ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ
ಪುರಾತನದ ದೈವಗಳು. ಯಾರೂ ತೆರೆಯರು. ಸಂಪುಟದಿಂದ
ಹೊರ ಬರುವ ದೇವರುಗಳು ಕಲ್ಲಿನವು. ಹಲವು ಕಾಲದ
ನೀರಿನಿಂದ ಸವೆದವು. ಮನೆಹಿಂದೆ ಒಂದೊಂದು ಮರದ ಮೇಲೂ
ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹಾಗೆ.
ಸೊಂಟದೆತ್ತರ ಮುಳಿಹುಲ್ಲು ಬೆಳೆದ ಗುಡ್ಡಗಳಲ್ಲಿ ಬೆಳಗಿನ ಜಾಮ
ದಾರಿತಪ್ಪಿಸುವ ಯಕ್ಷಿಗಳು. ಕಾನತ್ತೂರ ಕಾಡಿನಲ್ಲಿ ರಾತ್ರೋರಾತ್ರಿ
ಕಾಣಿಸುವುವು ಕೊಳ್ಳಿಗಳ ಬೆಳಕು. ಅಕಸ್ಮಾತ್ ಕೇಳಿಸುವ
ವಿಕಾರವಾದ ಕೂಗುಗಳಿಗೆ ಯಾರೂ ಹೆದರುವುದಿಲ್ಲ. ಕಾರಣ
ನಾವು ಎಲ್ಲರೊಂದಿಗೂ ಸ್ನೇಹದಲ್ಲೆ ಇದ್ದೇವೆ. ಆಗಿಂದಾಗ್ಗೆ
ಕೊಟ್ಟಿದ್ದೇವೆ ತೆಂಗಿನಕಾಯಿ ಅಥವ ಕೋಳಿ. ನಾನೂರು ಜನಸಂಖ್ಯೆಯ
ಗ್ರಾಮದಲ್ಲಿ ನಾವು ನಿಜಕ್ಕೂ ಎಂಟುನೂರು ಜನರು.
*****