ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು
ಒಂದು ಹೂದೋಟ ಬೇಕು, ಹೂದೋಟದಲ್ಲಿ
ಹೂವುಗಳು ಬೇಕು, ಹೂವುಗಳಲ್ಲಿ
ಚಿಟ್ಟೆಗಳು ಕೂತುಕೊಳ್ಳಬೇಕು.
ಈಗ ಹೊರಡಿರಿ ಮೆಲ್ಲನೆ. ಎಷ್ಟು
ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ
ಬೆಕ್ಕು ನಡೆಯುವ ಹಾಗೆ. ಮುಂದೆ
ದೊಡ್ಡ ಡೇಲಿಯಾ ಉಂಟು. ಅದರಲ್ಲಿ
ಶುದ್ಧ ಹಳದಿಯ ಚಿಟ್ಟೆಯುಂಟು. ಆಚೀಚೆ
ನೋಡಬಾರದು, ಕೈಗಳು ನಡುಗಬಾರದು.
ಈಗ ಚಿಟ್ಟೆಯಲ್ಲದೆ ಬೇರೇನೂ ಇಲ್ಲ
ಈ ಜಗತ್ತಿನಲ್ಲಿ, ನಿಮ್ಮ ಮನಸ್ಸಿನಲ್ಲಿ.
ಆಯಿತೆ? ಎರಡು ಬೆರಳುಗಳ ಮಧ್ಯೆ
ಅದು ಸಿಕ್ಕಿಬಿತ್ತೆ? ವದ್ದಾಡುತ್ತಿದೆಯೆ?
ಅದರ ರೆಕ್ಕೆಗಳು ಹರಿಯುತ್ತಿವೆಯೆ? ಏನು,
ಬಿಟ್ಟುಬಿಟ್ಟರೆ? ಹಾಗಿದ್ದರೆ
ಬೆರಳುಗಳಿಗಂಟಿದ ಬಣ್ಣವನ್ನು,
ಮತ್ತು ರೆಕ್ಕೆಯ ಚೂರುಗಳನ್ನು
ಒರೆಸಿಕೊಳ್ಳಿರಿ-ನಿಮ್ಮ ಬಟ್ಟೆಗೆ, ಮೈಗೆ,
ಅಥವಾ ಇನ್ನೆಲ್ಲಿಗೆ?
*****