ವೀರಪಂಡಿತ ಶಾಸ್ತ್ರಕಾರರೆ
ಜ್ಞಾನನಿಧಿ ಋಷಿವರ್ಯರೆ,
ಹಿಂದೆ ಗತಿಸಿದ ಯೋಗಪುರುಷರೆ
ನಿಮ್ಮ ಕಷ್ಟವ ನೆನೆವೆನು
ನಿಬಿಡವಾಗಿದೆ ನೀವು ರಚಿಸಿದ
ಗ್ರಂಥರಾಶಿಯು ಧರೆಯೊಳು
ಸೃಷ್ಟಿಯಂತ್ರವ ಭೇದಿಸುವ ಘನ
ಮಥನ ರವವಿದೆ ಅದರೊಳು
ಬಂದು ಇಲ್ಲಿಗೆ ಭ್ರಾಂತರಾದಿರೊ
ಏನಿದೆನ್ನುತ ಕುಳಿತಿರೋ
ದೀರ್ಘಯೋಚನೆ ಗೆಯ್ದು ಶೋಧಿಸಿ
ಸಾಧ್ಯವಲ್ಲಿದು ಎಂದಿರೊ
ಸುಂದರದ ಈ ಕೃತಿಯ ಪರಿಕಿಸಿ
ಹಿಗ್ಗಿ ಸಂತಸಗೊಂಡಿರೊ
ಮುಂದೆ ನಡೆಯುತ ಸೋತಿರೋ, ಆ-
ನಂದವನೆ ಸವಿದುಂಡಿರೊ
ಸಿಹಿಯನುಂಡಿರೊ ಕಹಿಯನುಂಡಿರೊ
ಮೂಲವರಿಯದೆ ನೊಂದಿರೊ
ಗೆಯ್ದ ಗೆಮ್ಮೆಯ ಫಲವ ಕಾಣುವ
ಮೊದಲಿಗೇ ಮರೆಯಾದಿರೊ
ಯಾರು ಬಲ್ಲರು ನಿಮ್ಮ ಕಷ್ಟವ
ಸಾಧ್ಯವೇನದು ತಿಳಿಯಲು
ಪ್ರಕೃತಿಜನ್ಯವಿದಿಂತು ಸಾಗಿರೆ
ಜನಕಜೆಯು ಏಗೆಯ್ವಳು.
*****