ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ
ಹೇಗೆ ನೀನು ಕರೆದೆ ಹೇಳು ಕೋಗಿಲೆ?
ಹರಿಯು ನನ್ನ ಇನಿಯನೆಂದು ತಿಳಿಯದೆ?
ಲಜ್ಜೆ ಬಿಟ್ಟು ನೀನು ಅವನ ಕರೆವುದೆ?
ಕಿಚ್ಚು ಹಚ್ಚಬೇಡ ನನ್ನ ಹೃದಯಕೆ,
ಉಪ್ಪ ಸುರಿಯಬೇಡ ಉರಿವ ಗಾಯಕೆ,
ಒಂದೆ ಸಮನೆ ಯಾಕೆ ಹಾಗೆ ಕೂಗುವೆ?
ಕೂಗಿ ನನ್ನ ಎದೆಯನೇಕೆ ಸೀಳುವೆ?
ಇಂದು ಹರಿಯನೇನಾದರು ಕಂಡರೆ
ನಿನ್ನ ಕೂಗು ನನಗೆ ಶುಭವ ತಂದರೆ
ಮುದ್ದು, ನಿನಗೆ ಸಿಹಿಯ ತಿನಿಸಿ ಸಾಕುವೆ
ಆ ಕೊರಳಿಗೆ ಚಿನ್ನದ ಸರ ಹಾಕುವೆ.
ಹೋಗು ನನ್ನ ಹರಿಗೆ ತಿಳಿಸು ಬಂಧು
ನಿನ್ನ ನಲ್ಲೆ ಕೊರಗುತಿರುವಳೆಂದು;
ಅನ್ನ ನೀರು ತೊರದು ದಾಸಿ ಮೀರಾ
ಗಿರಿಧರನನ ಕಾಯುತಿರುವಳೆಂದು.
*****