೧
ನಿರ್ಜನವಾದ ಬಯಲು
ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ
ಒಂದಿಷ್ಟು ಇಳಿಬೆಳಕು ಮಾತ್ರ
ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ
ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ)
ರಾಮುಲುವೂ ಸೋಮುಲುವೂ
ಅನುಮಾನಿಸುತ್ತ ಅನುಮಾನಿಸುತ್ತ ಪ್ರವೇಶಿಸುವರು
ಅಂಗಿಯ ಬದಿಗೆ ಜೋತಕೈ, ಕಚ್ಚೆಯ ಕೆಳಗೆ ದೊಂಗಾಲು
ತಲೆಯಿರುವಲ್ಲಿ ಮುಂಡಾಸು-ದೂರಕ್ಕೆ ಇಷ್ಟೆ-
ಒಂದು ಕ್ಷಣ ಮುಖ ಮುಖ ನೋಡುತ್ತ ನಿಲ್ಲುವರು
ನಂತರ ಲಗುಬಗನೆ
ಚೆಂಡುಗಳನ್ನರಸುತ್ತ ಬೇರೆ ಬೇರೆ ದಿಕ್ಕುಗಳಿಗೆ ಚದುರುವರು
ಹೀಗೆ ಅರಸುತ್ತ, ಕಂಡುಹುಡುಕುತ್ತ
ಹಲವು ಕಾಲದ ಮೇಲೆ
ಪಿಚ್ಚಿನಲ್ಲಿ ಇಬ್ಬರೂ ಭೇಟಿಯಾಗುವರು
ನಂತರ ವಿಕೆಟುಗಳನ್ನು ಹೆಕ್ಕಿ ತಬ್ಬಿಕೊಂಡು
ದಾಪುಗಾಲುಗಳನ್ನು ಹಾಕುತ್ತ ನಿಷ್ಕ್ರಮಿಸುವರು
೨
ಇಬ್ಬನಿಯಾದರೋ ನೆಲಕ್ಕೆ ತೆಳ್ಳಗಿನ ಮುಸುಕು ಹಾಕುತ್ತಿದೆ
ಆಕಾಶದಲ್ಲಿ ನಾಲ್ಕಾರು ನಕ್ಷತ್ರಗಳು ಬಿದ್ದಿವೆ
ಆಲಸಿಗಳಾದ ಕತ್ತೆಗಳು ಮಾತ್ರ ಯಾವುದನ್ನೂ ಗಮನಿಸದೆ
ನಿಶ್ಚಲವಾಗಿ ನಿಂತಿವೆ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಮತ್ತೆ ಪ್ರವೇಶಿಸುವರು
ನೆಟ್ಟದೃಷ್ಟಿಯಿಂದ ಪಿಚ್ಚಿನ ಕಡೆಗೆ ದಪದಪನೆ ಧಾವಿಸುವರು
ಅದರ ಹುರಿಹಾಸನ್ನು
ಎಡಗಡೆಯಿಂದೊಬ್ಬ, ಬಲಗಡೆಯಿಂದೊಬ್ಬ
ಎತ್ತಿ ಸುತ್ತಲು ಮನಸ್ಸು ಮಾಡುವರು
ಸುತ್ತುತ್ತ ಉರುಳುರುಳಾಗಿ ಬೆಳೆಯುತ್ತಿರುವ ಹಾಸಿನ
ಉರುಳಿಗೆ ಕೈಗಳನ್ನೂ ನೆಲಕ್ಕೆ ಕಾಲುಗಳನ್ನೂ
ಊರಿ ನೂಕಿ ಸೆಟೆದು ಮುಗ್ಗರಿಸಿ ಬೀಳುವರು
ಕೆಳಗೊಬ್ಬ, ಮೇಲೊಬ್ಬ
ಬಿದ್ದರೂ ಬಿಡದೆ, ಕೈ ಬದಲಾಯಿಸುತ್ತ, ಏದುತ್ತ
ಎತ್ತಿ ಎಳೆದು ದೂರಕ್ಕೆ ಸಾಗಿಸುವರು
೩
ಜನವರಿಯ ಇರುಳಾದರೋ ಯಥೇಷ್ಟ ಹೆಪ್ಪುಗಟ್ಟುತ್ತಿದೆ
ಮೈದಾನು ಯಾವುದು, ಮರ ಯಾವುದು ಗೊತ್ತಾಗುವುದೆ ಕಷ್ಟ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಭಾರವಾದ ಕೂಜೆಗಳನ್ನು ಎತ್ತಿಕೊಂಡು ಬಿಡದೆ ಪ್ರವೇಶಿಸುವರು
ಕುಸಿದುಹೋಗುತ್ತಿರುವ ಕಾಲುಗಳನ್ನು ಲೆಕ್ಕಿಸದೆ
ಪಿಚ್ಚಿನ ಕಡೆಗೆ ಚುರುಕಾಗಿ ಪುಟಪುಟನೆ ಹೆಜ್ಜೆ ಹಾಕುವರು
ಬಾಯಲ್ಲಿ ಒಂದೊಂದು ಬೀಡಿ
ಜೋಡಿ ನಕ್ಷತ್ರಗಳಂತೆ ಉರಿಯುತ್ತ
ರಾಮುಲುವೂ ಸೋಮುಲುವೂ
ಧೂಳೆಬ್ಬಿಸಿ ಸುಸ್ತಾಗಿ ಮಲಗಿದ ಬಯಲ ಮೈಗೆ
ನೀರು ಸಿಂಪಡಿಸಲು ತೊಡಗುವರು
ಕ್ರಮೇಣ ದಟ್ಟವಾದ ಕತ್ತಲು ಎಲ್ಲವನ್ನೂ ಆವರಿಸುವುದು
ಸ್ವಲ್ಪ ಹೊತ್ತಿನಲ್ಲೆ ಒಂದು ಬೀಡಿ ನಂದುವುದು
ನಂತರ ಇನ್ನೊಂದು
*****