ರಾಜ್ಯೋತ್ಸವ ಬಂದೇ ಬಿಡುತ್ತದೆ
ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ
ಮುದುರಿದ ಕನ್ನಡಮ್ಮನ ಶೃಂಗಾರ
ನಾಡು ನುಡಿಗಳ ಹೊಗಳಿಕೆ
ರಾಜಕೀಯದವುಗಳ ಉದ್ದುದ್ದ ಭಾಷಣ
ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ
ಪ್ರಶಸ್ತಿಗಳ ಸುರಿಮಳೆ.
ನಾಡಿನ ಜನರೇ ಎದ್ದೇಳಿ ಎದ್ದೇಳಿ
ಬರೆಯುವ ಕವಿಗಳ
ಕಾವ್ಯಕನ್ನಿಕೆ ಇತ್ತಿತ್ತಲಾಗಿ
ಸುಸ್ತಾಗಿ ಜೋಲಿ ಹೋಗಿ ಬೀಳುತ್ತಿದ್ದಾಳೆ.
ಆಯಿತಲ್ಲ ಕನ್ನಡಮ್ಮನಿಗೆ
ನೂರಾರು ಸಾವಿರಾರು ವರುಷಗಳು
ಹಸಿವು ಬಡತನ ನಿರುದ್ಯೋಗ
ಕನ್ನಡಮ್ಮ ಸಿಕ್ಕು ಒದ್ದಾಡುತ್ತಿದ್ದಾಳೆ,
ನಾಲಿಗೆ ತೊದಲುತಿದೆ
ನೆರೆ ರಾಜ್ಯಗಳ ಭಾಷೆಯಲಿ
ವಿದೇಶಿಯರ ವಿಲಾಸಗಳಲಿ
ಪಬ್ – ಡಿಸ್ಕೋ ಸಂಸ್ಕೃತಿಗಳಲಿ
ಅಷ್ಟೇ ಅಲ್ಲ
ತನ್ನ ಸ್ವಾರ್ಥ ರಾಜಕೀಯ
ಮಕ್ಕಳ ಅಧಿಕಾರ ದಾಹ ಕಚ್ಚಾಟಗಳಲಿ
ಸಾಹಿತಿಗಳ ಇಬ್ಬಗೆಯ ನೀತಿಗಳಲಿ
ಸಮಾಜದ ಕಳಂಕ ಲಂಪಟರ
ಧೂರ್ತ ಅನಾಚಾರ
ಅತ್ಯಾಚಾರರ ಹತ್ಯಾಕಾಂಡಗಳಲಿ
ಅಮ್ಮ ಕನ್ನಡಮ್ಮ
ಸುಸ್ತಾಗುತ್ತಿದ್ದಾಳೆ.
ಪ್ರತಿ ವರ್ಷಗಳ ರಾಜ್ಯೋತ್ಸವಗಳಲಿ
ಕನ್ನಡಮ್ಮನ ಮಕ್ಕಳು
ಏರಿದ್ದೆಷ್ಟೇ ಇದ್ದರೂ
ಅಮ್ಮ ಮಾತ್ರ ಇನ್ನೂ ಇನ್ನೂ
ಪ್ರಪಾತದಾಳಕ್ಕೆ ಇಳಿಯುತ್ತಲೇ ಇದ್ದಾಳೆ
ಭರ್ರನೆ ಬಂದು ಝರ್ರನೆ ಇಳಿದು ಹೋಗುವ
ರಾಜ್ಯೋತ್ಸವ ರಾಜಕೀಯ
ಉತ್ಸವಗಳಾಗುತ್ತಿವೆ,
ಕನ್ನಡಮ್ಮನಿಗೆ ಕ್ಯಾನ್ಸರ ಬಂದರೇನು ಗತಿ!
ಬನ್ನಿ ಎಲ್ಲರೂ
ಕನ್ನಡಮ್ಮನಿಗೆ ಪ್ರೀತಿ ಕೊಡೋಣ
ಸುತ್ತುವರಿಯೋಣ, ಕಾಯೋಣ
ಉಳಿಸಿಕೊಳ್ಳೋಣ
ಅವಳ ಮುಖದ ಮೇಲಿನ
ಶಾಂತ ಸ್ವರೂಪದ
ಸಂತೋಷದ ಹೆಮ್ಮೆಯ
ನಗು ಕಾಣೋಣ
ಬನ್ನಿ ಎಲ್ಲರೂ, ಬನ್ನಿ ಎಲ್ಲರೂ
*****