ಭಾರೀ ಸರಕೇ ದೊರಕಿದೆ ನನಗೆ
ಇಲ್ಲ ಸಣ್ಣ ಬಯಕೆ – ನನಗೆ
ಇಲ್ಲ ಏನೂ ಕೊರತೆ
ಗಂಗೆಯಾಳದಿ ಈಜುವ ಮೀನಿಗೆ
ಕಿರಿಯ ಕೆರಗಳೇಕೆ?
ವಿಶಾಲ ಆಲವೆ ಆಸರೆ ನೀಡಿದೆ
ಕುರುಚಲು ಗಿಡ ಬೇಕೆ?
ಎತ್ತರ ಶಿಖಿರಕೆ ತುಡಿಯುವ ಕಾಲಿಗೆ
ದಿನ್ನೆ, ಮರಡಿ ಸಾಕೆ?
ಲೋಕದ ಸ್ವಾಮಿಯೆ ಜೊತೆಗಿರ-ಅಲ್ಪ
ದೇವತೆಗಳು ಯಾಕೆ?
ರತ್ನಪಡಿ ವ್ಯಾಪಾರಿ ಈಗ ನಾ
ಮೇಲು ನೆಲೆಯಲಿರುವೆ,
ಕಂಚು ತಾಮ್ರ ಹಿತ್ತಾಳೆ ಲೋಹದ
ಪರಿವೆಯಿಲ್ಲ ನನಗೆ;
ಮುತ್ತು ರತ್ನಗಳ ರಾಶಿ ಸುತ್ತ ಇದೆ
ಕಾಗೆ ಬಂಗಾರವೇಕೆ
ಗಿರಿಧರ ಭಕ್ತರ ಸ್ನೇಹದ ಜೇನಿದೆ
ಭವಿಗಳ ನೆರೆ ಯಾಕೆ?
******