ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ||
ಶಾಲು ಬಣ್ಣದ ಹೊದ್ದೋನ್ಯಾರೆ
ಲೋಲು ಕಿನ್ನುರಿ ನುಡಿಸೋನ್ಯಾರೆ
ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ||
ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ
ಕಾವಾಳದೊಳಗೊಂದು ಕೋಲ್ಮಿಂಚು ಹೊಳೆದಾಂಗ
ದೇವಾಲಯದೊಳಗಿಂದ ಹೊಸನಾದ ನುಡಿದಾಂಗ ||೧||
ಬಯಲು ಬಂಜ್ಯಾಗಿತ್ತು ಎಲ್ಲಾ ಭಣಭಾಣ ಸುರಿದಿತ್ತು
ಗಾಳ್ಯಾಗೇನೋ ಪಿಸುಮಾತು ಹೊಸದಾದ ಸಂದೇಶ
ಮೂಲೆ ಮೂಲೆ ತುಂಬಿ ಬಂದು ಮನದಾಗ ಇಳದೋನ್ಯಾರೆ ||೨||
ಮ್ಯಾಗಾಳ ಕೇರ್ಯಾಗ ಈಸುದಿನ ಮೆರದಾಡಿ ಇದ್ದೋನು
ಕೆಳಗಾಳ ಕೇರ್ಯಾಗೆ ಈಗ ಇಳ್ದು ಬಂದಾನೆ
ಶಿವನ ಜಡೆಮುಡಿಯಿಂದ ಭಾಗೀರಧಿ ಇಳಿದಾಂಗೆ ||೩||
ನೆಲದಾ ಮೈ ಪುಳಕೀಸಿ ತುಳುತುಳುಕಿ ಜ್ಞಾನದ ಸಿರಿಗಂಗೀ
ಹೊಲಸೆಲ್ಲ ತೊಳದಂಗೆ ಓಣಿ ಓಣಿ ತುಂಬಿದಾಂಗೆ
ತಿಳಿಯಾದ ತುಂಗಭದ್ರೆ ತುಂಬಿ ತುಂಬಿ ಹರಿದಂಗೆ ||೪||
ಕಷ್ಟಗಳೆಲ್ಲ ತೀರೀ ಬಾಳೀನ ಇಷ್ಟಾಗಳೆಲ್ಲ ಸಾರಿ
ಲಕ್ಷಾವರಾ ಸುರಂದಂಗೆ ಅಕ್ಷರಾನಾ ತಂದಾನೆ
ಭಿಕ್ಷೆಗತಿ ಇನ್ನಿಲ್ಲ ಸುಭಿಕ್ಷವಾಗಲಂದಾನೆ ||೫||
*****