ನನ್ನ ಮುದ್ದು ಚಿಲಿಪಿ ಗಿಣಿಯೇ
ಬಂಗಾರ ತುಂಬಿದ ಗಣಿಯೇ
ಹೂನಗೆ ಅರಳಿದೀ ಮುಖಕೆ
ಹುಣ್ಣಿಮೆ ಆಕಾಶ ಎಣೆಯೇ?
ಹೇಗಿರದೆ ನೀನಿದ್ದೆ ಮಗುವೇ?
ಕತ್ತಲಾಗಿತ್ತಲ್ಲ ಜಗವೇ
ನೀ ಬಂದು ನಗಲು ಈ ಇಳೆಗೇ
ಹರಿದಿದೆ ಬೆಳಕಿನ ಹೊಳೆಯೇ!
ರಸಹೀನವಾಗಿತ್ತು ಬಾಳು-ಈಗ
ಮೊಸರು ಜೇನು ಬೆಣ್ಣೆ ಹಾಲು
ಹಾಳು ಸುರಿಯುತ್ತಿದ್ದ ಹಾದಿ – ಈಗ
ದೇವರ ಉತ್ಸವ ಬೀದಿ!
ಜನ್ಮ ಜನ್ಮದ ಪೂಜೆ ಫಲಿಸಿ
ದೇವರೆ ಬಂದರೊ ಹರಸಿ
ಬರಿದಿದ್ದ ತೋಳಿನ ತುಂಬ
ಉಡುಪಿ ಕೃಷ್ಣನ ಮುದ್ದು ಬಿಂಬ!
*****