ಅಯ್ಯ ನರರೊಳು ಹುಟ್ಟಿ,
ಮರಹಿನೊಳಗೆ ಬಿದ್ದು, ಒಳತಂದು ಮಹಾಶರಣರೊಳು
ಎನ್ನ ನಿಲಿಸಿ ಕುರುಹ ತೋರಿದರು.
ಗುರುವೆಂಬುದನರುಹಿದರು. ಜಂಗಮವೆಂಬುದನರುಹಿದರು.
ಅವರ ನೆಲೆವಿಡಿದು ಮನವ ನಿಲಿಸದೆ,
ಕಾಯಜೀವವೆಂಬುದನರಿದೆ. ಭವಬಂಧನವ ಹರಿದೆ.
ಮನವ ನಿರ್ಮಳವ ಮಾಡಿದೆ. ಬೆಳಗಿದ ದರ್ಪಣದಂತೆ,
ಚಿತ್ತ ಶುದ್ಧವಾದಲ್ಲಿ, ನೀವು ಅಚ್ಚೊತ್ತಿದ್ದ
ಕಾರಣದಿಂದ ನಿಮ್ಮ ಪಾದವಿಡಿದು ನಾ
ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ