ಚೋಟಪ್ಪನೆಂಬುವನು ಹೆಸರಿಗೆ ತಕ್ಕಂತೆ ಚೋಟುದ್ದವಾಗಿಯೇ ಇದ್ದನು. ಅವನು ದಿನಾಲು ಎತ್ತುಗಳನ್ನು ಬಿಟ್ಟುಕೊಂಡು ಹೊಲಕ್ಕೆ ಹೋಗುವನು. ಅಲ್ಲಿ ಗಳೆ ಹೊಡೆಯುವ ಕೆಲಸ ಮುಗಿಸಿ ಸಂಜೆಗೆ ಮರಳಿ ಮನೆಗೆ ಬರುವನು.
ಒಂದು ದಿನ ಚೋಟಪ್ಪನು ಗಳೆ ಹೊಡೆಯುತ್ತಿರುವಾಗ ಮೋಡಮುಸುಕಿ ಮಳೆ ಬರುವ ಲಕ್ಷಣಗಳು ಕಾಣತೊಡಗಿದವು. ಚೋಟಪ್ಪನು ಅವಸರವಾಗಿ ಎತ್ತುಗಳ ಕೊರಳು ಬಿಡುವ ಹೊತ್ತಿಗೆ ಮಳೆ ಆರಂಭವಾಗಿಯೇ ಬಿಟ್ಟಿತು. ಅದರೊಡನೆ ಗಾಳಿಯೂ ಭರದಿಂದ ತೀಡತೊಡಗಿತು. ಸುರಕ್ಷಿತವಾಗಿ ಎಲ್ಲಿ
ನಿಲ್ಲಬೇಕೆಂದು ಯೋಚಿಸಿ ಚೋಟಪ್ಪನು ನೀರಿನ ಬಿಂದಿಗೆಯನ್ನು ಬೋರಲು ಹಾಕಿ ನೀರು ಚೆಲ್ಲಿದನು. ಅದು ಬರಿದಾಗಲು ಅದರಲ್ಲಿ ಸೇರಿಕೊಂಡು, ಮಳೆಯ ಇರಸಲು ಸಹ ತಗುಲಬಾರದೆಂದು ಬಿಂದಿಗೆಯ ಮೇಲೆ ಮಗಿ ಸರಿಸಿಕೊಂಡನು.
ಮಳೆಯು ರಪರಪನೆ ಸುರಿಯ ತೊಡಗಿದ್ದು, ಸಂಜೆಗೂ ಬಿಡಲಿಲ್ಲ; ನಡುರಾತ್ರಿಗೂ ಬಿಡಲಿಲ್ಲ. ಬೆಳ್ಳಬೆಳತನಕ ಹೊಡೆಯಿತು. ಎಲ್ಲೆಲ್ಲಿಯೂ ಮಳೆಯ ನೀರು ನಿಂತು ತುಳುಕಾಡಿತು. ಮಳೆಯ ಲಕ್ಷಣವು ಕಡೆಮೆಯಾದುದನ್ನು ತಿಳಿದು ಚೋಟಪ್ಪನು ಮಗಿ ಉರುಳಿಸಿ ಬಿಂದಿಗೆಯೊಳಗಿಂದ ಕಡೆಗೆ ಬಂದನು. ಆದರೆ ಅವನ ಎತ್ತುಗಳು ಕಾಣಿಸಲಿಲ್ಲ. ಸುತ್ತಲೂ ನೋಡಿದನು. ಒಡ್ಡಿನ ಮೇಲೆ, ಒಡ್ಡಿನ ಬದಿಗೆ, ಗಿಡದ ಕೆಳಗೆ ಮರಡಿಯ ಹತ್ತಿರ ಎಲ್ಲಿಯೂ ಎತ್ತುಗಳು ಕಾಣಿಸಲಿಲ್ಲ.
ಹುದಿಲಲ್ಲಿ ಹೆಜ್ಜೆಗಳು ಅಸ್ಪಷ್ಟವಾಗಿ ಮೂಡಿದ್ದವು. ಅವು ಎತ್ತುಗಳ ಹೆಜ್ಜೆ ಮಾತ್ರವಲ್ಲದೆ, ಅವುಗಳೊಂದಿಗೆ ಮನುಷ್ಯ ಹೆಜ್ಜೆಗಳೂ ಕಾಣಿಸಿದವು. ತನ್ನ ಎತ್ತುಗಳನ್ನು ಯಾರೋ ಕದ್ದೊಯಿದ್ದಾರೆಂದು ಚೋಟಪ್ಪನು ನಿರ್ಣಯಿಸಿದನು. ಆ ಹೆಜ್ಜೆಯ ಹೊಳಹು ಹಿಡಿದು ಎತ್ತುಗಳನ್ನು ಹುಡುಕುತ್ತ ಮುಂದೆ ಸಾಗಿದನು.
ಕೆಲವೂಂದು ದಾರಿ ನಡೆದ ಬಳಿಕ ಅಲ್ಲೊಂದು ಚೇಳು ಸಂಧಿಸಿತು. ಕೇಳಿತು – “ಚೋಟಪ್ಪಾ, ಎಲ್ಲಿ ಹೊರಟಿರುವಿ?”
“ನನ್ನ ಎತ್ತುಗಳನ್ನು ಕಳ್ಳರು ಒಯ್ದಿದ್ದಾರೆ. ಅವುಗಳನ್ನು ಹುಡುಕಿಕೊಂಡು ತರಬೇಕಾಗಿದೆ, ಹೊರಟಿದ್ದೇನೆ.”
“ನಾನೂ ನಿನ್ನ ಸಂಗಡ ಬರಲಿಯಾ” ಎಂದು ಚೇಳು ಕೇಳಿಕೊಂಡಿತು.
ಚೋಟಪ್ಪನು ಆಗಲಿ ಎನ್ನಲು, ಚೇಳು ಚೋಟಪ್ಪನನ್ನು ಹಿಂಬಾಲಿಸಿತು. ಹೀಗೆ ಇಬ್ಬರೂ ಸಾಗಿದಾಗ ಹಾದಿಯ ಮೇಲೆ ಬಿದ್ದ ಒಂದು ಗುಂಡುಕಲ್ಲು ಮಾತಾಡಿಸಿತು – “ಇಬ್ಬರೂ ಎಲ್ಲಿ ನಡೆದಿರುವಿರಿ ?”
ಚೇಳು ಹೇಳಿತು – “ಚೋಟಪ್ಪನ ಎತ್ತುಗಳನ್ನು ಯಾರೋ ಕದ್ದೊಯ್ದಿದ್ದಾರೆ. ನಾವು ಹುಡುಕಲು ಹೊರಟಿದ್ದೇವೆ.”
“ಹಾಗಾದರೆ ನಾನೂ ನಿಮ್ಮೊಡನೆ ಬರುವೆನು” ಎಂದು ಗುಂಡುಕಲ್ಲು ಉತ್ಸಾಹ ತೋರಿಸಲು, ಚೋಟಪ್ಪನು “ಆಗಲಿ ಹೊರಡು” ಎಂದನು.
ಈಗ ಪ್ರವಾಸಿಕರು ಮೂವರಾಗಿ ಹೊರಟರು; ಹೊರಟೇ ಹೊರಟರು. ಎತ್ತುಗಳು ಕಣ್ಣಿಗೆ ಬೀಳಲಿಲ್ಲ. ಮುಂದೆ ಒಂದು ಕಂಟಿಯಲ್ಲಿ ಒಂದು ಬುರಲಿ
ಎಂಬ ಕಾಡುಪಕ್ಷಿ ಕುಳಿತಿತ್ತು. ಅದು ಕೇಳಿತು – “ಎಲ್ಲಿಗೆ ಸಾಗಿದ್ದೀರಿ ಜೊತೆಯಾಗಿ?” ಅವು ತಾವು ಹೊರಟಕಾರಣವನ್ನು ಹೇಳಿದವು. ಅವರ ಅಪ್ಪಣೆ ಪಡಕೊಂಡು ಬುರಲಿಯೂ ಅವರೊಡನೆ ಮುಂದುವರಿಯಿತು. ಆ ನಸುಬೆಳಕಿನಲ್ಲಿಯೇ ಚೋಟಪ್ಪನು ತನ್ನ ಎತ್ತುಗಳನ್ನು ಒಂದು ಕೊಟ್ಟಿಗೆಯಲ್ಲಿ ಕಂಡನು. ತನ್ನ ಸಂಗಡಿಗರಿಗೆ ತಾನು ಹೇಳಬೇಕಾದುದನ್ನಲ್ಲ ಹೇಳಿ ಚೋಟಪ್ಪನು ದವಣಿಯಲ್ಲಿ ಅಡಗಿಕೊಂಡನು. ಚೇಳು ಮೇವಿನ ಹತ್ತಿರ ಸುಳಿದಾಡತೊಡಗಿತು. ಗುಂಡುಕಲ್ಲು ಚಪ್ಪರದ ಮೇಲೇರಿ ಕುಳಿತಿತು. ಬುರುಲಿಯು ಅಡಿಗೆಮನೆಯ ಒಲೆಯಲ್ಲಿ ಅವಿತುಕೊಂಡಿತು.
ಎತ್ತುಗಳನ್ನು ಅಟ್ಟಿಕೊಂಡು ಬಂದ ಒಕ್ಕಲಿಗನು ಸಂಜೆಯ ಊಟ ತೀರಿಸಿಕೊಂಡು ಕೊಟ್ಟಿಗೆಯ ಕಡೆಗೆ ಬಂದನು. ಎತ್ತುಗಳ ಮುಂದೆ ಮೇವು ಕಾಣಲಿಲ್ಲ. ಕಣಿಕೆ ಕತ್ತರಿಸಿ ತಂದು ಹಾಕಬೇಕೆಂದು ಮೇಣಿನ ಕಡೆಗೆ ಗೋದಲಿಗೆ ಹೋದನು. ಒಕ್ಕಲಿಗನ ಮನೆ, ಅದೂ ಹಳ್ಳಿಯಲ್ಲಿ. ಅಂದಮೇಲೆ ಒಂದೇ ದೀಪ ಜಿಣಿಮಿಣಿ ಎಂದು ಉರಿಯುತ್ತಿತ್ತು. ಎಲ್ಲಿ ? ಅಡಿಗೆ ಮನೆಯಲ್ಲಿ. ಒಕ್ಕಲಿಗನು ಕತ್ತಲಲ್ಲಿಯೇ ಕೈಯಾಡಿಸುತ್ತ ಮೇವಿನ ಬಳಿಗೆ ಹೇಗಿ, ಕಣಿಕೆಯನ್ನು ತೆಕ್ಕೆಯಲ್ಲಿ ಹಿಡಿದು ಎತ್ತುವಷ್ಟರಲ್ಲಿ ಕಾಲಿಗೆ ಚೇಳು ಕುಟುಕಲು ಬಲವಾಗಿ ಕೂಗಿದನು.
ಎತ್ತಿನ ಮೈ ತಿಕ್ಕುತ್ತಿದ್ದ ಒಕ್ಕಲಿಗನ ಮಗನು ಅವಸರದಿಂದ ತಂದೆಯ ಬಳಿಗೆ ಬರುವಷ್ಟರಲ್ಲಿ ಚಪ್ಪರದ ಮೇಲೆ ಕುಳಿತ ಗುಂಡುಗಲ್ಲು ಉರುಳಲು.
ಆತನ ತಲೆಯೊಡೆದು ನೆತ್ತರು ಸುರಿಯತೊಡಗಿತು. “ದೀಪವನ್ನಾದರೂ ತಕ್ಕೊಂಡು ಬರಬಾರದೇ” ಎಂದು ಅರಚಲು, ಅಡಿಗೆ ಮನೆಯಲ್ಲಿದ್ದ ಹೆಣ್ಣು ಮಗಳು ಸಾವರಿಸಿಕೊಂಡು ಆ ಜಿಣಿಮಿಣಿ ದೀಪ ಎತ್ತಿಕೊಳ್ಳುವಷ್ಟರಲ್ಲಿ ಒಲಿಯೊಳಗಿನ ಬುರಲಿ ಬುರ್ರನೇ ಹಾರಿಹೋಗಿದ್ದರಿಂದ ದೀಪ ಆರಿತಲ್ಲದೆ, ಆ ಒಕ್ಕಲಗಿತ್ತಿಯ ಕಣ್ಣೊಳಗೆ ಬೂದಿ ತೂರಿ ಬೀಳಲು ಕಣ್ಣೊರೆಸುತ್ತ ‘ಅಯ್ಯಯ್ಯೋ’ ಎಂದು ಹಲುಬತೊಡಗಿದಳು. ಆ ಸಂಧಿಯಲ್ಲಿ ಸಾಧಿಸಿ ದವಣಿಯಲ್ಲಿ ಅಡಗಿಕೊಂಡಿದ್ದ ಚೋಟಪ್ಪನು ತನ್ನ ಎತ್ತುಗಳನ್ನು ಬಿಟ್ಟುಕೊಂಡು ಹೊರಬಿದ್ದನು. ಚೇಳು, ಗುಂಡಗಲ್ಲು, ಬುರಲಿ ಅವನನ್ನು ಬೆಂಬಲಿಸಿದರು. ಹೀಗೆ ಚೋಟಪ್ಪನು ಗೆಳೆಯರ ನೆರವಿನಿಂದ ತನ್ನ ಎತ್ತುಗಳನ್ನು ದೊರಕಿಸಿಕೊಂಡು ಮನೆಗೆ ಮರಳಿದನು.
*****