೧
ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ
ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ
ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ
ಅದರಿದರ ಮಿದುಳು ಯಾವುದೋ ನಾನು ಕಾಣೆ
ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ,
ರೈಲು ನಿಲ್ದಾಣವೆ, ಅಥವ ಕಾವಿ ಬಳಿದ ಪೋಲೀಸು ಠಾಣೆ?
ಮಿದುಳಿರುವುದಕ್ಕೆ ಇದೇನೂ ಸಾವಯವ ಜೀವಿಯಲ್ಲ ಖರೆ
ಬಹುಶಃ ಇದ್ದೀತು ಇದು ಬೆಳೆದುಬಂದ ರೀತಿ ಸರಿಯಲ್ಲದೆ, ಅಥವ
ನಾವು ಮಾಡಿದ ಹೋಲಿಕೆಯಲ್ಲಿ ಏನೊ ತೊಂದರೆ
೨
ಇದ್ದರೂ ಇರಬಹುದು. ಆದರೂ ಈ ಸ್ಥಾವರಕ್ಕೆಷ್ಟು ನೆನಪು
ಕದಂಬರು ನಿಲ್ಲಿಸಿದ ಶಾಸನ ಮತ್ತೆ ಯಾರೋ ಹೇರಿಸಿದ ಮದರಾಸು
ಸಂಸ್ಥಾನ, ನಿನ್ನೆ ಮೊನ್ನೆ ಈ ಕಡೆ ಬಂದವನು ಟಿಪ್ಪು
ಇದು ಚರಿತ್ರೆ. ಚರಿತ್ರೆಯೊಂದೇ ನೆನಪಲ್ಲ. ನೆನಪು ಉಪ್ಪಿನ ಹಾಗೆ
ಸಮುದ್ರದಿಂದ ಮೊಗೆದುದು ಅಥವ ಭೂಮಿಯೊಳಗಿಂದ ಅಗೆದುದು
ಮೈಯಲ್ಲಿ ಕರಗಿರುವುದು, ಹರಳುಗಟ್ಟುವುದಿಲ್ಲ ಒಳಗೆ
ತಲೆಹೊರೆಯಾಗಿ ಇಲ್ಲಿಗಿದು ಬಂತು ಈ ನೆನಪು ಬಳಸು ದಾರಿ
ಸಾಗಿ, ನೆಲಕ್ಕೆ ಸುರಿದ ಇಲ್ಲವೇ ಉಟ್ಟ ವಸ್ತ್ರಕ್ಕೆ ಒರಸಿದ ಬೆವರಾಗಿ
ಕಣ್ಣ ಒಸರಿನಲ್ಲಷ್ಟು ನಡೆಯೆಬ್ಬಿಸಿದ ಧೂಳಿನಲ್ಲಷ್ಟು ಸೇರಿ
೩
ಬಂದರೆ ಆಲ ಅಶ್ವತ್ಥ ಗುಡಿಗುಡಾರಗಳು ಗದ್ದೆ ಬಯಲು
ಗಡಿ ಗಡಿಗೆ ಒಮ್ಮೆ ನಿಲ್ಲಿಸಿದ್ದ ಹೊರೆಕಂಬಗಳು
ಮತ್ತೆ ನಸುಕಿಗೇ ಕಟ್ಟಿದ ಎತ್ತಿನ ಗಾಡಿಗಳ ಸಾಲು
ಈ ನೆನಪಿನ ಸಾಕ್ಷಿ. ಹೀಗೆ ಈ ಪೇಟೆಯ ನರಗಳಿಗೆ ಎಲ್ಲೆಲ್ಲೂ
ಸಾಗಿ ಸೆಣೆದು ಸೇರುವಾತುರ ಈ ಹೊರೆ ಹೊತ್ತು ಆ ಅಗೋಚರ ಕೇಂದ್ರ
ಯಾವ ಅರೆಗನಸಿನ ತೆಕ್ಕೆಯಲ್ಲೊ ಯಾವ ಕೊಚ್ಚೆಯ ಮಗ್ಗುಲಲ್ಲೊ
ಸೇರುವುವು ಸೇರಲೇಬೇಕಾಗಿ. ಒಂದು ಪೇಟೆಯೆಂದರೆ ನೆಲ
ಸಾರಿಸಿ ಹಾಕಿದ ರಂಗೋಲಿಯಲ್ಲ, ಟೇಬಲಿನ ಮೇಲೆ ಹೊಳೆಯುವ
ತಾಟಿನಲ್ಲಿ ನೀಟಾಗಿ ಕತ್ತಿರಿಸಿಟ್ಟ ಕಸಿಮಾವಿನ ಹಣ್ಣಲ್ಲ
೪
ಒಂದು ಪೇಟೆಗೆ ತನ್ನದೇ ಎದೆಬಡಿತವಿದೆ. ಕೇಳಿಲ್ಲವೇ ನಾವದನ್ನು
ಒಂಟಿಯಾಗಿ ಎಲ್ಲಿಂದೆಲ್ಲಿಗೆ ಸಾಗುವ ರಾತ್ರಿ ಉಗಿಬಂಡಿಯ
ಭಾರವಾದ ಕಾಲಸಪ್ಪಳದಲ್ಲಿ ಮಿಳಿಯುವುದನ್ನು
ಕಂಡಿಲ್ಲವೇ ಅದು ಮುದುಕುವುದು ಘಟ್ಟದ ಕೆಳಗೆ ಮಳೆ ಬೀಳುವ ಇರುಳು
ವೃದ್ಧನಂತೆ ಅಥವ ತೆರೆಯುವುದಂಗಾತ ಹೆಣ್ಣಿನಂತೆ
ಮುಂದೊತ್ತುವಾಗ ಯಕ್ಷಿಣೀ ಲಾಂದ್ರದ ನೆರಳು
ಒಂದು ಪೇಟೆಯೆಂದರೆ ಬರೇ ಅಂಗಡಿಬೀದಿಗಳಲ್ಲ. ಇದರ ವಸ್ತು
ಈ ಹೊಗೆಹಿಡಿದ ಹಂಚಿನ ಮತ್ತು ಮುಳಿಮನೆಗಳ ಬದಿಗೆ
ಅಡ್ಡಾದಿಡ್ಡಿ ಹೆಜ್ಜೆಗಳಲ್ಲಿ ಮೂಡಿದ ಪ್ರತ್ಯೇಕ ಗುರುತು
೫
ಒದಗಬೇಕಷ್ಟೆ ಇಲ್ಲಿ ನಡೆವವರಿಗೆ ಮಾತ್ರ. ಎಷ್ಟೆ
ಹೊರಟರೂ ಮತ್ತೆ ತನ್ನ ಒಳಪ್ರಾಕಾರಗಳಲ್ಲಿ ಸುತ್ತಿಸುವ ಕೋಟೆ
ನೀವೇ ಹೇಳಿದಂತೆ ನಮಗೆ ವಿಧಿಸುವುದು ನಾವು ಕಲ್ಪಿಸಿದ ಪೇಟೆ
*****