!!
‘ಮುಂದುಂದಿ ಮುಸಲ ಪಂಡುಗಽ…’ ಎಚ್ಚರ!
*****