ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದೀತೆಂದು ಸ್ವತಃ ಶಿವಮೂರ್ತಿ ಶರಣರೇ ಊಹಿಸಿರಲಿಕ್ಕಿಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವವಾಣಿ ಅದೆಷ್ಟು ತೂಕವುಳ್ಳದ್ದು ಎಂಬ ಸತ್ಯ ಗೋಚರವಾಗಿರಲಿಕ್ಕೂ ಸಾಕು. ಹಾವೇರಿ ಮಠದಲ್ಲಿ ಹಾಯಾಗಿದ್ದ ಶರಣರು ೧೯೯೧ರಲ್ಲಿ ಚಿತ್ರದುರ್ಗದ ಐತಿಹಾಸಿಕ ಪ್ರಸಿದ್ದ ಮುರುಘರಾಜೇಂದ್ರ ಬೃಹನ್ಮಠದ ಪಟ್ಟ ಏರುತ್ತಲೇ ಕಟ್ಟಾ ವಿಚಾರವಾದಿಗಳಿಗಿಂತಲೂ ವೇಗದ ಹೆಜ್ಜೆಗಳನ್ನಿಡುವ ಅವಸರದಲ್ಲಿ ಆಗಾಗ ಅಲ್ಲಲ್ಲಿ ಹೆಜ್ಜೆ ತಪ್ಪತ್ತಿರುವುದನ್ನು ಅರಿಯುವ ಗೋಜಿಗೆ ಹೋಗದೆ ಇದ್ದುದರ ಪರಿಣಾಮವೆ ಇಂದು ಸನಾತನಿಗಳಾದ ಪಂಚಪೀಠದ ಸ್ವಾಮಿಗಳು ಮಾತಿನ ಮಹಾದೇವಿಯಂತವರಿಂದಲೂ ಶ್ರೀಸಾಮಾನ್ಯರಿಂದಲೂ ಹಲವು ತೆರನಾದ ವಿರೋಧಗಳನ್ನು ಎದುರಿಸುತ್ತಿರುವುದಲ್ಲದೆ ವಿದ್ವಾಂಸರ ಮುನಿಸಿಗೂ ಬಲಿಯಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಮೆಚ್ಚಿದವರಲ್ಲಿ ನಾನೂ ಒಬ್ಬನಾಗಿದ್ದೆ.
ಅವರೊಡನೆ ಏಕಾಂತದಲ್ಲಿ ವಿಚಾರ ವಿನಿಮಯ ನಡೆಸುವಷ್ಟು ಆತ್ಮೀಯತೆಯೂ ಬೇರೂರಿತ್ತು.
ಅತಿ ವೇಗದ ವಿಚಾರ
ಪ್ರತಿ ವರ್ಷವೂ ನಡೆಯುತ್ತಿದ್ದ ಬೃಹನ್ಮಠದಲ್ಲಿನ ದಸರಾ ಉತ್ಸವವನ್ನು ಶರಣ ಸಂಸ್ಕೃತಿ ಉತ್ಸವವೆಂದು ಕರೆದರೋ, ಎಲ್ಲಾ ಜನಾಂಗದ ಸಹಸ್ರಾರು ಮಂದಿ ಸೇರಿ ಆಚರಿಸುತ್ತಿದ್ದ ಉತ್ಸವ ಲಿಂಗಾಯತರದಷ್ಟೇ ಎಂಬಂತಾಗಿ ಇತರೆ ಮಂದಿ ದೂರವೇ ಉಳಿದರೆಂಬುದನ್ನು ಶರಣರೇಕೋ ಅರಿವ ಗೊಡವೆಗೇ ಹೋಗಲಿಲ್ಲ. ಜಾತಕ, ನಕ್ಷತ್ರ ನೋಡದೆ ಶರಣ ಪದ್ದತಿಯ ವಚನ, ಮಾಂಗಲ್ಯ, ವಿವಾಹ ಮಾತ್ರ ಜನಾದರಣೆಗಳಿಸಿಕೊಂಡಿತು. ಇಂತಹ ಸರಳ ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಯಿತು. ಅನಂತರದ ಶರಣ ಪ್ರಗತಿಪರ ಚಿಂತನೆಗಳೂ ದಿನಕ್ಕೊಂದು ರೂಪ ಪಡೆವಾಗ ಹೌಹಾರಿದವರೇ ಅಧಿಕ. ಮಠದ ಆವರಣದಲ್ಲಿನ ಚೌಡಿ ಕೊತ್ತಲಿನಲ್ಲಿದ್ದ ಚೌಡಿಯನ್ನು ಕಿತ್ತೆಸೆದೂ ಶರಣರು ರಕ್ತಕಾರಿ ಸಾಯದೆ ಉಳಿದರು. ಗಣಪತಿಯ ವಿಗ್ರಹವನ್ನು ಕೀಳಿಸಿ ಏಕೋದೇವೋಪಾಸನೆಗೆ ಒತ್ತುಕೊಟ್ಟರೂ ವಿಘ್ನ ಸಂಭವಿಸಲಿಲ್ಲ.
ಮಹಿಳೆಯರಿಗೆ ಪ್ರವೇಶವಿಲ್ಲದ ಕರ್ತ ಗದ್ದುಗೆಗೆ ಮಹಿಳೆಯರನ್ನು ನುಗ್ಗಿಸಿದಾಗಲೂ ಅವರ ಕೂದಲೂ ಕೊಂಕಲಿಲ್ಲ, ವಿಧವೆಯಿಂದ ಶರಣ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಗೆದ್ದರು. ಅನ್ಯ ಜಾತಿ ವಿವಾಹಗಳನ್ನು ನೆರವೇರಿಸಿ ಅನ್ಯರನ್ನು ಅಪ್ಪಿಕೊಂಡ ಶರಣರು, ಅತ್ತಿಗೆ ಮೈದುನರ ವಿವಾಹ ಮಾಡಿ ವಿವಾದದ ಧೂಳೆದ್ದರೂ ಫೀನಿಕ್ಸ್ನಂತೆ ಎಲ್ಲಾ ಟೀಕೆಗಳ ಮಧ್ಯೆಯೂ ಎದ್ದು ಬರುವ ಸ್ಥೈರ್ಯ ತೋರಿದರು. ರೂಪಕಗಳನ್ನು ಬರೆದು ಬಾಲೆಯರನ್ನು ಕುಣಿಸಿ ಮನ ತಣಿಸಿದರು ಯಾರೂ ಪ್ರಶ್ನಿಸಲಿಲ್ಲ. ಜಗದ್ಗುರು ಡಿಗ್ರಿ ಕೈ ಕೈಬಿಟ್ಟರು ಮಹಾ ಸ್ವಾಮಿಗಳೆಂಬ ‘ಪದ’ ತ್ಯಾಗ ಮಾಡಿದರು. ‘ನಾವು’ ಅನ್ನದೆ ನಾನು ಅಂದುಕೊಂಡರು ವೇದಿಕೆಗಳಲ್ಲಿ ನಿಂತೇ ಆಶೀರ್ವಚನ ನೀಡುವ ಇಂತಹ ಹಲವು ಹತ್ತು ಗಿಮಿಕ್ ಗಳನ್ನು ಮಾಡಿದರೇ ಹೊರತು ಇಂತದ್ದರಿಂದಾಗಿ ಸಮಾಜಕ್ಕೆ ಜನತೆಗೆ ಯಾವ ಲಾಭವೆಂದು ವಿಚಾರ ಮಾಡಲೇ ಇಲ್ಲ.
ಕಿರೀಟ ಅಡ್ಡಪಲ್ಲಕ್ಕಿ ಮೂಲೆಗೆಸೆದರು. ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ಅವರ ದುಶ್ಚಟಗಳನ್ನೆಲಾ ಜೋಳಿಗೆಗೆ ಹಾಕಿಸಿಕೊಂಡು ಬಂದು ಮಠದ ಆವರಣದಲ್ಲಿ ಕೊಡವಿದರು. ಮಠವನ್ನು ಶುಚಿಗೊಳಿಸುವ ಅಭಿರುಚಿ ಬೆಳೆಸಿಕೊಳ್ಳಲೇಯಿಲ್ಲ. ಅವರ ಹಲವು ಹತ್ತು ವಿಚಾರಗಳನ್ನು ಮೆಚ್ಚಿ ನಾನು ಪತ್ರಿಕೆಗಳಿಗೆ ಬರೆದದ್ದುಂಟು.
ಜಾತಿಗೊಬ್ಬ ಸ್ವಾಮಿ
‘ಆದರೆ ಪ್ರಚಾರಪ್ರಿಯತೆಗೆ ಶರಣಾದ’ ಶರಣರು ಜಾತಿಗೊಬ್ಬಸಾಮಿಗಳನ್ನು ಹುಟ್ಟುಹಾಕಲು ತೊಡಗಿದಾಗ ನನ್ನಂತವರಿಗೆ ಕಸಿವಿಸಿಯಾಗದೆ ಇರಲಿಲ್ಲ, ಅದರ ಬಗ್ಗೆ ಒಂದಿಷ್ಟು ಹೇಳಬೇಕೆನಿಸಿದೆ. ಈ ಹೊಸ ಪ್ರಯೋಗ ಆರಂಭದಲ್ಲೇ ಎಡವಟ್ಟಾದೀತೆಂದು ನಾನು ಶರಣರಲ್ಲಿ ಚರ್ಚಿಸಿದ್ದುಂಟು.
ಮೊದಲಿಗೆ ತಮಿಳುನಾಡಿನ ನಾಯಕ ಜನಾಂಗದ ತರುಣನೊಬ್ಬನನ್ನು ಕರೆಸಿಕೊಂಡು ಸ್ವಾಮಿಗಳ ದೀಕ್ಷೆ ನೀಡಿದ ಶರಣರು ನನ್ನನ್ನು ಕರೆಸಿಕೊಂಡು ವಿಷಯ ಅರುಹಿದರು. ಇದರ ಅವಶ್ಯಕತೆ ಬಗ್ಗೆ ಕೆಣಕಿದಾಗ ನಮ್ಮದು ಅನುಭವ ಮಂಟಪದ ರೀತಿ ಪರಿಕಲ್ಪನೆ. ಎಲ್ಲಾ ಜನಾಂಗದ ಅರ್ಹರನ್ನು ಆರಿಸಿ ಸ್ವಾಮಿಪಟ್ಟ ನೀಡಿ ನಮ್ಮ ಶಾಖಾ ಮಠಗಳಿಗೆ ನೇಮಿಸುತ್ತೇವೆ ಎಂದು ಆಧುನಿಕ ಬಸವಣ್ಣನ ಫೋಜ್ ಕೊಟ್ಟರು.
ಅದಕ್ಕೆ ಪ್ರಚಾರ ಬೇಕೆಂದರು. ಅವರ ಆಲೋಚನೆಯಲ್ಲಿ ಅರ್ಥವಿದೆ ಅನ್ನಿಸಿದ್ದರಿಂದ ಪತ್ರಿಕೆಗಳಿಗೆ ಬರೆದೆ. ಆಮೇಲೆ ಆದದ್ದೇ ಬೇರೆ. ಜಾತಿಗೊಬ್ಬನಂತೆ ಸ್ವಾಮಿಗಳನ್ನು ಹುಟ್ಟಿಸಲು ನಿಂತ ಶರಣರು ಉಢಾಳರಿಗೆಲ್ಲಾ ಕಾವಿತೊಡಿಸಿ ಆಯಾ ಜಾತಿಗಳವರ ವಶಕ್ಕೆ ಒಪ್ಪಿಸಿದರು. ಯಾವುದೇ ಜಾತಿಗೆ ಸ್ವಾಮಿ ಮಾಡಿದಾಗಲೂ ಆತನ ಹೆಸರಿನ ಹಿಂದೋ ಮುಂದೋ ಬಸವ ಎಂಬ ಠಸ್ಸೆ ಒತ್ತಿ ಅವರನ್ನೆಲಾ ತಮ್ಮ ಕಬ್ಜಾದಲ್ಲಿಟ್ಟುಕೊಂಡ ಶರಣರ ಮನದಲ್ಲಿ ಮುಂಬರುವ ಚುನಾವಣೆಯಲ್ಲಿ ತಮ್ಮವರಿಗೆ ಬಹು ಅನುಕೂಲವಾದೀತೆಂಬ ಉದ್ದೇಶವೂ ಇದ್ದಿತು. ಬಸವಣ್ಣನವರು ತನ್ನ ಶರಣರನ್ನೆಲ್ಲಾ ಅವರ ಕಾಯಕದಿಂದ ಗುರುತಿಸಿ ಕರೆದು ಗೌರವಿಸಿದರೆ ಶರಣರು ತಾವು ಪಟ್ಟಕಟ್ಟಿದ ಸ್ವಾಮಿಗಳನ್ನು ಜಾತಿಯಿಂದಲೇ ಗುರುತಿಸಿ ಹೆಜ್ಜೆತಪ್ಪಿದರು. ಇದು ಯಾವ ಸೀಮೆ ಬಸವ ತತ್ವವೆಂದು ನಾನು ಪತ್ರಿಕೆಗಳಲ್ಲಿ ಟೀಕಿಸಿ ಬರೆದೆ ಅವರಿದ್ದವೇದಿಕೆಗಳಲ್ಲೇ ಪ್ರಸ್ತಾಪ ಮಾಡಿದೆ. ಹೀಗಾದರೆ ಜಾತಿ ಇನ್ನೆಲ್ಲಿ ಹೋದೀತೆಂದು ಪರಿತಪಿಸಿದೆ. ತಮ್ಮದೇ ಆದ ಸಮರ್ಥನೆಗಿಳಿದರು.
ವಿರಕ್ತ ಮಠದಲ್ಲಿ ಸಂಸಾರಿಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟರು. ವಿರಕ್ತ ಮಠದಲ್ಲಿಯೇ ಮಹಿಳೆಯರನ್ನು ತಂದಿಟ್ಟುಕೊಂಡು ದೀಕ್ಷೆ ಕೊಡುತ್ತಿರುವ ಬಗ್ಗೆಯೂ ಟೀಕಿಸಿ ಬರೆದೆ. ಮೊದಲಿನಂತೆ ಚರ್ಚಿಸುವ ಔದಾರ್ಯ ತೋರದೆ ನನ್ನನ್ನು ಬಹಿಷ್ಕರಿಸಿದಂತೆ ತೋರಿತು. ಆ ಬಗ್ಗೆ ನಾನು ತಲೆಕೆಡೆಸಿಕೊಳ್ಳಲಿಲ್ಲ. ಆದರೇನು ಶರಣರು ಸುಮ್ಮನಿರುವ ಜಾಯಮಾನವಲ್ಲ. ತಾವೇ ಹೊಸದೊಂದು ಧರ್ಮವನ್ನು ಸ್ಥಾಪಿಸಿ ಧರ್ಮ ಸಂಸ್ಥಾಪನಾಚಾರ್ಯರಾಗಬೇಕೆಂಬ ಆಸೆಗೆ ಬಿದ್ದರು.
ಉಳಿಯದ ಶರಣ ಧರ್ಮ
ಈ ಬಗ್ಗೆ ಕಳೆದ ವರ್ಷ ಆಗಷ್ಟ್‌ನಲ್ಲಿ ಪುಟಗಟ್ಟಲೆ ಪತ್ರಿಕೆಗಳಿಗೆ ಜಾಹೀರಾತು ನೀಡಿದರು. ಬಸವ ತತ್ವವನ್ನು ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳಿಸುವ, ಅದಕ್ಕೊಂದು ಹೊಸ ಆಯಾಮ ನೀಡುವುದಲ್ಲದೆ ಬಸವ, ಅಂಬೇಡ್ಕರರಿಗಿಂತಲೂ ಮಿಗಿಲಾದ ಶರಣ ಸಂಹಿತೆ ರೂಪಿಸುವೆನೆಂದೆಲ್ಲಾ ಹೇಳಿಕೆಗಳ ಸಮರವನ್ನೇ ಸಾರಿದರು. ಸರ್ವ ಜನಾಂಗವನ್ನು ಕರೆಯುತ್ತೇನೆ. ಶರಣ ಧರ್ಮ ಸ್ಥಾಪನೆ ಮಾಡುತ್ತೇನೆಂದ ಶರಣರು ದಿಢೀರನೆ ದಿನಾಂಕ ೧೧-೦೮-೨೦೦೩ ರಂದು ತಮಗೆ ಬೇಕಾದವರನ್ನು ಸೇರಿಸಿ ಸಭೆ ನಡೆಸಲು ತೀರ್ಮಾನಿಸಿದರು. ನಾನು ಹೊಸದೊಂದು ಧರ್ಮದ ಅಗತ್ಯವಿದೆಯೇ ಎಂದು ಅಂದೇ ಪ್ರಶ್ನಿಸಿ ಪತ್ರಿಕೆಯೊಂದರಲ್ಲಿ ಪ್ರಶ್ನೆ ಎತ್ತಿದೆ. ಬಸವ ತತ್ವ ತಿದ್ದುವ ಅದಕ್ಕೊಂದು ಹೊಸ ಆಯಾಮ ತಂದುಕೊಡುವ ಪ್ರಯೋಗ ವಚನಾಂಕಿತ ತಿದ್ದಿ ಅಪರಾಧವೆಸಗಿದ ಮಾತಿನ ಮಾದೇವಿ ಸ್ಥಾನದಲ್ಲಿ ತಮ್ಮನ್ನೂ ನಿಲ್ಲಿಸುತ್ತದೆ. ಗುರುಪೀಠ ಮತ್ತು ವಿರಕ್ತ ಪರಂಪರೆಯ ಗುರುಗಳ ಕೂಡಾವಳಿ ನಡೆದ ಸಮಾರಂಭದಲ್ಲಿ ತಮಗೆ ನಿರಾಶೆಯಾದ್ದರಿಂದಲೇ ಹೊಸ ಧರ್ಮ ಸ್ಥಾಪನೆಗೆ ತಾವು ನಿಂತೆನೆಂಬುದು ಅಸಮಂಜಸ.
ವೈದಿಕ ಧರ್ಮವನ್ನು ವಿರೋಧಿಸಿ ಹುಟ್ಟಿಕೊಂಡ ಧರ್ಮಗಳೆಲ್ಲಾ ವೀರಶೈವ ಧರ್ಮವೂ ಸೇರಿದಂತೆ ಜಾತಿಭೂತಗಳಾಗಿಲ್ಲವೆ ಎಂದು ಪ್ರಶ್ನಿಸಿದೆ. ಜನರು ಅತಂತ್ರ ಸ್ಥಿತಿಯಲ್ಲಿ ಶೋಷಣೆಗೆ ತುತ್ತಾದಾಗ, ಅರಾಜಕತೆ ತಲೆದೋರಿದಾಗ, ಕ್ರಾಂತಿ ಸಾಮೂಹಿಕ ಚಳವಳಿ ನಡೆದು ಹೊಸ ಧರ್ಮ ಅನಿವಾರ್ಯವಾಗಿ ಹುಟ್ಟಬೇಕೆ ಹೊರತು ಯಾರದೊ ತೆವಲಿಗಾಗಿ ಅಲ್ಲವೆಂದು ಇದೊಂದು ರೀತಿಯ ಮತಾಂತರವೆಂದು ಪ್ರತಿಕ್ರಿಯಿಸುತ್ತಾ ಇದು ಶಿವಮೂರ್ತಿ ಶರಣರದ್ದೇ ಆದ ಶರಣ ಧರ್ಮವೇ ಎಂದೂ ಟೀಕಿಸಿದೆ.
ಅಂದು ಬೃಹನ್ಮಠದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆಯೇ ಜಿಜ್ಞಾಸೆ ತಲೆದೋರಿ ಅಲ್ಲಿ ಸೇರಿದ ಇತರೆ ಸ್ವಾಮಿಗಳು, ಭಕ್ತರು ಶರಣ ಧರ್ಮದ ಬಗ್ಗೆ ಸಮ್ಮತಿಸದಿದ್ದಾಗ ದಿಕ್ಕು ತೋಚದಂತಾದ ಶರಣರು ಅವರನ್ನು ಸಮಾಧಾನಗೊಳಿಸಿ ‘ಬಸವ ಧರ್ಮ’ ಎಂದು ಟೈಲ್ ಚೇಂಚ್ ಮಾಡಿ ಅನುಮೋದನೆ ಪಡೆದು ಸಭೆ ಮುಗಿಸಿದರು. ನಂತರ ತಮ್ಮ ಹೊಸ ಧರ್ಮದ ಬಗ್ಗೆ ಒಂಭತು ತಿಂಗಳ ಕಾಲ ಮೌನವಾಗಿದ್ದು, ಕೂಡಲಸಂಗಮದಲ್ಲಿ ಮೇ ತಿಂಗಳಲ್ಲಿ ಸಭೆ ಕರೆದ ಶರಣರು ಮಾಂಸಾಹಾರ ಪದ್ಧತಿಯ ಬಸವ ಧರ್ಮದ ಗೊತ್ತುವಳಿ ಮಂಡಿಸಿಬಿಟ್ಟರು.
ಮಾಂಸಾಹಾರಿ ಬಸವ ಧರ್ಮ
ಬಸವಣ್ಣನ ವಚನಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡಿದರು. ಮಾಂಸಾಹಾರಿಗಳಾದ ಬುದ್ಧ, ಏಸು ಅಂತವರನ್ನೆಲಾ ಕಟುಕರ ಅಂಗಡಿ ಮುಂದೆ ನಿಲ್ಲಿಸಿ ಸಮರ್ಥಿಸಿಕೊಂಡರು. ಮಠ ಕಟ್ಟಿಸಿಕೊಟ್ಟ ನಾಯಕರು ಮಾಂಸಾಹಾರಿಗಳೆಂದೂ ಕ್ಯಾತೆ ತೆಗೆದರು. ನಾಯಕರು ಮಠ ಕಟ್ಟಿಕೊಟ್ಟಿದ್ದು ಮಾಂಸಾಹಾರಿಗಳಿಗಲ್ಲ. ಇದೀಗ ತಮ್ಮ ಜನಾಂಗದ ಸ್ವಾಮಿಗಳೆಂದು ಒಪ್ಪಿಕೊಂಅಡಿರುವ ಶ್ರೀ ಪುಣ್ಯಾನಂದ ಪುರಿಗಳೂ ಶಾಖಾಹಾರಿಗಳೆಂಬುದನ್ನು ನಾಯಕರೇ ನೆನಪಿಸಬೇಕಾಯಿತು. ಮಾಂಸಾಹಾರ ಪದ್ದತಿಯಿಂದ ಮನುಷ್ಯನನ್ನು ಯಾರೂ ಮೇಲು ಕೀಳೆಂದು ಗುರುತಿಸೋಲ್ಲ.
ಜಾತಿಯಿಂದ ಮೇಲುಕೀಳೆಂದು ಗುರುತಿಸುತ್ತಾ ಬಂದಿದ್ದಾರೆಂಬುದನ್ನು ಶರಣರು ಅರಿಯದೆ ಮಾಂಸಾಹಾರ ಬಸವ ಧರ್ಮದಲ್ಲಿ ನಿಷೇಧವಲ್ಲವೆಂದು ಘೋಷಿಸಿದ್ದರಿಂದ ಶರಣರ ಸ್ಥಿತಿ ಈಗ ಬೆಣೆ ತೆಗೆದ ಮಂಗನ ಸ್ಥಿತಿಗಿಂತ ಉತ್ತಮವಾಗೇನಿಲ್ಲ.
ದಲಿತರನ್ನು ಆಕರ್ಷಿಸಲು ಮಾಂಸಾಹಾರದ ಜೊತೆಗೆ ಕುಡಿಯುವುದನ್ನೂ ಶರಣರು ಜಾರಿಗೊಳಿಸದಿದ್ದುದೇ ಭಕ್ತರ ಪುಣ್ಯ, ದಲಿತರು ಬೌದ್ದ ಧರ್ಮಕ್ಕೆ ಸೇರಿದಂತೆ ಬಸವ ಧರ್ಮಕ್ಕೆ ಸೇರುತ್ತಾರೆಂಬುದು ಭ್ರಮೆಯಷ್ಟೆ , ಬೌದ್ದ ಧರ್ಮಕ್ಕೆ ಮಹಾ ಮಾನವತಾವಾದಿ ಅಂಬೇಡ್ಕರ್ ಸೇರಿದ್ದರಿಂದ ಪ್ರಭಾವಿತರಾಗಿ ದಲಿತರು ಅತ್ತ ಆಕರ್ಷಿತರಾಗುತ್ತಾರೆಂಬ ಅಸಲಿ ವಿಷಯವನ್ನೇ ಶರಣರು ಉಪೇಕ್ಷಿಸಿದರು. ದಲಿತರು ಯಾವ ಪುರುಷಾರ್ಥಕ್ಕೆ ತಮ್ಮ ನವ ಧರ್ಮ ಸೇರಬೇಕೆಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳದ ಶರಣರು ಮೊದಲಿಗೇ ಹೆಜ್ಜೆತಪ್ಪಿದ್ದರು.
ತಮ್ಮ ಹೊಸ ಧರ್ಮದ ವಿಪರೀತ ವಿಚಾರಗಳ ಬಗ್ಗೆ ವೀರಶೈವ ಲಿಂಗಾಯಿತರನ್ನು ದಿಗ್ಭ್ರಮೆಗೊಳಿಸಿದ ಶರಣರು ಅವರ ಆಕ್ರೋಶಕ್ಕೂ ಗುರಿಯಾದರು, ಎಲ್ಲರ ಪಾಲಿಗೆ ಅವರೇ ಒಂದು ದೊಡ್ಡ ಪ್ರಶ್ನೆಯಾದರು.
ವಾರಸುದಾರರು ?
ತಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಬೃಹನ್ಮಠದ ವಾರಸುದಾರರು ನಾಯಕ ಜನಾಂಗದವರೆಂದರು. ಮಠವನ್ನು ಕಟ್ಟಿಸಿದ ಭರಮಣ್ಣನಾಯಕನ ಹೆಸರನ್ನೇ ಮರೆತರು. ಎರಡು ಬೃಹನ್ಮಠಗಳನ್ನು ನಿರ್ಮಿಸಿ ನೀಡಿದ ಭರಮಣ್ಣನ ಸಮಾಧಿ ಮೇಲುದುರ್ಗದಲ್ಲಿ ಇಂದಿಗೂ ಪಾಳು ಬಿದ್ದಿದೆ. ಅದೆಲ್ಲಿದೆ ಎಂದಾದರೂ ಶರಣರಿಗೆ ಗೊತ್ತಿದೆಯೇ ? ಯಾವುದೇ ಮಠದ ವಾರಸುದಾರರು ಆ ಮಠ ಭಕ್ತರೇ ಆಗಿರುತ್ತಾರೆಂಬ ಸತ್ಯವನ್ನೇ ಮೂಲೆಗೊತ್ತಿದರು. ನಾಯಕ ಮಠ ಕಟ್ಟಿಸಿಕೊಂಡದ್ದು ಮೂಲ ಪೀಠಸ್ಥರಾದ ಶಾಂತವೀರ ಮುರಿಗೆಸ್ವಾಮಿಗಳವರಿಗೆ. ಅವರಿಂದ ಮುಂದುವರೆದ ಮಠ ವೀರಶೈವ ಲಿಂಗಾಯಿತ ನಿಯಮ ಪದ್ದತಿಗಳಿಗನುಸಾರ ಈವರೆಗೂ ನಡೆದುಕೊಂಡು ಬಂದಿರುವುದು ಸರ್ವವೇದ್ಯ, ಜಾತಿಗೊಬ್ಬ ಸ್ವಾಮಿಗಳನ್ನು ಸೃಷ್ಟಿಸಿದ ಶರಣರು ತಾವೂ ಕೂಡ ಕೇವಲ ಲಿಂಗಾಯಿತ ಜಾತಿಗೆ ಮಾತ್ರ ಸೇರಿದ ಸ್ವಾಮಿಯಾಗುತ್ತಾರೆಂಬುದನ್ನು ಒಪ್ಪದೆ ವಿಧಿಯಿಲ್ಲ.
ಹೀಗಿರುವಾಗ ಅವರು ಭಕ್ತರ ಆಶಯದಂತೆ ನಡೆದುಕೊಳ್ಳುವುದು ಅನಿವಾರ್ಯ, ಬಸವ ಧರ್ಮ ಎಂದು ಹೆಸರಿಸದೆ ಪ್ರಾಯಶಃ ಬಸವಪ್ರಿಯರಾರೂ ಮಾಂಸಪ್ರಿಯರ ಗೊಡವೆಗೆ ಬರುತ್ತಿರಲಿಲ್ಲವೆಂಬ ಸತ್ಯ ಶರಣರಿಗೆ ಹೊಳೆಯದೇ ಹೋದದ್ದೇ ಪೀಠ ಬಿಡುವ ರಾದ್ಧಾಂತದವರೆಗೂ ಅವರನ್ನು ಎಳೆತಂದಿದೆ.
ಬಸವ ಧರ್ಮ ಸೇರಲು ಮಾಂಸಾಹಾರಿಗಳಿಗೆ ಅಡ್ಡಿಯಿಲ್ಲವೆಂದಷ್ಟೇ ಹೇಳಿದ್ದರೂ ಜಾಣತನವೆನಿಸುತ್ತಿತ್ತು. ‘ಹೊಲಸು ತಿಂಬುವವನೇ ಹೊಲಯ, ಕೊಲುವವನೇ ಮಾದಿಗ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರೊಳು’ ಎಂದು ಸಾರಿದ ಬಸವಣ್ಣನ ಹೆಸರಿಗೆ ಕಳಂಕ ತಂದರೆಂದು ವೀರಶೈವರು ಬಹಳ ತಡವಾಗಿ ಮುನಿದಿದ್ದಾರೆ. ತಪ್ಪು ಹೆಜ್ಜೆಗಳನ್ನಿಡುತ್ತಲೇ ಬಂದ ಶರಣರನ್ನು ಪ್ರಶ್ನಿಸುವ ತಾಕತ್ತನ್ನೇ ಕಳೆದುಕೊಂಡಂತಿದ್ದ ಭಕ್ತರೀಗ ಎಚ್ಚೆತ್ತಿದ್ದಾರೆಂಬುದೂ ಸಮಾಧಾನಕರ ಸಂಗತಿಯೆ. ಬಸವಣ್ಣ ಕಾವಿ ತೊಡಲಿಲ್ಲ. ಮಠ ಕಟ್ಟಲಿಲ್ಲ. ತನ್ನ ಹೆಸರಿನ ಧರ್ಮವನ್ನು ತಾನೇ ಸ್ಥಾಪಿಸುವ ದುರಾಶೆಗೆ ಬಿದ್ದವನೂ ಅಲ್ಲ.
ಮನುಷ್ಯನ ಅಹಾರದಂತೆ ವಿಚಾರ, ವಿಚಾರದಂತೆ ಆಚಾರ, ಆಹಾರದಂತೆ ಆಲೋಚನೆ ಇರೋಕೆ ಸಾಧ್ಯವಿದೆ. ತಾಮಸಯುಕ್ತ ಆಹಾರದಿಂದ ಮನಸ್ಸು ವಿಕಾರಗೊಳ್ಳುವ ಸಂಭವವಿದೆ.
ಸಾತ್ವಿಕವಾದ ಆಹಾರ ಕ್ರಮ ಮೇಲು ಎಂದು ತಾವೇ ರಚಿಸಿದ ‘ಮಾನವನೇ ಮಹಾದೇವ’ ಎಂಬ ಪುಸ್ತಕದಲ್ಲಿ ಪ್ರಸಾದದ ಬಗ್ಗೆ ಸ್ಪಷ್ಟಪಡಿಸಿದ ಶರಣರು ಇದ್ದಕ್ಕಿದ್ದಂತೆ ಅದಕ್ಕೆ ವಿರುದ್ಧವಾದ ಗೊತ್ತುವಳಿ ಹೊರಡಿಸಿದ್ದು ತಿಳಿದೂ ಇಟ್ಟ ತಪ್ಪು ಹೆಜ್ಜೆ ಅನ್ನಿಸುವುದಿಲ್ಲವೆ ? ಮುರುಘಾಮಠ ದಿವಾಳಿಯ ಅಂಚಿಗೆ ಬಂದಿದೆ ಎಂದು ಜನರಾಡಿಕೊಳ್ಳುವ ಸ್ಥಿತಿಗೆ ಮಠವನ್ನು ತಂದು ನಿಲ್ಲಿಸಿದ ಶರಣರು ಇನ್ನಾದರೂ ಎಚ್ಚರದ ಹೆಜ್ಜೆಗಳನ್ನಿಡುವುದು ಸರ್ವರಿಗೂ ಲೇಸು, ಸಕಲ ಜೀವಾತ್ಯರಿಗೂ ಲೇಸು.
*****