ಯಾರೀ ಚಿಣ್ಣ ಕೇದಗೆ ಬಣ್ಣ
ಘಮ ಘಮ ಬಂಗಾರ ಸಣ್ಣ!
ನಕ್ಕರೆ ಬಿಚ್ಚಿದಂತೆಲ್ಲೂ
ಬೆಳಕಿನ ಪತ್ತಲವನ್ನ!
ಹಕ್ಕಿಯ ಕಂಠ, ಕಾರಂಜಿ ಸೊಂಟ
ರಂಭೆ ಊರ್ವಶಿಯರ ನೆಂಟ
ಹೊದಿಕೆಯ ಒದೆದು, ಹೂಗಾಲ ಎಳೆದು
ಬಡಿಯುವ ಹನುಮನ ಬಂಟ!
ಮಿದುಬಾಯಿ ಹಚ್ಚಿ, ಎದೆ ಹಿಗ್ಗ ಕಚ್ಚಿ
ಸುಮ್ಮನೆ ಜಗ್ಗುವ ಖೋಡಿ
ಆಟಕ್ಕೆ ದಣಿದು ಜೊಂಪಿಗೆ ಸರಿದ
ಹೆಪ್ಪಾದ ಚೆಲುವಿನ ಮೋಡಿ
ನಿದ್ದೆಯ ನಡುವೆ ಮುದ್ದಾದ ನಗುವು
ಯಾವ ದೈವದ ಜೊತೆಗೆ ಮಾತೊ!
ಅಪ್ಸರೆ ಯಾರೋ ಕನಸಲ್ಲಿ ತೂಗಿ
ಮುಖದಲ್ಲಿ ತೇಲುವ ಸುಖವೊ!
*****