ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ
ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ?
ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ
ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ?
ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು
ತಮಟೆ ಹೊಡೆದು ಸಾರುವೆ ದಿಟದ ಮಾತನು,
ಲೋಕ ತಿಳಿಯುವಂತೆಯೇ ಹರಿಯ ಕೊಂಡೆನೇ
ಸಲ್ಲುವಂಥ ಬೆಲೆಯ ಕೊಟ್ಟು ಇಟ್ಟುಕೊಂಡೆನೇ!
ಅರಮನೆಯನೆ ಕೊಟ್ಟೆನೇ ಹರಿಯ ತಣಿಸಲು
ರಾಜವಸ್ತ್ರ ಕಳಚಿದೆ ಅವನ ತಬ್ಬಲು
ಲಜ್ಜೆ ಮಾನ ಮನ್ನಣೆ ಎಲ್ಲ ಕೊಟ್ಟೆನೇ
ಗೆಜ್ಜೆ ಕಟ್ಟಿ ಕುಣಿಯಲು ಎಲ್ಲ ಬಿಟ್ಟೆನೇ!
ಸುಲಭದ ವ್ಯವಹಾರ ಎಂದು ಹೇಳಬೇಡವೇ
ಎಷ್ಟು ಸುರಿದರೂನು ತ್ರಾಸು ಏಳಲಿಲ್ಲವೇ
ಏನೆಲ್ಲ ಅಡಕಿದರೂ ಸಾಲದಾಯಿತೇ
ಕಡೆಗೆ ಹಮ್ಮನಿಟ್ಟೆ – ಆಗ ತೂಕ ತೂಗಿತೇ
ಹೌದೆ ಸಖೀ ಗಿರಿಧರನ ನಾನು ಕೊಂಡೆನು
ಒಂದೇ ತಾಟಿನಲ್ಲಿ ಅವನ ಜೊತೆಗೆ ಉಂಡೆನು.
*****