ಅಭಿಮನ್ಯು ವಧೆಗೆ ಖತಿಗೊಂಡ ಪಾರ್ಥನ ಕಂಡು
ಅಪಾರ ಕೃಪೆಯಿಂದ ಶ್ರೀ ಕೃಷ್ಣ ನೆರವಿಗೆ ಬಂದು
ಸುದರ್ಶನವನೆಸೆಯಲಾ ಹಗಲ ಬಾನ್ಗೆ, ಅದು
ಮರೆಮಾಡಿತಂತೆ ಆ ಸೂರ್ಯಮಂಡಲವನು.
ರವಿ ಮುಳುಗಿ ರಾತ್ರಿಯಾಯಿತು ಎನುವ ಭ್ರಾಂತಿಯಲಿ
ತಲೆಯನೆತ್ತಿದ ಜಯದ್ರಥನ ತಲೆ ನಿಮಿಷದಲಿ
ನೆಲೆ ತಪ್ಪಿ, ದೂರದ ಸ್ಯಮಂತಪಂಚಕದೊಳಗೆ
ಧ್ಯಾನದೊಳಗಿದ್ದ ವೃದ್ಧಕ್ಷತ್ರನೂರುವಿಗೆ
ತಗುಲಿ, ಅವನನು ಕೊಂದು ಭೂಮಿಯಲಿ ಮಣ್ಣಾಯ್ತು:
ಅಲ್ಪ ಸಂಗತಿಗೆ ಕಲ್ಪನೆ ಕುದುರಿ ಕಥೆಯಾಯ್ತು.
ಮಾನವನ ಅನ್ಯಾಯವನು ಈಶ್ವರ-ಶಕ್ತಿ
ಹೀನಮಾರ್ಗದಲಿ ಅಂತೂ ಗೆದ್ದ ಉಪ-ಯುಕ್ತಿ
ದೇವರ ಹೆಸರಿನಲ್ಲಿ ಓ ಇದು ಅಚಾತುರ್ಯ!
ಬಿದ್ದವನು ಇಲ್ಲಿ, ಕಂಡಂತೆ, ಧರ್ಮದ ಸೂರ್ಯ!
*****