ನಿಮ್ಮ ಮನೆಯಂಗಳಕೆ ಗುಲಾಬಿ
ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ
ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ.
ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ
ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ
ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು.
ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು
ನೋಡುತ್ತಾ ಆಟ ಆಡುತ್ತಾ,
ಮೈಲಿಗೆ ಅಸಮಾನತೆ ಅನಿಸಿತೋ
ಕೈ ಕತ್ತರಿಸಿದ್ದೀರಿ
ಪೋಲಿ ಹುಡುಗರು ಮತ್ತೊಂದು ಕೈ ಮುರಿದರು.
ಆದರೂ ಮತ್ತೆ ಚಿಗುರಿ ಮರವಾಗಿ ಬೆಳೆದು
ನೆರಳು ಕೊಡುವ ಕನಸುಕಣ್ಣಿನ ಮರ ನಾನು.
ನಾಯಿಹಂದಿಗಳ ಕಚ್ಚಾಟದ ನಡುವೆ
ವಿಷಹೊಗೆಯ ಒದೆತಗಳು ತಿನ್ನುತ
ಬೆಳೆಯುತ್ತಿದ್ದೇನೆ ಇಕ್ಕಟ್ಟಾದ ರಸ್ತೆಯ ಎಡಬಲಕೆ.
ಆದರೇನು!-
ವಿದ್ಯುತ್ ಇಲಾಖೆಯವ ಕಠಿಣ ಹೃದಯಿ
ಕೆಳಗೆ ಕೆಬಲ್‌ಗೆಂದು ಕಾಲುಬೆರಳುಗಳು ಕತ್ತರಿಸಿ
ಮೇಲೆ ತೋಳು ತೋಳುಗಳೂ ಕತ್ತರಿಸಿದ
ಹೃದಯವಂತ ಭಕ್ತರೂ ಕೂಡಾ
ಗಣೇಶ ಮೆರವಣಿಗೆಯ ಲಾರಿಗೆ
ಅಡ್ಡ ಎಂದು ಮತ್ತೆ ಮತ್ತೆ ಮುರಿದು ಎಸಿಯುವದೆ?
ಉರುವಲಕೆ ಲಟಲಟನೆ
ಮುರಿಯುವ ಕೆಲವರ ಖುಷಿಯೊಳಗೆ
ನನ್ನುಸಿರ ಸುಡುವುದು ಗೊತ್ತಾದೀತೆ?
ಈಗ,
ಬಳಲಿ ಬಳಲಿ ಕೃಶವಾಗಿ
ಆಕಾಶಕ್ಕೆ ಮೊರೆಯಿಡುತ್ತ ಮೇಲೇರುತ್ತಿದ್ದರೆ
ಅಲ್ಲಿಯೂ ಗಾಳಿದೇವನ ಹೊಡೆತವೆ?
ಎಷ್ಟೊಂದು ಸಹಿಸಲಿ ನಾನು?
ನಿಮ್ಮ ಮನೆಯ ಮೇಲೆ
ಸ್ಕೂಟರ್ ಕಾರ್ ಕಂಪೌಂಡುಗಳ ಮೇಲೆ
ಬಿದ್ದದ್ದು ನಿಮಗೂ ಒಂದಿಷ್ಟು ಪೆಟ್ಟು ಕೊಟ್ಟದ್ದು
ನನಗೂ ವ್ಯಥೆ, ಹೇಳಿ ಏನು ಮಾಡಲಿ ನಾನು
ನೀವೇ ಮಾಡಿದ್ದು
ಮಾಡಿದ್ದುಣ್ಣೋ ಮಹಾರಾಯಾ.
ಒಂದೈದು ನಿಮಿಷ ಬನ್ನಿ ಬನ್ನಿ
ನಿಮ್ಮ ಕಂಪೌಂಡಿಗೆ, ಸುಂದರ ಟೆರಸ್ಸಿಗೂ
ಅಂಗಾಂಗ ಕೊಚ್ಚಿ ಕೊಚ್ಚಿ ಹಾಕಿ
ಮೊಂಡು ಮಾಡಿದ ಈ
ಕುಷ್ಟರೋಗಿಯನ್ನೋ ಕುಂಟನನ್ನೋ ನೋಡಲು.
ಕಾಡಿನಲಿ ಹುಟ್ಟಿಬೆಳೆದರೂ
ಬಿಡುವುದಿಲ್ಲ ಬಿಡಿ ನೀವು
ಬೆಂಕಿ ಹಚ್ಚುವದು, ಬೇರು ಸಮೇತ ಉರುಳಿಸಿ
ನಿಮ್ಮ ಮನೆಗೆ ಬಾಗಿಲುಮಾಡಿ
ನೀವು ಭಧ್ರವಾಗಿದ್ದು
ನಮ್ಮನ್ನು ಅಭಧ್ರವಾಗಿಸುವವರು.
ದೇವರೇ ಕ್ಷಮಿಸು ಮನುಷ್ಯರನು
ಕಲಿಸು ಪ್ರೀತಿ ಶಾಂತಿ ಸಹನೆ!
————————
‘ಹಿಂದೆ ಬಂದರೆ ಒದಯಬೇಡಿ ಮುಂದೆ ಬಂದರೆ ಹಾಯಬೇಡಿ’- ಗೋವಿನ ಹಾಡು.
*****