ಗಂಗೋತ್ರಿಯಲ್ಲಿ ರಾತ್ರಿ
ರೋಡುಗಳೇಕೆ ನಡೆಯುವುದಿಲ್ಲ
ಕಟ್ಟಡಗಳೇಕೆ ತೆರೆಯುವುದಿಲ್ಲ
ಮರಗಳು ನಿಂತದ್ದೇಕೆ
ಮಣ್ಣು ಮಲಗಿದ್ದೇಕೆ
ಸಮಯ ಯಾಕೆ ತುಂಡಾಗಿದೆ ಹೀಗೆ
ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ
ವ್ಯವಾಗುತ್ತಿದೆ
ನನಗೆ ಗೊತ್ತಿರುವ ಸಮುದ್ರದಂಡೆಗೆ
ಎಷ್ಟು ದೂರ ಇಲ್ಲಿಂದ
ಎಲ್ಲಿ ಮೊಗವೀರರ ದೋಣಿಗಳು
ದೋಣಿಗಳಾಗಿರದೆ ತಿಮಿಂಗಿಲಗಳಾಗುತ್ತವೆ
ನಿದ್ರಾವಸ್ಥೆ ಸುಮ್ಮನೆ ಜಡವಾಗದೆ
ಕೈಕಾಲು ತೊಡೆಗಳ ಸಂಬಂಧದಲ್ಲಿ
ವೀರ್ಯಗೊಳ್ಳುತ್ತದೆ
ಉಪ್ಪು ನೀರಿನ ನಿಲ್ಲದ ತೆರೆಗಳಲ್ಲಿ
ಶ್ವಾಸ ಸ್ವೀಕರಿಸುತ್ತದೆ ಬಿಡುತ್ತದೆ
ಅಂಥ ರಾತ್ರಿ ಇದಲ್ಲ
ಗಂಗೋತ್ರಿಯಲ್ಲಿ ರಾತ್ರಿ
ಕುಕ್ಕನಹಳ್ಳಿನ ಹೆಪ್ಪಿನಂತೆ ಥಂಡಿ
ಬರೇ ಆಕಾಶ ನೆಲಕ್ಕೆ ಕವುಚಿ
ಒಂದರೊಳಗೊಂದು ಜಾರಿ
ಉಂಟಾದ ಗೋಲ
ಕ್ರಮೇಣ ಕುಗ್ಗುತ್ತಿದೆ-ಸ್ಫೋಟಿಸುವುದಿಲ್ಲ
ಇದರ ಮೈಯಾಚೆಗೆ ಏನೂ ಕಾಣಿಸುತ್ತಿಲ್ಲ
ಆಚೆ ಕಣಿವೆ ಬಯಲುಗಳ ಓರೆಕೋರೆಗಳಲ್ಲಿ
ಕತ್ತಲೊ ಮಬ್ಬೊ ಹಗಲಿದ್ದರೂ ಇದ್ದೀತು
ಅಂಥ ಅವ್ಯಕ್ತ ವಲಯಗಳಲ್ಲಿ ಯಾವ ಜನ ಯಾವ ಭಾಷೆ
ಇಲ್ಲಿ ಮಗ್ಗಲು ಬದಲಿಸಿದಾಗ ಅಲ್ಲಿ ಏನಾಗುತ್ತದೆ?
*****