ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್
ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್

ಪ್ರಿಯ ಸಖಿ,
ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂದು ಮಾರ್ಗ, ಬೌದ್ಧಿಕ ಆಟ, ಹಣ ಹೆಸರು ಮಾಡುವ ಒಂದು ದಾರಿ, ಆತ್ಮಸಂತೋಷ ನೀಡುವ ಸಾಧನ… ಹೀಗೆ ಒಬ್ಬೊಬ್ಬರದು ಒಂದೊಂದು ಉತ್ತರ. ಹಾಗೆ ನೋಡಿದರೆ ಕವಿತೆಯೊಂದು ಹೀಗೆ ಇರಬೇಕು. ಇಷ್ಟು ಸಾಲುಗಳು ಇಂತದೇ ರೂಪದಲ್ಲಿರಬೇಕು ಎಂದು ಯಾರೂ ಚೌಕಟ್ಟು ಹಾಕುವಂತಿಲ್ಲ. ಏಕೆಂದರೆ ಕಾವ್ಯ ಸೃಷ್ಟಿಯೆಂಬುದು ಅತ್ಯಂತ ವೈಯಕ್ತಿಕವಾದ ಸೃಜನಶೀಲ ಸೃಷ್ಠಿಕ್ರಿಯೆ. ಎಲ್ಲ ಚೌಕಟ್ಟುಗಳನ್ನು ಮೀರಿ ಕಾವ್ಯ ರಚಿಸುವುದೇ ಹೊಸ ಕಾವ್ಯದ ಸೃಷ್ಠಿಗೆ ಕಾರಣವಾಗುತ್ತದೆ!

ಎಷ್ಟೋ ಬಾರಿ ಕವನಗಳು ಓದುಗರಿಗೆ ಅರ್ಥವಾಗದೇ ಇರುವುದೂ ಉಂಟು. ಕವಿಯ ಭಾವೋತ್ಕಟತೆಯ ಹಂತವಮ್ನ ಮುಟ್ಟದೇ ಕಾವ್ಯದೊಳಗೆ ಪರಕಾಯ ಪ್ರವೇಶವನ್ನು ಮಾಡದ ಹೊರತು ಸಹೃದಯನಿಗೆ ಕವಿತೆ ಅರ್ಥವಾಗುವುದು ಸಾಧ್ಯವಿಲ್ಲ. ಹೀಗೆಂದೇ ಕವಿತೆಯೊಂದರ ಓದು ಬೇರೆ ಪ್ರಕಾರಗಳ ಸಾಹಿತ್ಯದ ಓದಿಗಿಂತಾ ಹೆಚ್ಚಿನ ಏಕಾಗ್ರತೆಯನ್ನು, ಏಕಾಂತವನ್ನು, ನಿರ್ಮಲ ಪ್ರಶಾಂತ ಮನಸ್ಥಿತಿಯನ್ನು ಅರ್ಥೈಸುವಿಕೆಯ ನಿಟ್ಟಿನಲ್ಲಿ ದೀರ್ಘಸಮಯವನ್ನು ಬಯಸುತ್ತದೆ.

ಕವಿ, ಪ್ರೇಮಿ, ಹುಚ್ಚ ಇವರು ಮೂವರು ಹೆಚ್ಚು ಕಡಿಮೆ ಒಂದೇ ಮನಸ್ಥಿತಿಯವರೆಂದು ಹಿಂದಿನಿಂದ ಹೇಳುತ್ತಾ ಬಂದಿದ್ದಾರೆ. ಹುಚ್ಚನ ಮನೋವ್ಯಾಪಾರ ಸಾಮಾನ್ಯರಿಗೆ ನಿಲುಕುವಂತಹದ್ದಲ್ಲ. ಅವನು ಭಾವೋತ್ಕರ್ಷದಲ್ಲಿ ಮಾತನಾಡುವಾಗ ಎದುರಿನವರಿಗೆ ಅದರ ಹಿನ್ನೆಲೆ, ತಲೆಬುಡ ಒಂದೂ ತಿಳಿಯುವುದಿಲ್ಲ. ಪ್ರೇಮಿಯೊಬ್ಬನ ಸ್ಥಿತಿಯೂ ಇಂತಹುದೇ ಉತ್ಕಟ ಪ್ರೇಮದ ಅಮಲಿನಲ್ಲಿರುವವನಿಗೆ/ಳಿಗೆ, ಪ್ರಪಂಚದ ತುಂಬೆಲ್ಲಾ ತನ್ನ ಪ್ರೇಮಿಯ ಪ್ರತಿರೂಪವೇ ಕಾಣುತ್ತಿರುತ್ತದೆ. ಹಗಲುಗನಸು ಕಾಣುತ್ತಾ ಲೋಕವನ್ನೇ ಮರೆತು ತಮ್ಮಷ್ಟಕ್ಕೆ ನಗುತ್ತಿರುವುದು ಪ್ರೇಮ ತೀವ್ರತೆಯಲ್ಲಿ ನಡೆಸುವ ಹುಚ್ಚಾಟಗಳು, ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಸಹಜವಾಗಿ ಅದವರಿಗೆ ಒಂದು ರೀತಿಯ ಹುಚ್ಚು ಎನ್ನಿಸುತ್ತದೆ. ಹಾಗೇ ಕವಿ ಕೂಡ. ಭಾವಜೀವಿಯಾದ ತನ್ನ ಭಾವತೀವ್ರತೆಯಲ್ಲಿ ಉಕ್ಕಿದ ಭಾವನೆಗಳನ್ನು ಕವನವಾಗಿಸುವ ಅವನ ಮನಸ್ಥಿತಿಯೂ ಎಲ್ಲರಿಗೂ ಅರ್ಥವಾಗುವಂತಹುದಲ್ಲ.

ಉಕ್ಕುವ ಕಡಲಾಗಿಬಿಟ್ಟೆ
ಬಯಲಿನ ಒಡಲಾಗಿಬಿಟ್ಟೆ
ಈ ಜಗದ ತಾಯಾಗಿಬಿಟ್ಟೆ!
ಎಂಬ ಸಾಲುಗಳನ್ನು ಓದಿದಾಗ ಹೀಗಾಗಲು ವಾಸ್ತವದಲ್ಲಿ ಎಂದಾದರೂ ಸಾಧ್ಯವೇ? ಎನಿಸಿ ಬಿಡುತ್ತದೆ. ಆದರೆ ಕವಿಯ ಭಾವ ಲೋಕದ ತೀವ್ರ ಸ್ಪಂದನೆಯಲ್ಲಿ ಎಲ್ಲವೂ ಸಾಧ್ಯ. ಈ ನಿಟ್ಟಿನಲ್ಲಿ ಕವಿಯೂ ಕೂಡ ಅರ್ಥವಾಗದವನೇ ! ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೀಗಿರಬಹುದು, ಹಾಗಿರಬಹುದು ಎಂದು ಆರೋಪಿಸಿಕೊಂಡು ಕವನವನ್ನು ಓದುವವರೇ, ಅರ್ಥೈಸಿಕೊಳ್ಳುವವರೇ ಬಹುಮಂದಿ!

ಸಖಿ, ಕವಿ, ಹುಚ್ಚ, ಪ್ರೇಮಿಗಳು ಅರ್ಥವಾಗಲು ಅವರಂತದೇ ಸೂಕ್ಷ್ಮ ಸಂವೇದನೆಗಳುಳ್ಳ ಸಹೃದಯರಿಗೆ ಮಾತ್ರ ಸಾಧ್ಯ ಅಲ್ಲವೇ ? ಅಂತಹ ಸಹೃದಯರು ಇರಲಿ ಬಿಡಲಿ ಕವಿ, ಪ್ರೇಮಿಗಳು ಮಾತ್ರ ಎಲ್ಲ ಕಾಲದಲ್ಲೂ ಇರುತ್ತಾರೆ. ತಮ್ಮ ಸಂವೇವನೆಗಳನ್ನು ತಮ್ಮದೇ ಭಾವಲೋಕದ ಭಾಷೆಯಲ್ಲಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲವೇ ಸಖಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಂತಗಳು
Next post ಬೇಕು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…