ವಿವೇಕಾನಂದ ಮತ್ತು ಅಂಬೇಡ್ಕರ್ ತೌಲನಿಕ ಚಿಂತನೆ

ಭಾರತದ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಅದರ ವಸ್ತುಸ್ಥಿತಿಯಲ್ಲಿ ಅರ್ಧೈಸಿಕೊ೦ಡ ಮಹಾನುಭಾವರಲ್ಲಿ ಪ್ರಮುಖವಾಗಿ ಕಂಡುಬರುವ ಎರಡು ವಿಶಿಷ್ಟ ಶಕ್ತಿಗಳೆಂದರೆ ವಿವೇಕಾನಂದ ಮತ್ತು ಅಂಬೇಡ್ಕರ್. ಈ ದೇಶದ ಧಾರ್ಮಿಕ ಗ್ರಂಥಗಳನ್ನು ಅದರ ನಿಜವಾದ ಅರ್ಥದಲ್ಲಿ ಆಮೂಲಾಗ್ರ ಅರಗಿಸಿಕೊಂಡು ಅದಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಮಾನವ ಜನಾಂಗಕ್ಕೆ ಹೊಸಬೆಳಕನ್ನು ನೀಡಿದ ಮಹಾಪುರುಷರಿವರು. ಇವರು ಇತಿಹಾಸದಲ್ಲಿ ಕೇವಲ ಬದುಕಿದವರಲ್ಲ ಬದುಕಿ ಇತಿಹಾಸವನ್ನು ನಿರ್ಮಿಸಿದವರು.

ವಿವೇಕಾನಂದರು (ಜನನ: ೧೨-೧-೧೮೬೩; ಮರಣ: ೪-೭-೧೯೦೨) ಬದುಕಿದ್ದು ಕೇವಲ ಮುವತ್ತೊಂಭತ್ತು ವರುಷ ಆರು ತಿಂಗಳು. ಅಂಬೇಡ್ಕರ್ (ಜನನ: ೧೪-೪-೧೮೯೧; ಮರಣ:೬-೧೨-೧೯೫೬) ಬದುಕಿದ್ದು ಅರವತ್ತೈದು ವರ್ಷ ಎಂಟು ತಿಂಗಳು.

ವಿವೇಕಾನಂದರ ತಂದೆ ಖ್ಯಾತವಕೀಲರಾಗಿದ್ದರೂ ಅವರು ಬಿಟ್ಟು ಹೋದದ್ದು ಬಡತನವನ್ನು ಹಾಗೂ ಮನೆಯ ಸಮಸ್ಯೆಗಳನ್ನು. ಆದರೆ ಅವರು ವಿವೇಕಾನಂದರಿಗೆ ವ್ಯಕ್ತಿತ್ವದ ಮಹತ್ವವನ್ನು ಮನವರಿಕೆ ಮಾಡಿದ್ದರು.

ಅಂಬೇಡ್ಕರ್ ಅವರ ತಂದೆ ಒಂದು ಸೈನಿಕ ಶಾಲೆಯ ಮುಖ್ಯಸ್ಥರಾಗಿದ್ದರೂ ಬಡತನ ಅವರ ಬೆನ್ನುಹತ್ತಿತ್ತು. ಆದರೂ ಅವರು ತಮ್ಮ ಹದಿನಾಲ್ಕನೆಯ ಮಗ ಅಂಬೇಡ್ಕರ್‌ಗೆ ವಿದ್ಯೆ ನೀಡುವಲ್ಲಿ ಹಿಂತೆಗೆಯಲಿಲ್ಲ. ಹೀಗೆ ಈ ಇಬ್ಬರೂ ಮಹಾನ್‌ ವ್ಯಕ್ತಿಗಳ ಹಿನ್ನೆಲೆಯಲ್ಲಿ ಬಡತನ ಕಷ್ಟ ಕಾರ್ಪಣ್ಯಗಳು ದಟ್ಟವಾಗಿವೆ.

ಇಬ್ಬರೂ ವಿಶಿಷ್ಟ ರೀತಿಯಲ್ಲಿ ಅವುಗಳನ್ನು ಮೀರಿ ಸಾಧನೆಗೈದು ವಿಶಿಷ್ಟ ವ್ಯಕ್ತಿಗಳಾಗಿ ಮಾನ್ಯರಾಗಿದ್ದಾರೆ. ವಿಚಿತ್ರವೆಂದರೆ ಈ ಇಬ್ಬರ ಪ್ರತಿಭೆ ಪ್ರಕಾಶಮಾನಕ್ಕೆ ಬರಲು ಧನ ಸಹಾಯ ಮಾಡಿದ ಇಬ್ಬರೂ ಮಹರಾಜರುಗಳೆ.

ವಿವೇಕಾನಂದರಿಗೆ ಹೊರದೇಶಕ್ಕೆ ಹೋಗಲು ಖೇತ್ರಿಯ ಮಹಾರಾಜರು ಸಹಾಯ ಮಾಡಿದರೆ ಅಂಬೇಡ್ಕರವರು ಅಮೇರಿಕಾಕ್ಕೆ ಹೋಗಲು ಬರೋಡಾದ ಮಹಾರಾಜ ಸಯ್ಯಾಜಿರಾವ್‌ ಗಾಯಕವಾಡ್‌ ಅವರು ಸಹಾಯ ಮಾಡಿದ್ದಾರೆ.

ಇವರಿಬ್ಬರ ವಿದ್ವತ್ತನ್ನು ಗುರುತಿಸಿ ಅವರುಗಳ ಪ್ರತಿಭೆಗೆ ಪುರಸ್ಕಾರ ಮಾಡಿದ ಮೊದಲಿಗರೆಂದರೆ ಅಮೇರಿಕಾದವರೆ. ಇದಕ್ಕೆ ಬದಲಾಗಿ ಇವರಿಗೆ ಭಾರತದಲ್ಲಿ ಸಿಕ್ಕಿದ್ದು ಅಸೂಯೆ ಅಸ್ಪೃಶ್ಯತೆಯ ಬಿಸಿ.

ಹೊರ ದೇಶದಿಂದ ಬಂದ ಒಂದೇ ಕಾರಣಕ್ಕಾಗಿ ವಿವೇಕಾನಂದರನ್ನು ಇಲ್ಲಿಯ ದೇವಸ್ಥಾನದ ಒಳಕ್ಕೆ ಬಿಡಲಿಲ್ಲ. ಸಮಾಜ ಸುಧಾರಕರ ಪತ್ರಿಕೆಯಲ್ಲಿ ವಿವೇಕಾನಂದರನ್ನು ಶೂದ್ರನೆಂದು ಕರೆದು ಸನ್ಯಾಸಿಯಾಗಲು ಅಧಿಕಾರವಿಲ್ಲವೆಂದು ಖಂಡಿಸಲಾಯ್ತು.

ಅಂಬೇಡ್ಕರ್ ಅವರನ್ನು ಅವರು ಬೌದ್ಧ ಧರ್ಮಕ್ಕೆ ಹೋಗುವವರೆಗೂ ಪ್ರತಿಕ್ಷಣವೂ ಅಸ್ಪೃಷ್ಯತೆಯ ಈಟಿಯಿಂದ ಇರಿಯಲಾಯ್ತು. ಈ ಈರ್ವರು ತರಲು ಉದ್ದೇಶಿಸಿದ್ದ ಅನೇಕ ಸಾಮಾಜಿಕ  ಸುಧಾರಣೆಗಳು ಭಾರತೀಯರ ಸಂಕುಚಿತ ಮನಸ್ಸುಗಳಿಂದ ಅಷ್ಟು ಫಲಕಾರಿಯಾಗಿಲ್ಲ. ಆಗುತ್ತಿರುವುದು ಕೂಡ ಅವರ ವಿಚಾರಗಳ ನೆಲೆಗಟ್ಟಿನಿಂದ ಹೊರಗುಳಿದ ಕೇವಲ ನೊರೆಯೆ ಆಗಿದೆ. ಅವರೀರ್ವರ ವಿಚಾರದ ಗಟ್ಟಿಯನ್ನು ಮುಟ್ಟಿ ತಟ್ಟುವ ಎದೆಗಾರಿಕೆ ಇಲ್ಲವಾಗಿದೆ.

ಅಸ್ಪೃಶ್ಯತೆಯ ಆಚರಣೆ ಈ ದೇಶದ ಕಳಂಕಗಳಲ್ಲಿ ಒಂದು. ಈ ಅನಿಷ್ಟ ಆಚರಣೆಯಿಂದಾಗಿ ಬಲಿಷ್ಟವಾದ ಭಾರತ ಪ್ರಪಂಚದ ಕಣ್ಣಿನಲ್ಲಿ ಕನಿಷ್ಟವಾಗಿದೆ. ವಿಶ್ವಮಾನವ ಭ್ರಾತೃತ್ವವನ್ನು ಸಾರುವ ಅದರ ‘ಅತ್ಮವತ್ ಸರ್ವಭೂತೇಷು’ ಎಂಬುದು ಮೇಲ್ನೋಟಕ್ಕಷ್ಟೆ. ಅಂತರಂಗದಲ್ಲಿ ಮಾತ್ರ ಇಂದಿಗೂ ಮೇಲು ಕೀಳು ಎಂಬಭಾವನೆ ಬಲವಾಗಿ ಬೇರೂರಿದೆ. ಈ ಕಳಂಕದ ನೋವನ್ನು ಇಬ್ಬರೂ ಅನುಭವಿಸಿದ್ದಾರೆ. ಅಂಬೇಡ್ಕರ್ ಅಂತೂ ಆ ನೋವಿನಲ್ಲೆ ನಲುಗಿ ಹೋಗಿದ್ದಾರೆ.

ಭಾರತದ ವರ್ಣ ವ್ಯವಸ್ಥೆಯಲ್ಲಿ ವಿವೇಕಾನಂದರು ಎರಡನೆಯ ವರ್ಣವಾದ ಕ್ಷತ್ರಿಯ ಕುಲದಲ್ಲಿ ಹುಟ್ಟಿದರು. ಅಂಬೇಡ್ಕರ್ ಹುಟ್ಟಿದ್ದು ನಾಲ್ಕನೆ ವರ್ಣಕ್ಕಿಂತ ಕೀಳಾದ ಪಂಚಮ ವರ್ಣದ ಮೆಹರ್  ಜಾತಿಯಲ್ಲಿ.

ಭಾರತ ಎಂದರೆ ವರ್ಣಗಳಿಂದ ಮತ್ತು ಜಾತಿಗಳಿಂದ ಛಿದ್ರವಾದ ದೇಶ. ಈ ದೇಶದಲ್ಲಿ ಕೈ ಕೈಗೆ ಬೆರಳು ಬೆರಳುಗಳಿಗೆ ಜಾತಿ ಇವೆ. ಜಗತ್ತಿಗೆ ವೇದಾಂತ ಧರ್ಮವನ್ನು ಬೋಧಿಸಿದ ಭಾರತ ಹೀಗೆ ಒಡೆದು ಛಿದ್ರ ಛಿದ್ರವಾಗಲು ಜಾತಿಯನ್ನು ಹುಟ್ಟುಹಾಕಿ ಜಡಗಟ್ಟಿದ ಸ್ಥಿತಿಗೆ ತಂದ ಬ್ರಾಹ್ಮಣರೇ ಕಾರಣ ಎಂಬುದನ್ನು ಈ ಇಬ್ಬರೂ ಮಹನೀಯರು ಮನವರಿಕೆ ಮಾಡಿದ್ದಾರೆ.

ವಿವೇಕಾನಂದರು “ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆ ಬೋಧಿಸುವುದಿಲ್ಲ. ಪ್ರಪಂಚದ ಯಾವಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ. ತಪ್ಪು ಹಿಂದೂ ಧರ್ಮದ್ದಲ್ಲ ಅಲ್ಲಿರುವ ಸಂಪ್ರದಾಯ ಶರಣರು, ಪುರೋಹಿತರದು. ಪಾರಮಾರ್ಥಿಕ ಮತ್ತು ವ್ಯವಹಾರಿಕ ಎಂದು ನಾನಾ ಬಗೆಯ ಕ್ರೂರ ಸಾಧನಗಳನ್ನು ಸೃಷ್ಟಿಸಿರುವ ಠಕ್ಕರದು” ಎಂದು ಅದನ್ನು ಸ್ಪಷ್ಟವಾಗಿ  ಗುರುತಿಸಿದ್ದಾರೆ. ಅಂಬೇಡ್ಕರರು ‘ಬ್ರಾಹ್ಮಣ ಧರ್ಮ ಹಿಂದೂ ಧರ್ಮದ ವಿಷವೆಂದು’ ಅದರ ಕಾರ್ಕೋಟಕ ಗುಣವನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತು ಪುಟಗಟ್ಟಲೆ ಬರೆಯಬಹುದಾದರೂ ಈ ಮೇಲಿನ ಮಾತುಗಳು ಅವರುಗಳ ಸ್ಪಷ್ಟ ಅಭಿಪ್ರಾಯವನ್ನು ಸೂಚಿಸುವುದರಿಂದ ಅವುಗಳನ್ನು ಇಲ್ಲಿ ಪ್ರಾತಿನಿಧಿಕವಾಗಿ ಕೊಟ್ಟಿದ್ದೇನೆ.

ಈ ದೇಶದ ಅನಿಷ್ಟವ್ಯವಸ್ಥೆಯಲ್ಲಿ ಸಿಕ್ಕಿ ತುಳಿತಕ್ಕೊಳಗಾಗಿ ನರಳುತ್ತಿದ್ದ ಬಹುಸಂಖ್ಯಾತ ದೀನದಲಿತರಿಗೆ ಧಾರ್ಮಿಕ ಸಮಾನತೆಯನ್ನು ತಂದುಕೊಡುವ, ಒಂದು ರೀತಿಯಲ್ಲಿ ವಿಚಿತ್ರವೆನಿಸುವ ಕ್ರಿಯೆಯೊಂದನ್ನು ವಿವೇಕಾನಂದರು ಮಾಡಿದ್ದಾರೆ.

ಬಹುಶಃ ಅದಕ್ಕೆ ಕಾರಣ ಮೇಲ್ವರ್ಗದವರ ಶ್ರೇಷ್ಟ ಎಂಬ ಹುಸಿಕಲ್ಪನೆಯನ್ನು ತೊಡೆದು ಧಾರ್ಮಿಕ ಸಮಾನತೆಯನ್ನು ಸಾಧಿಸುವ ತೀವ್ರ ಮಾನಸಿಕ ಒತ್ತಡದಿಂದ ಉಂಟಾಗಿರುವುದಾಗಿದೆ. ಆ ಕ್ರಿಯೆ ೧೮೯೩ ರಲ್ಲಿ ರಾಮಕೃಷ್ಣ  ಪರಮಹಂಸದ ಜನ್ಮತಿಥಿಯ ಸಂದರ್ಭದಲ್ಲಿ ನಡೆದ ಘಟನೆ.

ಶಿಷ್ಯ: ತಮ್ಮ ಅಪ್ಪಣೆಯಂತೆ ಎಲ್ಲವೂ ಸಿದ್ಧವಾಗಿದೆ ಆದರೆ ಇಷ್ಟೊಂದು ಯಜ್ಞೋಪವೀತಗಳನ್ನು ಸಿದ್ದಪಡಿಸಿಕೊಂಡದ್ದು ಏಕೋ ನನಗೆ ಗೊತ್ತಾಗಲಿಲ್ಲ

ಸ್ವಾಮೀಜಿ: ದ್ವಿಜರಿಗೆ ಮಾತ್ರ ಉಪನಯನ ಸಂಸ್ಕಾರಕ್ಕೆ ಅಧಿಕಾರ ಎಂದಿದೆ. ಪತಿತರೇನು ಪಾಪಮಾಡಿದ್ದಾರೆ? ಇಂದು ಪರಮಹಂಸರ ಜನ್ಮೋತ್ಸವಕ್ಕೆ ಯಾರು ಯಾರು ಬರುತ್ತಾರೆಯೋ ಅವೆರೆಲ್ಲರಿಗೂ ಜನಿವಾರವನ್ನು ಹಾಕಿಸುತ್ತೇನೆ ಇವರೆಲ್ಲಾ ಪತಿತರಾಗಿ ಬಿಟ್ಟಿದ್ದಾರೆ …… .. ಅದಕ್ಕೋಸ್ಕರವೇ ಇಂದು ಬರುವ ಭಕ್ತರಿಗೆಲ್ಲಾ ಜನಿವಾರವನ್ನು ಹಾಕಿಸಬೇಕು ತಿಳಿಯಿತೇ?’

ಶಿಷ್ಯ: ನಾನು ತಮ್ಮ ಅಪ್ಪಣೆಯಂತೆ ಬೇಕಾದಷ್ಟು ಜನಿವಾರವನ್ನು ಕೂಡಿ ಹಾಕಿದ್ದೇನೆ. ಪೂಜೆಯಾದ ಮೇಲೆ ತಮ್ಮ ಅನುಮತಿಯನ್ನ ಪಡೆದು ಬಂದೆ ಭಕ್ತರಿಗೆಲ್ಲಾ ಅದನ್ನು ಹಾಕಿಸುತ್ತೇನೆ.

ಸ್ವಾಮೀಜಿ: ಬ್ರಾಹ್ಮಣೇತರ ಭಕ್ತರಿಗೆ ಈ ವೇದ ಗಾಯಿತ್ರಿ ಮಂತ್ರವನ್ನು
ಹೇಳಿಕೊಡುತ್ತೇನೆ …… .. ಹಿಂದೂಗಳೆಲ್ಲರೂ ಪರಸ್ಪರ ಅಣ್ಣ ತಮ್ಮಂದಿರು. ಮುಟ್ಟಬೇಡ ಎಂದು ಹೇಳಿ ಹೇಳಿ ನಾವೇ ಅವರನ್ನು ಕೀಳು ಮಾಡಿಕೂರಿಸಿದ್ದೇವೆ. ಇದೇ ದೇಶಕ್ಕೆ ಹೀನತೆ ಬೀರುತ್ತೆ, ಮೂರ್ಖತೆ, ಕಾಪುರಷತೆ ಇವುಗಳ ಪರಾಕಾಷ್ಠೆಯಲ್ಲಿ ಪರಿಣಮಿಸಿದೆ ಅವರನ್ನು ಮೇಲಕ್ಕೆ ಎತ್ತಬೇಕು ಅಭಯದ ಮಾತನ್ನು ಹೇಳಬೇಕು. ನೀವು ನಮ್ಮ ಹಾಗೆ ಮನುಷ್ಯರು ನಿಮಗೂ ನಮ್ಮ ಹಾಗೆ ಎಲ್ಲ ಅಧಿಕಾರವೂ ಇದೆ ಎಂದು ಹೇಳಬೇಕು ತಿಳಿಯಿತೆ?

” …… .. ಸ್ವಾಮೀಜಿಯ ಅಪ್ಪಣೆಯ ಮೇಲೆ ಬಂದಿದ್ದ ಭಕ್ತರು ಕ್ರಮವಾಗಿ ಗಂಗಾಸ್ನಾನ ಮಾಡಿಬಂದು ಶಿ‍ಷ್ಯನಿಂದ ಗಾಯಿತ್ರಿ ಉಪದೇಶವನ್ನು ಹೊಂದಿ ಜನಿವಾರವನ್ನು ಹಾಕಿಕೊಳ್ಳುವುದಕ್ಕೆ ಮೊದಲು ಮಾಡಿದರು. ಮಠದಲ್ಲಿ ಮಂಗಳರವ ಉಂಟಾಯಿತು ……….. .. ಅದನ್ನು ನೋಡಿ ಸ್ವಾಮೀಜಿಯ ಮುಖಾರವಿಂದವು ಒಂದಕ್ಕೆ ನೂರರಷ್ಟು ಅರಳಿದಂತಾಯಿತು?

ಉದ್ದೇಶ ಒಳ್ಳೆಯದಾದರೂ ವಿವೇಕಾನಂದರ ಈ ಕ್ರಿಯೆ ಚರ್ಚಾರ್ಹವಾಗಿದೆ. ಮತ್ತೊಂದು ಕುತೂಹಲಕಾರಿಯಾದ ಅಂಶ ಎಂದರೆ ಈ ಇಬ್ಬರೂ ಹಿಂದೂ ಧರ್ಮವನ್ನು ತಿರಸ್ಕರಿಸಿದರು ಎನ್ನುವುದು. ವಿವೇಕಾನಂದರು ನಾನು ಭಾರತಕ್ಕೆ ಸೇರಿರುವಷ್ಟೇ ವಿಶ್ವಕ್ಕೂ ಸೇರಿದ್ದೇನೆ. ಅದರಲ್ಲಿ ಯಾವ ಆಷಾಡ ಭೂತಿತನವೂ ಇಲ್ಲ …… .. ನಾನು ಯಾವುದೇ ದೇಶದ ಗುಲಾಮನೆ? …..ಮೂಢರೂ ನಿರಭಿಮಾನಿಗಳೂ ಜಾತಿಭ್ರಾಂತರೂ ವಂಚಕರೂ, ಹೇಡಿಗಳೂ, ಕಟುಕರೂ ಅದ ಹಿಂದೂ ಪುರೋಹಿತರಂತೆ ಸಾಯಲು ನಾನು ಹುಟ್ಟರುವೆನೆಂದು ನೀನು ತಿಳಿದಿರುವೆಯಾ? “ನಾನು ಹೇಡಿತನವನ್ನು ದ್ವೇಷಿಸುತ್ತೇನೆ” ಎಂದು ಘೋಷಿಸಿದ್ದಾರೆ.

ವೇದಾಂತ ಧರ್ಮವೇ ಸರ್ವಶ್ರೇಷ್ಟವಾದ ಧರ್ಮ ಎಂದು ದೃಢವಾಗಿ ನಂಬಿದ್ದ ವಿವೇಕಾನಂದರು “ಎಲ್ಲಾ ಮೂಢನಂಬಿಕೆಗಳನ್ನೂ ಧ್ವಂಸ ಮಾಡಿ. ಗುರುಗಳಾಗಲೀ ಧರ್ಮ ಗ್ರಂಥಗಳಾಗಲೀ ದೇವರುಗಳಾಗಲೀ ಇಲ್ಲ. ಇವೆಲ್ಲೆವೂ ನೆಲೆ ಇಲ್ಲದವು ಅವತಾರ ಪುರುಷರನ್ನು ಪ್ರವಾದಿಗಳನ್ನು ಧ್ವಂಸಮಾಡಿ. ನಾನೇ ಪರಮ ಪುರುಷೋತ್ತಮ. ತತ್ವ ಜ್ಞಾನಿಗಳೇ ಎದ್ದು ನಿಲ್ಲಿ. ಭಯಬೇಡ. ದೇವರನ್ನು ಕುರಿತ ಮೂಢನಂಬಿಕೆಗಳನ್ನು ಕುರಿತ ಮಾತು ಬೇಡ. ಸತ್ಯಕ್ಕೆ  ಜಯ. ಇದು ನಿಜ, ನಾನು ಅನಂತ. ಎಲ್ಲಾ ಮೂಢನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು” ಎಂದು ತಮ್ಮನ್ನು ತಾವು ವಿಶ್ವ ಚೈತನ್ಯದಲ್ಲಿ ಕಂಡುಕೊಂಡು ನಿತ್ಯ ಮುಕ್ತವಾದ ಹಾದಿಯಲ್ಲಿ ನಡೆದವರು.

ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ದ ಧರ್ಮವನ್ನು ಸ್ವೀಕರಿಸುವ ಮೂಲಕ ದೀನದಲಿತರಿಗೆ ಧಾರ್ಮಿಕ ಬಿಡುಗಡೆಯನ್ನು ತಂದುಕೊಡುವ ಪ್ರಯತ್ನವನ್ನು ಮಾಡಿದರು.

ಸುಮಾರು ೧೯೩೫ ರಷ್ಟು ಹಿಂದೆಯೇ ನಾನು ಹಿಂದೂವಾಗಿ ಸಾಯಲಾರೆ ಎಂದು ಹೇಳಿದ್ದ ಅಂಬೇಡ್ಕರ್ ೧೪-೧೦-೧೯೫೬ ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಬಹುಶಃ ಅದಕ್ಕೆ ಕಾರಣ ಹಿಂದೂ ಧರ್ಮದ ಅಚರಣೆಯಲ್ಲಿಲ್ಲದ ಸ್ವಾತಂತ್ರ್ಯ ಸಮಾನತೆ ಸಹೋದರತ್ವ ಬೌದ್ಧ ಧರ್ಮದಲ್ಲಿದೆ ಎಂಬ ಅವರ ನಂಬಿಕೆ ಕಾರಣವಾಗಿರಬೇಕು.

ಅವರು ದೀನದಲಿತರಿಗೆ ಪದೇ ಪದೇ ಹೇಳುತ್ತಿದ್ದ ಮಾತುಗಳೆಂದರೆ “ಮಹಾತ್ಮರು ಹುಟ್ಟುತ್ತಾರೆ. ಅದರೆ ದಲಿತರು ದಲಿತರಾಗಿಯೇ ಉಳಿದುಹೋಗುತ್ತಿದ್ದಾರೆ. ದಲಿತರ ವಿಮೋಚನೆ ಅವರು ಎಚ್ಚರಗೊಳ್ಳೊವುದರಲ್ಲಿಯೇ ಇದೆ. ನಮ್ಮ ಆಚಾರ ಮಾತು ಶುದ್ಧವಾಗಿರಬೇಕು. ನಮ್ಮ ಹಳೆಯ ಪದ್ಧತಿಗಳನ್ನು ಬಿಡಬೇಕು. ಇತರರು ಕೃಪೆಯಿಟ್ಟು ಕೊಟ್ಟದ್ದನ್ನು ತಿನ್ನುವುದು ಬಿಟ್ಟು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದನ್ನು ಕಲಿಯಬೇಕು. ಆ ಮುಖೇನ ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ನಮ್ಮ ಬುದ್ಧಿಯನ್ನು ನಾವು ಬೆಳೆಸಿಕೊಳ್ಳಬೇಕು” ಎಂದಿದ್ದಾರೆ.

ವಿವೇಕಾನಂದರೂ ಕೂಡ “ನಿಮ್ಮ ಮುಕ್ತಿಯನ್ನು ನೀವೇ ಸಂಪಾದನೆ ಮಾಡಿಕೊಳ್ಳಿ. ನಾನೂ ನಿಮಗೆ ಸಹಾಯ ಮಾಡಿಲಾರೆ ಮತ್ತಾರೂ ನಿಮಗೆ ಸಹಾಯ ಮಾಡಲಾರರು. ನಿಮಗೆ ನೀವೇ ಸಹಾಯ ಮಾಡಿಕೊಳ್ಳಬೇಕು”

“ಪ್ರೀತಿಗಾಗಿ ಎಲ್ಲರನ್ನು ಪ್ರೀತಿಸುವುದನ್ನು ಕಲಿಯಿರಿ ನಿರ್ಭಯದಿಂದ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ  ಪರಿಶುದ್ಧವಾದ ಜೀವನವನ್ನು ನಡೆಸಿ ಸತ್ಯದ ಜ್ಯೋತಿ ನಿಮಗೆ ದಾರಿಯನ್ನು ತೋರುವುದು” ಎಂದಿದ್ದಾರೆ.

ಇವರಿಬ್ಬರೂ ಬೌದ್ಧ ಧರ್ಮಕ್ಕೆ ಒಲವು ತೋರಲು ಅನೇಕ ಕಾರಣಗಳಿವೆ. ಬುದ್ಧನ ಧರ್ಮದಲ್ಲಿ ಸಮಾನತೆಯ ಆದರ್ಶದ ಮಾನವೀಯ ಕಲ್ಪನೆ ಇದೆ.

ಅಂಬೇಡ್ಕರ್ ಅವರು ಬರೆದಿರುವ ‘ಬುದ್ಧ ಅಥವಾ ಕಾರ್ಲ್‌ಮಾರ್ಕ್ ‘ ಎನ್ನುವಲ್ಲಿ ಅಥವಾ ಎನ್ನುವ ಪದದಲ್ಲೇ ಕಾರ್ಲ್‌ಮಾಕ್ಸ್‌ನ ಸಿದ್ಧಾಂತಗಳು ಬುದ್ಧನಲ್ಲಿವೆ ಎಂಬುದನ್ನು ಅಂಬೇಡ್ಕರ್ ಗುರುತಿಸಿದ್ದಾರೆ. ಹಾಗಾಗಿ ಸರ್ವಾಧಿಕಾರ ಅಲ್ಲದ ಸಮ್ರಾಜ್ಯದ ಸಿದ್ಧಾಂತವನ್ನು ಪ್ರತಿಪಾದಿಸಿದ ಬುದ್ಧನನ್ನು ಅಂಬೇಡ್ಕರ್ ಗೌರವಿಸಿದ್ದರು. ವಿವೇಕಾನಂದರೂ ಕೂಡ ೨೬-೯-೧೮೯೫ ರಂದು ಚಿಕಾಗೋದಲ್ಲಿ ನೀಡಿದ ಉಪನ್ಯಾಸದಲ್ಲಿ “ನೀವು ಕೇಳಿರುವಂತೆ ನಾನು ಬೌದ್ಧನಲ್ಲ ಆದರೂ ನಾನಾಗಿದ್ದೇನೆ” ಎಂದಿದ್ದಾರೆ.

ಮತ್ತೊ೦ದು ಕಡೆ ನನ್ನ ಗುರು ಬಂದಿರುವುದು ಮಾತ್ರವಲ್ಲ ಮುಂದುವರೆದು ಬೌದ್ಧನಾಗುವುದಕ್ಕಿಂತ ಹೆಚ್ಚಿನದಾದ ನಾನೊಬ್ಬ ಬುದ್ಧನಾಗುತ್ತೇನೆ ಎಂದು ಬುದ್ಧ ಸ್ಥಿತಿಯನ್ನು ತಮ್ಮೊಳಗೆ ಅಭಿವ್ಯಕ್ತಿಸಿ ಕೊಂಡಿದ್ದಾರೆ.

ಅಸಮಾನತೆ ಈ ದೇಶದ ದೊಡ್ಡ ರೋಗ. ಮೇಲ್ವರ್ಗದ ಬ್ರಾಹ್ಮಣರು ಸಮಾಜದಲ್ಲಿ ತಮ್ಮ ಶ್ರೇಷ್ಟತೆಗಾಗಿ ಸ್ವಾರ್ಥಕ್ಕಾಗಿ ಮನುಸ್ಮೃತಿ ಮುಂತಾದವುಗಳನ್ನು ರಚಿಸಿಕೊಂಡಿದ್ದರು. ಭೂಮಿಯ ಮೇಲೆ ಓಡಾಡುವ ದೇವತೆ- ಗಳೆಂದು ಕರೆದುಕೊಂಡಿದ್ದರು. ಜ್ಞಾನ ಅವರಿಗೆ ಮಾತ್ರ ಮೀಸಲಾಗಿತ್ತು. ಅವರ ಎದುರು ಬಹುಸಂಖ್ಯಾತ ಶೂದ್ರರೂ ದಲಿತರು ಪಂಚಮರು ಸ್ತ್ರೀಯರು ವಿದ್ಯೆ ಇಲ್ಲದೆ ಪರಿಚಾರಿಕೆಯಿಂದ ಜೀವಿಸಬೇಕಾಗಿತ್ತು. ಮೇಲು ಕೀಳಿನ ಅಂತರ ಬಹುವಾಗಿತ್ತು. ಇದನ್ನು ತೊಡೆದು ಹಾಕಿ ಸಮಾನತೆಯನ್ನು ತರುವ ದೃಷ್ಟಿಯಿಂದ ವಿವೇಕಾನಂದ ಅಂಬೇಡ್ಕರ್ ಇಬ್ಬರೂ ಒತ್ತಿ ಹೇಳಿದರು.

ಮೋಸ ಮಾಡುತ್ತಿದ್ದ ಬ್ರಾಹ್ಮಣರನ್ನು ವಿವೇಕಾನಂದರು “ನೀಚರೂ ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢ ನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎ೦ದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅವರ ಮುತ್ತಾತಂದಿರಾಗಲೀ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ
ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರ ಕಾಪಾಡಬೇಕು.” ಎಂದಿದ್ದಾರೆ.

ಇದರಿಂದ ತಿಳಿಯುವುದೇನೆಂದರೆ ಒಟ್ಟಾರೆ ಸಮಾಜದಲ್ಲಿ ಅವಿದ್ಯೆ ವಿದ್ಯೆಯ ಹೆಸರಿನಲ್ಲಿ ಮೋಸ ಮಾಡುತ್ತ ತನ್ನ ಕ್ರೂರತೆಯನ್ನು ಮುಗ್ಧರ ಮೇಲೆ ಹರಿಸುತ್ತಿದ್ದುದು. ಅದರಿಂದ ಬಿಡುಗಡೆಗಾಗಿ ವಿದ್ಯೆಗೆ ಒತ್ತು ಕೊಟ್ಟ ವಿವೇಕಾನಂದರು ಮೀಸಲಾತಿಯನ್ನು ಕುರಿತು ಹೀಗೆ ಹೇಳಿದ್ದಾರೆ.

“ಚಂಡಾಲನಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇರುವಷ್ಟು ಬ್ರಾಹ್ಮಣನಿಗೆ ಇಲ್ಲ. ಬ್ರಾಹ್ಮಣ ಮಗನಿಗೆ ಒಬ್ಬ  ಉಪಾಧ್ಯಾಯನು ಬೇಕಾದರೆ ಚಂಡಾಲನ ಮಗನಿಗೆ ಹತ್ತು ಉಪಾಧ್ಯಾಯರು ಬೇಕು …… .. ಹೇ ಬ್ರಾಹ್ಮಣರೇ, ಆನುವಂಶಿಕವಾಗಿ ಬಂದ ಗುಣಗಳ ಪ್ರಕಾರ ಬ್ರಾಹ್ಮಣನಿಗೆ ಹೊಲೆಯನಿಗಿಂತ ಹೆಚ್ಚು ವಿದ್ಯಾಭ್ಯಾಸಕ್ಕೆ ಯೋಗ್ಯತೆ ಇದ್ದರೆ ಹೊಲೆಯನ ವಿದ್ಯಾಭ್ಯಾಸಕ್ಕೆ ಎಲ್ಲ ಹಣವನ್ನು ಖರ್ಚುಮಾಡಿ. ಬ್ರಾಹ್ಮಣನಿಗೆ ಖರ್ಚುಮಾಡಬೇಡಿ, ದುರ್ಬಲರಿಗೆ ಕೊಡಿ. ಅಲ್ಲಿ ನಿಮ್ಮ ದಾನವೆಲ್ಲಾ ಬೇಕಾಗಿದೆ. ಬ್ರಾಹ್ಮಣ ಹೆಚ್ಚು ಬುದ್ದಿವಂತನಾಗಿದ್ದರೆ ಹೆಚ್ಚು ಸಹಾಯವಿಲ್ಲದೆ ಬುದ್ದಿ -ವಂತನಾಗಬಲ್ಲ ಉಳಿದವರು ಬುದ್ದಿವಂತರಾಗಿಲ್ಲದೆ ಇದ್ದರೆ ಅವರಿಗೇ ಶಿಕ್ಷಣ ಮತ್ತು ಗುರುಗಳೆಲ್ಲ ಮೀಸಲಾಗಿರಲಿ”

ಬಹುಶಃ ಅಂಬೇಡ್ಕರ್ ವಿವೇಕಾನಂದರ ಈ ವಿಚಾರಗಳಿಂದ ಸ್ಪೂರ್ತಿ ಪಡೆದಿರಬಹುದು. ಅದನ್ನು ಸಂವಿಧಾನದಲ್ಲಿ ಅಳವಡಿಸಲು ಅವಿರತ ಹೋರಾಡಿದರು ಹಾಗೂ ಮೀಸಲಾತಿಯನ್ನು ಅಳವಡಿಸುವಲ್ಲಿ ಯಶಸ್ವಿಯಾದರೂ ಅದಕ್ಕೂ ಮುಂಚೆ ಅಂದರೆ ೧೯೨೭ ರಲ್ಲಿ ಭಾರತದ ಅನಿಷ್ಟವಾಗಿ ಮನುಷ್ಯ ಮನುಷ್ಯರ ನಡುವೆ ಭೇದ ಸಾರುವ ಮನುಸ್ಮೃತಿಯನ್ನು ಸುಟ್ಟರು. ಭಾರತಕ್ಕೆ ಯಶಸ್ವಿ ಸಂವಿಧಾನವನ್ನೂ ಕೊಟ್ಟರು.

ಕೇವಲ ಮೀಸಲಾತಿಯಿಂದ ಮಾತ್ರ ಸಮಾನತೆ ಸಾಧ್ಯವಿಲ್ಲ ಎಂಬುದನ್ನು ಇಬ್ಬರೂ ಮನಗಂಡಿದ್ದರು. ಸಮಾನತೆ ಸಾಧಿಸಲು ಮೀಸಲಾತಿ ಒಂದು ಸಾಧನ ಅಷ್ಟೆ ಅದಕ್ಕಿಂತ ಹೆಚ್ಚಿನದೇನೂ ಅದರಿಂದ ಆಗುವುದಿಲ್ಲ ಎಂಬುದನ್ನು ಅವರು ಬಲ್ಲವರಾಗಿದ್ದರು. ಅದರ ಮೂಲಕ ಅವರುಗಳು ಕನಸಿದ್ದು ವ್ಯಕ್ತಿ ನಿರ್ಮಾಣ. ಈ ಸಾಧನೆಯ ಮೂಲಕ ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿ ಎಲ್ಲರ ಆಂತರಂಗದಲ್ಲು ಸಮಾನತೆಯ ಸ್ಪಂದನವನ್ನುಂಟು ಮಾಡುವುದಾಗಿತ್ತು.

ಆ ಕಾರಣಕ್ಕಾಗಿ ಈ ಇಬ್ಬರೂ ಮೊದಲ ಆದ್ಯತೆ ಕೊಟ್ಟದ್ದು ಶಿಕ್ಷಣಕ್ಕಾಗಿ. ಈಗ ಕೊಡುತ್ತಿರುವ ವಿದ್ಯಾಭ್ಯಾಸವನ್ನು ಕುರಿತು “ಇದು ಕೇವಲ ನಿಷೇಧಮಯವಾದ ವಿದ್ಯಾಭ್ಯಾಸ ಅಥವಾ ನಿಷೇಧಭಾವನೆಯ ಮೇಲೆ ನಿಂತ ಯಾವ ತರಬೇತಿಯಾಗಲೀ ಮೃತ್ಯುವಿಗಿಂತ ಹಾನಿಕರ ……ಈಗಿನ ವಿಶ್ವ ವಿದ್ಯಾನಿಲಯಗಳು ಲೋಪದೋಷಗಳ ಕಂತೆ. ಅದು ಗುಮಾಸ್ತರನ್ನು ಉತ್ಪತ್ತಿ ಮಾಡುವ ಯಂತ್ರ. ಅಯ್ಯೋ ದೇವರೇ ಈ ಪದವಿ ಪಟ್ಟಕ್ಕಾಗಿ ಎಷ್ಟೊಂದು ರೋಶಾವೇಶ ಗಲಿಬಿಲಿ?” ಎಂದು ಹೇಳುತ್ತಾ “ಪುರುಷ ಸಿಂಹರನ್ನು ಮಾಡುವ ವಿದ್ಯೆ ಬೇಕು. ಯಾವ ವಿದ್ಯೆಯಿಂದ ಗುಣವಂತರಾಗ ಬಲ್ಲೆವೋ, ಧೀಶಕ್ತಿ ವೃದ್ದಿಯಾಗ ಬಲ್ಲದೋ, ಬೌದ್ಧಿಕ ವಿಕಾಸವಾಗ ಬಲ್ಲದೋ ಹಾಗೂ ಯಾವುದರಿಂದ ನಾವು ನಮ್ಮ ಕಾಲಮೇಲೆ ನಿಲ್ಲಬಲ್ಲವರಾಗುವೆವೋ ಅಂತಹ ವಿದ್ಯೆ ನಮಗೆ ಬೇಕು” ಬಂದು ಅಗತ್ಯ ವಿದ್ಯೆಯ ಮಹತ್ವವನ್ನು ಒತ್ತಿ ಒತ್ತಿ ಹೇಳುತ್ತಿದ್ದರು.

ಅಂಬೇಡ್ಕರ್ ಸಹ ಶಿಕ್ಷಣಕ್ಕೆ ಮೊದಲ ಸ್ಥಾನ ಕೊಟ್ಟಿದ್ದರು ವಿದ್ಯೆ ಇಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ಸತ್ಯವನ್ನು ಅವರು ಮನಗಂಡಿದ್ದರು. “ವಿದ್ಯೆ ಎನ್ನುವುದು ಲೌಕಿಕ ಸಾಧನೆಗಾಗಿ ಅಲ್ಲ. ಲೌಕಿಕ ವಸ್ತು ವೈವಿದ್ಯಗಳನಷ್ಟೇ ಪಡೆಯುವುದಕ್ಕಾಗಿ ಅಲ್ಲ. ವಿದ್ಯೆಯಿಂದ ಸಾರ್ಥಕ ಜೀವನ ಎಂದು ಹೇಳುತ್ತಿದ್ದರು. ಶಿಕ್ಷಣದ ನಂತರ ಅವರು ಎರಡನೆ ಸ್ಥಾನ ಕೊಟ್ಟಿದ್ದು ಸಂಘಟನೆಗೆ.

ಅಂಬೇಡ್ಕರ್ ಸಂಘಟನೆಗೆ ಎರಡನೆ ಮಹತ್ವ ಕೊಡಲು ಐತಿಹಾಸಿಕವಾಗಿ ಇದ್ದ ಕಾರಣವನ್ನು ವಿವೇಕಾನಂದರು ಹೇಳುತ್ತಾ ಜನಮನವ ಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ. “ಐದು ನಿಮಿಷಗಳಾದರೂ ಮೂರು ಜನರು ಕಲೆತು ಸೌಹಾರ್ದದಿಂದ ಒಂದು ಕೆಲಸವನ್ನು ಮಾಡಲಾರರು. ಪ್ರತಿಯೊಬ್ಬರೂ ಅಧಿಕಾರಕ್ಕೆ ಹೋರಾಡುವರು. ಕಡೆಗೆ ಇಡೀ ಸಂಸ್ಥೆಯೇ ಹಾಳಾಗುವುದು. ಅಸೂಯೆ, ನಾಲ್ವರು ಸೇರಿ ಒಂದು ಕೆಲಸವನ್ನು ಮಾಡುವ ಒಗ್ಗಟ್ಟಿನ ಅಭಾವ ಇವು ಗುಲಾಮಗಿರಿಯವರ ಸ್ವಭಾವ. ಅದರೆ ನಾವು ಇವುಗಳಿಂದ ಪಾರಾಗುವುದಕ್ಕೆ ಪ್ರಯಿತ್ನಿಸಬೇಕು. ಭಯಾನಕವಾದ ಈರ್ಷ್ಯೆ ನಮ್ಮ ವಿಶೇಷ ಲಕ್ಷಣ. ಜಗಳ ಕಾಯುವುದು ಒಬ್ಬರು ಮತ್ತೊಬ್ಬರನ್ನು ನಿಂದಿಸುವುದು ನಮ್ಮ ಜನಾಂಗದ ಚಾಳಿಯಾಗಿದೆ. ಸೋಮಾರಿಗಳು ನಿಷ್ಪ್ರಯೋಜಕರು. ಅಶ್ಲೀಲ ಸ್ವಭಾವದವರು, ಅಸೂಯಾಪರರು ಹೇಡಿಗಳು ಮತ್ತು ಜಗಳಗಂಟಿಗಳು. ಅಜ್ಞಾನ ಮತ್ತು ಕೆಟ್ಟತನವನ್ನು ನಾಶ ಮಾಡಲು ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು. ಒಳ್ಳೆಯತನ ನಮ್ಮಲ್ಲಿ ವಿಕಾಸವಾದಂತೆ ಕೆಟ್ಟತನ ನಾಶವಾಗುವುದೆಂಬುದನ್ನು ಮಾತ್ರ ನಾವು ಕಲಿಯಬೇಕು”. ಈ ಸ್ಥಿತಿಯಿಂದ ಪಾರಾಗಲು ವಿವೇಕಾನಂದರು ಈ ಕೆಳಗಿನ ಮೂರು ಮುಖ್ಯ ಸೂತ್ರಗಳನ್ನು ಕೊಡುತ್ತಾರೆ.

“ಪ್ರತಿಯೊಂದು ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಜನಾಂಗವನ್ನು ಏಳಿಗೆಗೆ ತರುವುದಕ್ಕೆ ಮೂರು ವಿಷಯಗಳು ಅತ್ಯಾವಶ್ಯಕ ಅವೇ:-

ಸತ್ಯದ ಶಕ್ತಿಯಲ್ಲಿ ದೃಢವಾದ ನಂಬಿಕೆ, ಅಸೂಯೆ ಅನುಮಾನಗಳು ಇಲ್ಲದೆ ಇರುವುದು, ಯಾರು ಒಳ್ಳೆಯವರಾಗುವು- ದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನ ಪಡುವರೋ ಅವರಿಗೆಲ್ಲಾ ಸಹಾಯ ಮಾಡುವುದು”

ಈ ರೀತಿ ಗುಣಗಳನ್ನು ಮೈಗೂಡಿಸಿಕೊಂಡು ಸಂಘಟಿತರಾಗಬೇಕಾದ ಅನಿವಾರ್ಯವನ್ನು ಅಂಬೇಡ್ಕರ್ ಹೇಳುತ್ತಾರೆ. ಅಲ್ಲದೆ ಕಲಿತವರು ಕೆಳವರ್ಗದಿಂದ ವಿದ್ಯೆ ಪಡೆದು ಬಂದವರು ಮಾಡುತ್ತಿರುವುದೇನು ಎಂಬುದನ್ನು ಕುರಿತು ಅಂಬೇಡ್ಕರ್  “ಮಾರ್ಗದರ್ಶನಕ್ಕಾಗಿ ಮೊಗ ಮಾಡಿರುವ ಸಮುದಾಯವನ್ನು ಸರಿಯಾದ ಮಾರ್ಗದಲ್ಲಿ ಮುನ್ನೆಡೆಸು ವಲ್ಲಿ ಬುದ್ಧಿವಂತ ವರ್ಗದವರು ಒಂದೋ ಅಪ್ರಾಮಾಣಿಕರಾಗಿರುತ್ತಾರೆ ಇಲ್ಲಾ ಅಸಡ್ಡೆವುಳ್ಳವರಾಗಿರುತ್ತಾರೆ ” ಎಂದಿದ್ದಾರೆ.

ಇಂತಹ ಎಲ್ಲವನ್ನೂ ಮೀರಿ ಸಂಘಟಿತರಾದಮೇಲೆ ಹೋರಾಟಕ್ಕೆ ಕರೆಕೊಡುತ್ತಾರೆ. ಹಂತಹಂತವಾಗಿ ಗಟ್ಟಿಗೊಳ್ಳಬೇಕಾದ ವಿಕಾಸದ ಸ್ಥರಗಳನ್ನು ಅತ್ಯಂತ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೀಡಿದ್ದಾರೆ. ಈಗ ಇದು ತಿರುಗು ಮುರುಗಾಗಿರುವುದರಿಂದ ಯಾವ ಚಳುವಳಿಯೂ ತಾನು ನಿರೀಕ್ಷಿಸಿದ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ

ಶಿಕ್ಷಣವನ್ನು ಪಡೆಯದೆ ಸಂಘಟಿತರಾಗದೆ ಹೋರಾಟಕ್ಕಿಳಿಯುತ್ತಿರುವ ದುರಂತದಿಂದ ಒಂದು ರೀತಿಯ ಗೊಂದಲ ಹತಾಶೆಗಳುಂಟಾಗುತ್ತಿವೆ. ಆದರೆ ಅದೂಕೂಡ ಒಂದು ರೀತಿಯ ಅನುಭವವನ್ನು ಗಟ್ಟಿತನವನ್ನು ತಂದುಕೊಟ್ಟಿದೆ ಎನ್ನುವುದನ್ನು ಇಲ್ಲ ಎನ್ನಲಾಗುವುದಿಲ್ಲ. ಅದಕ್ಕಾಗಿ ನಿರಾಶರಾಗಬೇಕಾಗಿಯೂ ಇಲ್ಲ.

ಸುಧಾರಕರಾಗ ಬಯಸುವವರಿಗೆ ವಿವೇಕಾನಂದರು ಬಹುಮುಖ್ಯವಾದ ಮೂರು ಆಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ೧. ಸಹಾನುಭೂತಿ, ೨. ಸತ್ಯದ ಶೋಧ, ೩. ಸಮರ್ಪಣಾಭಾವ.

ಬಹುಶಃ ವಿವೇಕಾನಂದರ ಈ ಮಾತುಗಳ ಪ್ರತಿ ಮೂರ್ತಿಯಾಗಿದ್ದವರು ಅಂಬೇಡ್ಕರ್ ಎನ್ನುವುದು ಉತ್ಪ್ರೇಕ್ಷೆ- ಯಾಗುವುದಿಲ್ಲ, ವಾಸ್ತವವಾಗುತ್ತದೆ. ಈ ಮೂರು ಗುಣಗಳು ಮೈವೆತ್ತ ಮೂರ್ತಿಯಾಗಿದ್ದರು ಅಂಬೇಡ್ಕರ್. ಆದ್ದರಿಂದಲೆ ಅವರು ಮಾನವ ಕೋಟಿಗೆ ಮಂಗಳ ಪ್ರದಾಯಕರಾಗಿದ್ದಾರೆ.

ಹೀಗೆ ಜಡಗಟ್ಟಿದ ವ್ಯವಸ್ಥೆಯನ್ನು ಬದಲಿಸಬೇಕಾದರೆ ಅದಕ್ಕಾಗಿ ತುಡಿಯುವವರು ಒಳಗೊಳ್ಳಬೇಕಾದ ಹಾಗೂ ಹಂತ ಹಂತವಾಗಿ ಮಾಡಬೇಕಾದ ಆಂಶಗಳನ್ನು ಕುರಿತ ಇಬ್ಬರ ವಿಚಾರಗಳು ಮತ್ತು ಬದುಕು ಅನುಕರಣೀಯವಾಗಿದೆ.

ವಿವೇಕಾನಂದರು ರಾಜಕೀಯದಿಂದ ಹೊರಗಿದ್ದು ಸಮಾಜ ಸುಧಾರಣೆಯನ್ನು ಸಾಧಿಸಿದ್ದರೆ ಅಂಬೇಡ್ಕರ್ ರಾಜಕೀಯದಲ್ಲಿಕೊಂಡೆ ಆ ಕಾರ್ಯ ಸಾಧನೆಯನ್ನು ಮಾಡಿದವರು. ಶತ ಶತಮಾನಗಳಿಂದ ವಂಚಿತರಾದ ಬಹುಸಂಖ್ಯಾತರ ಅಭಿವೃದ್ಧಿಗಾಗಿ ಅನೇಕ ಸುಧಾರಣೆಗಳನ್ನು ವಿವೇಕಾನಂದರು ಸೂಚಿಸಿದ್ದಾರೆ. ಮೂಢ ನಂಬಿಕೆಗಳ ವಿರುದ್ಧ ಸಮರ ಸಾರಿದ್ದಾರೆ. ಜನಪದ ಭಾಷೆಯ ಬಗ್ಗೆ ಒಲವು ತೋರಿದ್ದಾರೆ. ಜನಪದ ಕಲೆಗೆ ಮಹತ್ವ ನೀಡಿದ್ದಾರೆ. ಈ ಎಲ್ಲವನ್ನು ತುಳಿತಕ್ಕೊಳಗಾಗಿರುವವರ ಗ್ರಾಮೀಣ ಜನತೆಯ ಬಿಡುಗಡೆಗಾಗಿ ಅವರ ಪ್ರಗತಿಗಾಗಿ ಸೂಚಿಸಿದ್ದಾರೆ.

ಅಕ್ಷರ ಕಲಿಕೆಯನ್ನು ವಿಜ್ಞಾನ ಬೋಧನೆಯನ್ನು ಹಳ್ಳಿಗಳಲ್ಲಿ ಹೇಗೆ ಪ್ರಾರಂಭಿಸಬೇಕೆನ್ನುವ ಮಾರ್ಗಗಳನ್ನು ತೋರಿದ್ದಾರೆ. ಅಂತರ್ಜಾತಿ ವಿವಾಹಗಳನ್ನು ಕುರಿತು ಮನದಟ್ಟು ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಅಂಬೇಡ್ಕರ್ ಕಾನೂನಿನ ಚೌಕಟ್ಟನಲ್ಲಿ ಅಳವಡಿಸಿ ಸುಧಾರಣೆಗೆ ಪ್ರಯತ್ನಿಸಿರುವುದು ಗಮನಾರ್ಹವಾದುದು. ದುರಂತವೆಂದೆರೆ ಅವರು ತಂದ ೧೯೫೫ ರ ಹಿಂದೂ ವಿವಾಹ ಕಾಯ್ದೆಯನ್ನು ಪಾರ್ಲಿಮೆಂಟಿನಲ್ಲಿ ಪುರಸ್ಕಾರ ಮಾಡದೆ ಹೋದುದು.

ವಿವೇಕಾನಂದರು ‘ಪ್ರಬುದ್ಧ ಭಾರತ’ ಪತ್ರಿಕೆಯ ಮೂಲಕ ವಿಚಾರಧಾರೆ ಹರಿಸಿದರು. ಅಂಬೇಡ್ಕರ್ ‘ಮೂಕ ನಾಯಕ’ ‘ಬಹಿಷ್ಕೃತ ಭಾರತ’ ಮುಂತಾದ ಪತ್ರಿಕೆಗಳಲ್ಲಿ ಜನ ಜಾಗೃತಿಗೆ ದುಡಿದರು. ವಿವೇಕಾನಂದರು ರಾಮಕೃಷ್ಣ ಮಿಷನ್ ಮೂಲಕ ಸಮಾಜ ಸೇವೆ ಉಚಿತ ಆಸ್ಪತ್ರೆ ಗ್ರಂಥಗಳ ಪ್ರಕಟಣೆ ವಿದ್ಯಾಸಂಸ್ಥೆಗಳು ಪ್ರಚಾರ ಇತ್ಯಾದಿಗಳನ್ನು ಕೃತಿಗಳಿಸಿದ್ದರೆ ಅಂಬೇಡ್ಕರ್ ರಾಷ್ಟ್ರಕ್ಕೆ ಸಂವಿಥಾನವನ್ನು ನೀಡಿ ಗೌರವಕ್ಕೆ ಪಾತ್ರರಾದರು, ಜನಮನದಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಿದರು.

ಈಗ ರಾಮಕೃಷ್ಣ ಮಿಷನ್ ರಾಮಕೃಷ್ಣ ಮಠವಾಗಿ ಪರಿವರ್ತಿತವಾಗಿ ವಿವೇಕಾನಂದರ ಉದ್ದೇಶಿತ ಕಾರ್ಯಗಳನ್ನು ಅಷ್ಟು ಸಮರ್ಪಕವಾಗಿ ಮಾಡುತ್ತಿಲ್ಲ ಎನ್ನುವ ಆರೋಪದಂತೆಯೇ ಅಂಬೇಡ್ಕಕರರು ರಾಷ್ಟ್ರಕೈ ನೀಡಿದ ಸಂವಿಧಾನವನ್ನು ಹಾಗೂ ಮೀಸಲಾತಿ ಮುಂತಾದ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಅಳವಡಿಸದೆ ರಾಜಕೀಯ ಗೊಳಿಸಿರುವುದು ಈ ದೇಶದ ದುರಂತಗಳಲ್ಲಿ ಒಂದು. ಈ ರೀತಿ ಮಾಡುವುದರ ಮೂಲಕ ಈ ಎರಡೂ ಮಹಾನ್ ಚೇತನಗಳನ್ನು ಭಾರತ ಜನತೆ ಅಗೌರವಿಸಿದೆ ಎಂದರೆ ಸತ್ಯಕ್ಕೆದೂರವಾಗದು.

ವಿವೇಕಾನಂದರ ಸಾಮಾಜಿಕ ಮತ್ತು ಧಾರ್ಮಿಕ ಹೋರಾಟದಲ್ಲಿ ಆಧ್ಯಾತ್ಮದ ವಜ್ರವಕವಚವಿದ್ದರೆ ಅಂಬೇಡ್ಕರ್ ಅವರ ಹೋರಾಟದಲ್ಲಿ ರಾಜಕೀಯದ ಶಕ್ತಿ ತುಂಬಿದ. ಇಂದಿಗೂ ಅವರಿತ್ತ ಸಂವಿಧಾನ ಭಾರತದ ದಲಿತರ ಪಾಲಿಗೆ ಸಂಜೀವಿನಿಯಾಗಿದೆ.

ವಿವೇಕಾನಂದರು ಅವರ ಜೀವಿತದ ಕಡೆಯಲ್ಲಿ “ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು ತಿಳಿಯುವುದಕ್ಕೆ ಮತ್ತೊಬ್ಬ ವಿವೇಕಾನಂದ ಇದ್ದರೆ ಅವನಿಂದ ಮಾತ್ರ ಸಾಧ್ಯ” ಎಂದರು. ನಿಜ ಅವರನ್ನು ಅರ್ಥಮಾಡಿಕೊಳ್ಳಲು ಓದುಗರ ಪ್ರಜ್ಞೆಯು ಅವರ ಪ್ರಜ್ಞೆಯ ಎತ್ತರಕ್ಕೆ ಏರಬೇಕಾದುದು ಅನಿವಾರ್ಯವಾಗುತ್ತದೆ. ಹಾಗೆ ಅಂಬೇಡ್ಕರ್ ಕೂಡ “ಹಿಂದೂಗಳು ನನ್ನನ್ನು ಶತ್ರುವಾಗಿ ಕಾಣುವುದು ಅವಿವೇಕ. ಅವರನ್ನು ನಾನು ಸದಾ ಪ್ರೀತಿಸುತ್ತಲೇ ಇರುವೆ. ಭಾರತೀಯ ತತ್ವಶಾಸ್ತ್ರವನ್ನು ಜೀರ್ಣಿಸಿಕೊಂಡಿರುವ ನಾನು ಅವರಲ್ಲಿರುವ ಕೊಳಕನ್ನು ಶುದ್ಧ ಮಾಡಿ ಪರಿಶುದ್ದ ಜನಾಂಗವನ್ನಾಗಿ ತಯಾರು ಮಾಡಲು, ಅವರ ದುರಾಚಾರಗಳ ವಿರುದ್ದ ಹೋರಾಟನಡೆಸಿರುವೆ. ನನ್ನನ್ನು ಅವರು ತಪ್ಪಾಗಿ ಅರ್ಥಮಾಡಿಕೊಂಡಿರುವರು, ಎಂದಿಗಾದರೂ ನನ್ನ ಮಾರ್ಗವೇ ಸರಿಯಾದುದು ಎ೦ದು ತಪ್ಪದೆ ತಿಳಿಯುವ ಕಾಲ ಬರುತ್ತದೆ” ಎಂದು ಕಾಲದ ಗತಿಯನ್ನು ಸೂಚಿಸಿದ್ದಾರೆ.

ಇದರಿಂದ ಈ ಇಬ್ಬರೂ ಮಹನೀಯರನ್ನು ಕುರಿತು ಅರ್ಥವಾಗುವುದೇನೆಂದರೆ ಅಥವಾ ಮಾಡಿಕೊಳ್ಳಬೇಕಾದ ಅರ್ಥವೆಂದರೆ ಅವರು ಧರ್ಮದ್ವೇಷಿಗಳಲ್ಲ, ಜನಾಂಗದ್ವೇಷಿಗಳಲ್ಲ ಬದಲಿಗೆ ಸ್ವಾತಂತ್ರ್ಯ ಸಮಾನತೆ ಸೋದರತ್ವ ಮಾನವೀಯ ಗುಣಗಳ ಪ್ರತಿಪಾದಕರಾಗಿ ಮಾನುಕುಲದ ದಾರಿದೀಪವಾಗಿದ್ದಾರೆ ಎಂಬುದು. ಅ ಬೆಳಕು ಕಾಣಬೇಕಾದರೆ ನಮ್ಮ ಜಾತಿ ಮತಗಳ ಸಂಪ್ರದಾಯದ ಸಂಕುಚಿತ ದೃಷ್ಟಿಗಳ ಕಳಂಕಪೂರಿತ ಕಣ್ಣುಗಳನ್ನು ಬದಿಗಿಟ್ಟು, ಶುದ್ಧ ನೈಜ ನೋಟದಿಂದ ಮಾನವೀಯ ಅಂತಃಕರಣದಿಂದ ನೋಡಬೇಕು ಎಂಬುದು. ಹಾಗೆ ನೋಡಿದಾಗ
ಮಾತ್ರ ಗೋಚರಿಸುತ್ತದೆ ಅವರೀರ್ವರ ಕತ್ತಲಿರದ ಕೇವಲ ಬೆಳಕಿನೆಡೆಗೆ ಕರೆದೊಯ್ಯುವ ಬೆಳೆಕಿನದಾರಿ.
-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವದ ಅತಿ ಚಿಕ್ಕ ವಿಮಾನ
Next post ಗಾಂಧಿ ಮತ್ತು ಪ್ರಸ್ತುತತೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…