ಗುಬ್ಬೀ ಗುಬ್ಬೀ ತರವಲ್ಲ
ಮನೆ ಇದು ನನ್ನದು ನಿನದಲ್ಲ
ಕಿಚಿಕಿಚಿ ಎಂಬೆಯ ಬಂದಿಲ್ಲಿ
ಬಯಲಿದೆ ಹೊರಗಡೆ ಸಾಯಲ್ಲಿ
ಜಂತೆಯ ಸಂದೇ ಮನೆಯಾಯ್ತು
ಕಾಪುರವೇನೊ ಘನವಾಯ್ತು
ನಿನ್ನೀ ವಲ್ಲಡಿ ಜೋರಾಯ್ತು
ಮೂಡಿದ ಭಾವವು ಹಾಳಾಯ್ತು
ಹುಶ್, ಎಲೆ ಗುಬ್ಬೀ! ಎಚ್ಚರಿಕೆ!
ಸಪ್ಪುಳ ಮಾಡದೆ ಇರು ಜೋಕೆ!
ಕತ್ತರಿಸಿಡುವೆನು ನಿನ್ನ ರೆಕ್ಕೆ
ಕಳುಹುವೆ ನೋಡಿಕೊ ಮಸಣಕ್ಕೆ
ಅಲ್ಲಿಂದಿಲ್ಲಿಗೆ ಹಾರದಿರು
ಗೆಳೆಯರ ಗುಂಪನು ಕರೆಯದಿರು
ಕಡ್ಡೀ ಕಸವನು ಕೆಡಹದಿರು
ಸುಮ್ಮನೆ ಕುಳಿತಿರು ನೋಡುತಿರು
ಪಿಳಿಪಿಳಿ ಕಣ್ಣನು ಬಡಿಯದಿರು
ಪಟಪಟ ಪುಕ್ಕವ ಹೊಡೆಯದಿರು
ಕಟಕಟ ಧಾನ್ಯವ ಕೊಟುಕದಿರು
ಸುಮ್ಮನೆ ಕುಳಿತಿರು ನೋಡುತಿರು
ಬುಡಬುಡು ಮುಂದಕೆ ನಡೆಯದಿರು
ಗುಟುಗುಟು ಹನಿಯನು ಕುಡಿಯದಿರು
ಫಕ್ಕನೆ ಹಿಂದಕೆ ತಿರುಗದಿರು
ಸುಮ್ಮನೆ ಕುಳಿತಿರು ನೋಡುತಿರು
ಎಡಕೂ ಬಲಕು ತಿರುಗದಿರು
ಕತ್ತನು ನಿಮಿರಿಸಿ ಕುಕ್ಕದಿರು
ಕಾಳನು ಮಕ್ಕಳಿಗಿಕ್ಕದಿರು
ಸುಮ್ಮನೆ ಕುಳಿತಿರು ನೋಡುತಿರು
ಅರಿಯನೊ ಬೊಮ್ಮನು ಕೆಲಸವನು
ಈ ಕಿರಿ ಗುಬ್ಬಿಯ ಸೃಜಿಸಿಹನು
ಏನೋ ಸಿಂಗರ ತುಂಬಿಹನು
ಎನ್ನನು ಮಂಗನ ಮಾಡಿಹನು
ನಡೆಯಲೆ ಗುಬ್ಬೀ ಸಾಕಿನ್ನು
ಎದ್ದರೆ ನೋಡಿಕೊ ಗುದ್ದುವೆನು
ತಿಳಿಯದೆ ಮೆರೆಯುವೆ ನೀನಿನ್ನೂ
ಜನಕಜೆ ಚೆಚ್ಚುವಳೆಂಬುದನು
*****