ಏನ್ ಗ್ರಾಚಾರ ಸಾ…….ಅ
ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು.
ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು.
ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವಲ್ಟಿಯಲ್ಲಿ.
ನನ್ನ ರಕ್ಷಣೆಗಿದ್ದವನು ಕಾಂತಮಂಗಲದ ಬಣ್ಣದ ಸುಧಾಕರ.
ಪಕ್ಕದ ಮನೆಯ ಹುಡುಗ ಸುಧಾಕರನಿಗೆ ಯಕ್ಷಗಾನದ ಮೊದಲ ಪಾಠಗಳನ್ನು ಹೇಳಿಕೊಟ್ಟವನು ನಾನು. ಈಗವನು ಒಳ್ಳೆಯ ಕಲಾವಿದ.
ಸುಗುಣ ಡಾಕ್ಟರು ಯಕ್ಷಗಾನದ ಅಸಾಧ್ಯ ಹುಚ್ಚರು. ಸರಕಾರಿ ಆಸ್ಪತ್ರೆಯ ಬಳಿಯಲ್ಲಿದ್ದ ಅವರ ನವಜೀವನ ಡಿಸ್ಪೆನ್ಸರಿಯಲ್ಲಿ ಒಂದು ಕಾಲದಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದರು. ಈಗವರು ಕೆ.ವಿ.ಜಿ. ಮೆಡಿಕಲ್ ಕಾಲೇಜು ಸೇರಿಕೊಂಡಿದ್ದಾರೆ.
ಡಿಸ್ಪೆನ್ಸರಿಯಲ್ಲಿದ್ದಾಗ ಮೇಜಿಗೆ ತಾಳ ಹಾಕುತ್ತಾ ಯಕ್ಷಗಾನ ಹಾಡು ಹೇಳುವುದು ಅವರ ರೂಢಿ. ನನ್ನ ಆಗಿನ ಬಾಡಿಗೆ ಮನೆ ಡಿಸ್ಪೆನ್ಸರಿಯಿಂದ ಬರಿಯ ಐವತ್ತು ಮೀಟರು ದೂರದಲ್ಲಿತ್ತು. ನಾನು ದಿನಕ್ಕೆರಡು ಬಾರಿ ಡಿಸ್ಪೆನ್ಸರಿಗೆ ಹೋಗಿ ಸುಗುಣ ಡಾಕ್ಟರ ಗಾಯನ ಸುಧೆಯನ್ನು ಸವಿಯದಿದ್ದರೆ ಅವರಿಗೆ ಬೇಸರವಾಗುತ್ತಿತ್ತು.
ಡಿಸ್ಪೆನ್ಸರಿಗೆ ಯಾರೇ ಬರಲಿ, ರೋಗಿ ಯಾವುದೇ ಸ್ಥತಿಯಲ್ಲಿರಲಿ, ಸುಗುಣ ಡಾಕ್ಟರು ಯಕ್ಷಗಾನ ಬಿಟ್ಟವರಲ್ಲ. ನಾನು ಶೀತಕ್ಕೊ, ಕೆಮ್ಮಮಿಗೋ ಮದ್ದಿಗೋ ಎಂದು ಹೋದರೂ ಅವರ ಗಾಯನವನ್ನು ಕೇಳಿದರೇನೇ ನನಗೆ ಔಷಧಿ ಸಿಗುವುದು.
ಅವರಿಗೆ ನನ್ನ ಯಕ್ಷಗಾನ ಪಾತ್ರಗಳು ಇಷ್ಟ.
ನನಗೆ ಅವರ ಯಕ್ಷಗಾನದ ಹುಚ್ಚು ಇಷ್ಟ.
ಸಮಾನ ವ್ಯಸನಿಗಳಲ್ಲಿ ಸಖ್ಯ ಬೆಳೆಯುತ್ತದೆ.
ಅವರೊಡನಿರುವವರಲ್ಲಿ ಏನ್ ಗ್ರಾಚಾರ ಸಾ….ಅ ಎಂದದ್ದು ಯಾರು.
ದಪ್ಪನೆಯ ಬ್ಯಾಂಡೇಜು ಹಾಕಿಸಿಕೊಂಡಿದ್ದ ನನ್ನ ಎಡಗಾಲು ಭಯಾನಕವಾಗಿ, ಬೊಬ್ಬೆ ಹಾಕಬೇಕೆನಿಸುವಷ್ಟು ನೋಯುತ್ತಿತ್ತು.
ಸ್ವಲ್ಪ ಹೊತ್ತಿಗೆ ಮೊದಲು ಕಾಲೇಜಿನಿಂದ ಮನೆಗೆ ಹೋಗುತ್ತಿದ್ದವನು ಕಾಂತಮಂಗಲ ಸೇತುವೆ ಬಳಿಯ ತಿರುವಿನಲ್ಲಿ ಸ್ಕೂಟರಿನಿಂದ ಅಷ್ಟು ದೂರಕ್ಕೆ ಹಾರಿಬಿದ್ದು ಎಡಗಾಲು ಲಟಕ್ಕೆಂದು ಮುರಿದದ್ದು ನೆನಪಾಯಿತು.
ಅಂದು ಅಕ್ಟಟೋಬರ ೧೨, ೨೦೦೯.
ಸಂಜೆ ನಾಲ್ಕುವರೆಗೆ ಕಾಲೇಜು ಬಿಟ್ಟೆ. ಎಂದಿನಂತೆ ಹಾಲುಹಣ್ಣು ತೆಗೆದುಕೊಂಡೆ. ತರಕಾರಿ ಅಂಗಡಿಯಲ್ಲಿ ಫ್ರೆಷ್ ಆದ ಲೋಕಲ್ ಮುಳ್ಳು ಸೌತೆಗಳಿದ್ದವು. ನಾಲ್ಕು ತೆಗೆದು ಕೊಂಡೆ. ಅವನ್ನು ಹಸಿಯಾಗಿ ತಿನ್ನಲು ಬಹಳ ರುಚಿ. ಲೋಕಲ್ಲು ಮುಳ್ಳು ಸೌತೆಯಿಂದ ಮಾಡಿದ ಕಲ್ತಪ್ಪದಷ್ಟು ರುಚಿಯಾದ ತಿಂಡಿ ಈ ಪ್ರಪಂಚದಲ್ಲಿ ಬೇರೊಂದಿಲ್ಲ.
ಕಾಲೇಜು ಪ್ರೊಫೆಸರು ಕಾರು ಕೊಳ್ಳೋದು ಯಾವಾಗ.
ಇದು ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಪ್ರಶ್ನೆ.
ಈ ಬಾರಿ ಕೊಳ್ಳಲು ಸಾಧ್ಯವಿದೆ.
ಹೊಸ ಯು.ಜಿ.ಸಿ. ವೇತನ ಬೇಗದಲ್ಲೇ ಬರಲಿದೆ. ಕಾರು ಕೊಳ್ಳಬೇಕೆಂದೇ ಕಾವೇರಿ ಡ್ರೈವಿಂಗ್ ಸ್ಕೂಲಿನ ಸಂತುವಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದೆ.
ಸಂತು ನನ್ನ ಡ್ರೈವಿಂಗ್ ಗುರುವಾದರೂ ನನ್ನನ್ನೇ ಗುರುಗಳೇ ಎಂದು ಕರೆಯುತ್ತಿದ್ದ. ಆತನ ಇಬ್ಬರು ಅಕ್ಕಂದಿರಿಗೆ ನಾನು ಯಕ್ಷಗಾನ ಗುರು.
ನಾನು ಹೋಂಡಾ ಏಕ್ಟಿವಾದ ಕಿವಿ ಹಿಂಡಿದೆ.
ಮನೆಯಲ್ಲಿ ಶೈಲಿ ಒಬ್ಬಳೇ ಇದ್ದಾಳೆ. ಗರ್ಭಾಶಯದಲ್ಲಿ ಗೆಡ್ಡೆ ಕಾಣಿಸಿಕೊಂಡ ಮೇಲೆ ಅವಳು ತುಂಬಾ ನೋವುಂಡಳು. ಪುತ್ತೂರಿನ ಚೇತನಾ ಕ್ಲಿನಿಕ್ಕಿನಲ್ಲಿ ಡಾ|| ಪೂರ್ಣಾ ಸಿ. ರಾವ್ ಶಸ್ತ್ರಚಿಕಿತ್ಸೆ ಮಾಡಿ ಗರ್ಭಾಶಯವನ್ನು ತೆಗೆದಿದ್ದರು. ಆ ಪುಟ್ಟ ಅಂಗದ ಫೋಟೋ ತೆಗೆದಿಟ್ಟುಕೊಂಡಿದ್ದೆ. ಅದರಲ್ಲಿ ಮಗ ಪೃಥ್ಥಿ, ಮಗಳು ಪ್ರತೀಕ್ಷಾ ಒಂಬತ್ತು ತಿಂಗಳು ಬೆಳೆದು ಬೆಳಕು ಕಂಡಿದ್ದರು.
ಶೈಲಿಗೆ ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಅಗತ್ಯವೆಂದು ಪೂರ್ಣಾರಾವ್ ಹೇಳಿದ್ದರು. ಶೈಲಿ ತುಂಬಾ ದೈಹಿಕ ನೋವುಣ್ಣುತ್ತಿದ್ದಳು. ಏಕಾಂಗಿತನ ಅವಳಿಗೆ ಮಾನಸಿಕ ನೋವನ್ನು ಉಂಟು ಮಾಡುತ್ತಿತ್ತು. ದೈಹಿಕ ನೋವನ್ನು ಅವಳೇ ಉಣ್ಣಬೇಕು. ನಾನು ಬೇಗ ಹೋದರೆ ಅವಳ ಮಾನಸಿಕ ನೋವು ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ.
ಸ್ಕೂಟರು ಕೆ.ಇ.ಬಿ. ಬಳಿಗೆ ಬಂತು. ಇನ್ನೇನು ಯು.ಜಿ.ಸಿ.ಯ ನ್ಯಾಕ್ ತಂಡ ನಮ್ಮ ಕಾಲೇಜಿನ ಮೌಲ್ಯಮಾಪನಕ್ಕೆ ಬರಲಿದೆ. ಐದು ವರ್ಷಗಳ ಹಿಂದೆ ಬಂದಿದ್ದ ನ್ಯಾಕ್ ತಂಡ ನಮ್ಮ ಕಾಲೇಜಿಗೆ ಬಿ ಪ್ಲಸ್ ಪ್ಲಸ್ ಗ್ರೇಡು ನೀಡಿತ್ತು. ಈ ಬಾರಿ ಮ್ಯಾನೇಜುಮೆಂಟು ಎ ಗ್ರೇಡು ನಿರೀಕ್ಷಿಸುತ್ತಿದೆ. ಅದಕ್ಕಾಗಿ ಕಾಲೇಜು ಮೂರು ಕೋಟಿ ರೂಗಳ ವೆಚ್ಚದಲ್ಲಿ ಹೊಸ ರೂಪ ತಾಳುತ್ತಿದೆ. ಆಫೀಸು ಮತ್ತು ಗ್ರಂಥಾಲಯಗಳು ಯಾಂತ್ರೀಕರಣವಾಗುತ್ತಿವೆ. ವಿಭಾಕ್ಕೊಂದರಂತೆ ಕಂಪ್ಯೂಟರು ಸಜ್ಜಿತ ಸ್ಟಾಫುರೂಮು ನಿರ್ಮಾಣಗೊಳ್ಳುತ್ತಿವೆ. ನ್ಯಾಕ್ ತಂಡ ಗ್ರೇಡ್ ನೀಡಲು ಆಯಾ ವಿಭಾಗದ ಸಂಶೋಧನೆ ಮತ್ತು ಪ್ರಕಟಣೆಗಳನ್ನು ಬಹಳ ಮುಖ್ಯವಾಗಿ ಪರಿಗಣಿಸುತ್ತದೆ. ನನ್ನ ಮಾರ್ಗದರ್ಶನದಲ್ಲಿ ಏಳು ಅಧ್ಯಾಪಕರು ಎಂ.ಫಿಲ್ ಸಂಪೂರ್ಣಗೊಳಿಸಿದ್ದಾರೆ. ಇಬ್ಬರು ಪಿ.ಎಚ್.ಡಿ. ಮಾಡುತ್ತಿದ್ದಾರೆ. ನ್ಯಾಕ್ ಬರುವ ಮೊದಲು ಅವರಿಬ್ಬರ ಸಂಶೋಧನಾ ನಿಬಂಧ ಸಿದ್ಧಿಗೊಂಡರೆ ನಮ್ಮ ಕಾಲೇಜಿಗೆ ತುಂಬಾ ಪ್ರಯೋಜನವಾಗುತ್ತದೆ. ಎ ಗ್ರೇಡು ಸಿಗಲೂ ಬಹುದು.
ಅಂತಿಮ ಬಿ.ಎ. ವಿದ್ಯಾರ್ಥಿಗಳು ಮೂರು ವಿಭಿನ್ನ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಿದ್ದರು. ಅವುಗಳನ್ನು ವಿಶ್ಲೇಷಿಸಿ ಸಂಶೋಧನಾ ವರದಿಯನ್ನು ಸಿದ್ಧಪಡಿಸಬೇಕು. ಅದೂ ನ್ಯಾಕ್ ತಂಡ ಪರಿಶೀಲಿಸಿರುವ ಸಾಧನೆ.
ನಿವೃತ್ತಿಯ ಬಳಿಕ ಗಂಭೀರವಾಗಿ ಸಂಶೋಧನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕೆಂದು ಮತ್ತು ತೀರಾ ಹಿಂದುಳಿದಿರುವ ಪ್ರದೇಶವೆಂಬ ಕುಖ್ಯಾತಿಯಿಂದ ಹೊರ ಬರಲಾಗದ ಸುಳ್ಯ ತಾಲೂಕಿನಲ್ಲಿ ಸಂಶೋಧನೆಯ ಆಸಕ್ತಿ ಮೂಡಿಸಬೇಕೆಂದು ನಮ್ಮ ಮನೆಯ ಮಹಡಿಯನ್ನು ಡಾ. ಬ್ರಹ್ಮಾನಂದ ಅರ್ಥಶಾಸ್ತ್ರ ಅಧ್ಯಯನ ಕೇಂದ್ರವನ್ನಾಗಿ ಪರಿವರ್ತಿಸಿದ್ದೆ. ಬ್ರಹ್ಮಾನಂದರು ವಿನಾ ದೈನ್ಯೇನ ಜೀವಿತ್ಬಂ ನಡೆಸಿ ಸದಾ ಪ್ರಭುತ್ವವನ್ನು, ವ್ಯವಸ್ಥೆಯನ್ನು ಪ್ರಶ್ನಿಸಿ ಪಟ್ಟಭದ್ರರನ್ನು ಎದುರು ಹಾಕಿಕೊಂಡಿದ್ದವರು. ಅವರ ಸ್ಮಾರಕ ಕೇಂದ್ರವನ್ನು ಯಾರಲ್ಲೂ ಆರ್ಥಿಕ ಸಹಾಯ ಯಾಚಿಸದೆ ವ್ಯವಸ್ಥತಗೊಳಿಸಬೇಕು ಎಂಬ ನನ್ನ ಆಶಯ ಇನ್ನೂ ಈಡೇರಿರಲಿಲ್ಲ. ಅದನ್ನು ನನ್ನ ಗುರುಗಳು, ಡಾ. ಸಿ.ಕೆ. ರೇಣುಕಾರ್ಯರು ಉದ್ಛಾಟಿಸಿದ್ದರು. ಇದೊಂದು ಅಪೂರ್ವ, ಅದ್ಧಿತ ಯೋಜನೆ ಎಂದು ಡಾ. ಕುರುಂಜಿಯವರು ಬೆನ್ನು ತಟ್ಟಿದ್ದರು. ಆದರೆ ಕೇಂದ್ರ ನಿರ್ಮಾಣ ಕಾರ್ಯ ನಿಧಾನವಾಗುತ್ತಿದೆ. ಅದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಅದು ಬಸವಣ್ಣನ ಅನುಭವ ಮಂಟಪದಂತಾಗಬೇಕು. ಸುಳ್ಯದ ಜಿಜ್ಞಾಸುಗಳು, ನನ್ನ ಶಿಷ್ಯಶಿಷ್ಯೆಯರು ಆಗಾಗ ಇಲ್ಲಿಗೆ ಬರುವಂತಾಗಬೇಕು. ಅನುಭವದ ಪಾಲೊಳು ವಿಚಾರ ಮಂಥನವಾಗಿ ಜ್ಞಾನ ನವನೀತ ಜನಿಸಬೇಕು.
ಕಾಂತಮಂಗಲ ಶಾಲೆ ಈ ವರ್ಷ ಸುವರ್ಣ ಮಹೋತ್ಸವ ಆಚರಿಸ ಹೊರಟಿದೆ. ಮನಮೋಹನ ಪುತ್ತಿಲ ಸಮಿತಿಯ ಅಧ್ಯಕ್ಷರಾಗಿದ್ದಾರೆ. ನಾನು ಸ್ಮರಣ ಸಂಚಿಕೆಯ ಸಂಪಾದಕ. ಶಾಲೆಯ ಐವತ್ತು ವರ್ಷಗಳ ಇತಿಹಾಸ ಕೆದಕಿ ಅಪೂರ್ವವಾದ ಒಂದು ಸ್ಮರಣ ಸಂಚಿಕೆ ಸಿದ್ಧಪಡಿಸಬೇಕು. ಎಲ್ಲಕ್ಕೂ ಮೊದಲು ಶೈಲಿ ಮೊದಲಿನಂತಾಗಬೇಕು.
ಕಾಂತಮಂಗಲ ಸೇತುವೆಗೆ ಮೊದಲು ಸಿಗುವ ಹಾಜಿಯವರ ಅಂಗಡಿಯ ಕೆಳಗೆ, ಜಳಕದ ಗುಂಡಿಗೆ ಹಾದಿ ಕವಲೊಡೆಯುವಲ್ಲಿನ ಆ ತಿರುವಿನಲ್ಲಿ ಇದ್ದಕ್ಕಿದ್ದಂತೆ ಆ ಬೈಕು ಎದುರಾಯಿತು. ಅದರಲ್ಲಿ ಇಬ್ಬರು ತರುಣರಿದ್ದರು. ರಾಂಗ್ ಸೈಡಿನಲ್ಲಿ ಅತಿವೇಗದಲ್ಲಿ ಬರುತ್ತಿದ್ದ ಆ ಬೈಕು ಇನ್ನೇನು ನನಗೆ ಗುದ್ದಿ ಬಿಡುತ್ತದೆಯೆಂದಾದಾಗ ನಾನು ಹೋಂಡಾ ಆಕ್ಟಿವಾವನ್ನು ಮತ್ತಷ್ಟು ಸೈಡಿಗೊಯ್ದು ಬ್ರೇಕು ಬಲವಾಗಿ ಒತ್ತಿದೆ. ಮಳೆಯಿಂದಾಗಿ ಸ್ಕೂಟರು ಸ್ಕಿಡ್ ಆಗಿ ನಾನು ಅಷ್ಟು ದೂರಕ್ಕೆ ಹಾರಿ ಆಯತಪ್ಪಿ ದೊಪ್ಪನೆ ಬಿದ್ದೆ.
ಏಳಲಾಗುತ್ತಿಲ್ಲ. ಕನ್ನಡಕ ಎಲ್ಲೋ ಹಾರಿ ಬಿಟ್ಟಿದೆ. ಕಣ್ಣಿನ ಕೆಳಗೆ ಗಾಯವಾಗಿ ರಕ್ತಧಾರೆಯಾಗಿ ಹರಿಯುತ್ತಿದೆ. ಹಲ್ಲುಗಳು ಹೋಗಿವೆ. ಎದೆ ನೆಲಕ್ಕೆ ಬಡಿದ ರಭಸಕ್ಕೆ ಉಸಿರು ಕಟ್ಟುತ್ತಿದೆ.
ಇನ್ನು ಸ್ವಲ್ಪ ಹೊತ್ತಿನಲ್ಲಿ ಕತೆ ಮುಗಿದೇ ಹೋಗುತ್ತದೆ. ಮುಗಿದರೇನಾಗುತ್ತದೆ.
ಹದಿನಾಲ್ಕು ವರ್ಷಗಳ ಸೇವಾನುಭವವುಳ್ಳ ಶೈಲಿಗೆ ತಿಂಗಳಿಗೆ ಏಳು ಸಾವಿರ ಸಂಬಳ ಬರುವ ಟೀಚರ್ ಕೆಲಸವಿದೆ.
ಈಗ ತಾನೇ ಎಂ.ಸಿ.ಎ. ಮುಗಿಸಿರುವ ಮಗ ಪೃಥ್ಥಿಗೆ ವಿವೇಕಾನಂದ ಕಾಲೇಜಲ್ಲಿ ತಿಂಗಳಿಗೆ ಹತ್ತು ಸಾವಿರ ದೊರೆಯುತ್ತಿದೆ.
ಮಗಳು ಪ್ರತೀಕ್ಷಾ ಅಲೋಶಿಯಸ್ಸಿನಲ್ಲಿ ಇಂಗ್ಲೀಷ್ ಲಿಟರೇಚರ್, ಜರ್ನಲಿಸಂ, ಸೈಕಾಲಜಿ ಓದುತ್ತಿದ್ದಾಳೆ. ಅವಳ ಬದುಕು ತೀರಾ ಅನಿಶ್ಚಿತವಾಗಿ ಬಿಡುತ್ತದೆ.
ನನ್ನ ಕಾಲೇಜಲ್ಲಿ……..
ಮಕ್ಕಳಿಗೆ ಒಂದು ದಿನ ರಜೆ ಸಿಗುತ್ತದೆ.
ನನ್ನ ಸ್ಥಾನಕ್ಕೆ ಬೇರೊಬ್ಬರು ಬರುತ್ತಾರೆ.
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್. ವಿದ್ಯಾರ್ಥಿಗಳ ಮೆಮೊರಿ ಇನ್ನೂ ಶಾರ್ಟ್.
ಬಂಧು ಬಾಂಧವರ ಪ್ರತಿಕ್ರಿಯೆ ಏನಿರಬಹುದು.
ಸಾಯುವ ವಯಸ್ಸಲ್ಲದ ಆದರೆ ಕಾಯಿಲೆಯಿಂದ ಹಾಸಿಗೆ ಹಿಡಿದು ನರಳಿ ಸಾಯಲಿಲ್ಲವಲ್ಲಾಲ ಪುಣ್ಯಾತ್ಮ ಅಂತ ಒಂದು ಬಾರಿ ಹೇಳಿ ಮರೆತು ಬಿಡುತ್ತಾರೆ.
ಯಾರಿಗಾದರೂ ಸಂತೋಷ ಆದೀತಾ.
ನಾನು ತರಗತಿಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಸಮಾನತೆ ಮತ್ತು ಜಾತ್ಯತೀತತೆಯ ಬಗ್ಗೆ ಮಾತಾಡುತ್ತಿರುತ್ತೇನೆ.
ಅಸಮಾನತೆಯಲ್ಲಿ ಸುಖವುಣ್ಣುವವರ ಮತ್ತು ತಮ್ಮ ಸ್ವಾರ್ಥಕ್ಕಾಗಿ ಜಾತಿಯನ್ನು ಬಂಡವಾಳ ಮಾಡಿಕೊಳ್ಳುವವರ ಪ್ರತಿಕ್ರಿಯೆ ಏನಿರಬಹುದು.
ಸುಳ್ಯದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ತಾಲೂಕು ಸಮಿತಿ ನನ್ನನ್ನು ಆಯ್ಕೆ ಮಾಡಿದಾಗ ಅದು ತೃತೀಯ ಮಹಾಯುದ್ಧಕ್ಕಿಂತ ಘೋರ ಅಕೃತ್ಯವೆಂಬಂತೆ ನನ್ನ ಕೆಲವು ಮಿತ್ರರು ಮತ್ತು ಶಿಷ್ಯರು ಸಿಕ್ಕ ಸಿಕ್ಕ ಪತ್ರಿಕೆಗಳಲ್ಲಿ ಬರೆದು ಬರೆದು ಮಾನಸಿಕ ಧಾಳಿ ನಡೆಸಿದ್ದರು.
ಅವರಿಗೀಗ ಏನು ಅನ್ನಿಸಬಹುದು…
ನನ್ನ ಯೋಚನೆ ಇನ್ನೂ ಮುಂದುವರಿಯಲಿದ್ದಾಗ ಬೈಕು ತರುಣರು ಓಡಿಕೊಂಡು ಬಂದರು.
ಯಾರವರುಲ ಕನ್ನಡಕ ಹಾರಿ ಹೋಗಿ ಗುರುತು ಹಿಡಿಯಲು ಆಗುತ್ತಿಲ್ಲ.
—
ಅವರು ದೈನೇಸಿ ಸ್ವರದಲ್ಲಿ ಹೇಳಿದರು.
ನಾವು ನಿಮಗೆ ಢಿಕ್ಕಿ ಹೊಡೆಯಲಿಲ್ಲ ಸರ್.
ನಾನು ಬಿದ್ದಲ್ಲಿಂದ ಏಳಲು ಯತ್ನಿಸಿದೆ. ಆಗುತ್ತಿಲ್ಲ. ಎಡಕಾಲು ಮುರಿದು ಹೋಗಿದೆ.
ಮೊದಲು ನನ್ನನ್ನು ಎಬ್ಬಿಸಿ. ನಾನು ಸತ್ತುಹೋಗುತ್ತಿದ್ದೇನೆ ಎಂದೆ.
ಅಷ್ಟು ಹೊತ್ತಿಗೆ ಆ ಹಾದಿಯಲ್ಲಿ ಸಂಚರಿಸುವ ನಮ್ಮ ಕಾಲೇಜು ಮಕ್ಕಳು ಓಡಿಕೊಂಡು ಬಂದರು. ಸಮೀಪದ ಮನೆಗಳವರೂ. ಆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳು ನಿಂತವು.
ಇನ್ನೂ ಅಲ್ಲಿದ್ದರೆ ತಪರಾಕಿ ಗ್ಯಾರಂಟಿ ಎಂದು ಬೈಕ್ ಹುಡುಗರು ಓಟಕಿತ್ತರು.
ನನ್ನ ಮನೆಯ ಹತ್ತಿರದ ಜನಾರ್ದನ ಕಣಕ್ಕೂರು ಬೈಕು ನಿಲ್ಲಿಸಿ ನನ್ನ ಬಳಿಗೆ ಬಂದು ನನ್ನನ್ನು ಎತ್ತಿದರು. ಇನ್ನೂ ಒಂದಿಬ್ಬರು ಸಹಾಯ ಮಾಡಿದರು.
ಆದರೆ ನನಗೆ ನಿಲ್ಲಲಾಗಲಿಲ್ಲ.
ಆಗುತ್ತಿಲ್ಲ ಜನಾರ್ದನ್. ಎಡಗಾಲು ಮುರಿದು ಹೋಗಿದೆ. ತಲೆ ತಿರುಗುತ್ತಿದೆ. ಕಣ್ಣು ಕತ್ತಲೆ ಬರುತ್ತಿದೆ. ನನ್ನನ್ನು ಎಲ್ಲಾದರೂ ಮಲಗಿಸಿ.
ನಾನು ಕಣಕ್ಕೂರಿಗೆ ಜೋತುಬಿದ್ದೆ.
ರಕ್ತ ಹೋಗುತ್ತಲೇ ಇದೆ. ಕಣ್ಣುಗಳು ಮುಚ್ಚಿತ್ತಿವೆ.
ಸಾವು ಅಂದರೆ ಇದೇ ಇರಬೇಕು.
ಜಾತಸ್ಯ ಹೀ ಧ್ರುವೋ ಮೃತ್ಯು.
ಹುಟ್ಟಿದವರು ಸಾಯಲೇ ಬೇಕು. ಅದು ಪ್ರಕೃತಿ ನಿಯಮ.
ನಾನು ಎಷ್ಟೋ ಬಾರಿ ಅಂದುಕೊಳ್ಳುವುದಿತ್ತು.
ತರಗತಿಯಲ್ಲಿ ನಾನು ಮೈಮರೆತು ಪಾಠ ಮಾಡುತ್ತಿರುವಾಗ, ಜವಾಬ್ದಾರಿಯ ಗಂಭೀರತೆ ಕಾಣಸಿಗದ ಮುಗ್ಧ ಮುಖಗಳು ಕಣ್ಣರಳಿಸಿ ಪಾಠ ಕೇಳುತ್ತಿರುವಾಗ, ಆಗ, ಹಾಗೇ ಕುಸಿದು ಬಿದ್ದು ನಾನು ಸತ್ತು ಹೋಗಬೇಕು.
ಅದು ಸಾರ್ಥಕ ಸಾವು.
—-
ವೇಷ ಹಾಕಿರುವಾಗಲೇ ಕುಸಿದು ಸತ್ತು ಹೋದರು ಯಕ್ಷಗಾನ ಕಲಾವಿದ ಶಿರಿಯಾರ ಮಂಜು ನಾಯಕರು ಮತ್ತು ಶಂಭು ಹೆಗಡೆಯವರು.
ಹಾಡುವಾಗಲೇ ಅಂತಿಮ ಉಸಿರೆಳೆದರು ಭಾಗವತ ದಾಮೋದರ ಮಂಡೆಚ್ಚರು.
ಪಾಠ ಮಾಡುತ್ತಿರುವಾಗಲೇ ಕುಸಿದು ಸತ್ತು ಹೋದರು ಶಿಶಿಲರು ಎಂದಾಗಬೇಕು.
ನನ್ನ ದೇಹವನ್ನು ಮೆಡಿಕಲ್ಲು ಉದ್ದೇಶಗಳಿಗಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿಗೆ ದಾನ ಮಾಡುತ್ತೇನೆಂದು ನಾನು ವೀಲು ನಾಮೆ ಬರೆದಿಟ್ಟಾಗಿದೆ. ನನ್ನ ಕಾಲೇಜಿನಿಂದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬರಿಯ ಐವತ್ತು ಮೀಟರ್ ದೂರ. ತರಗತಿಯಲ್ಲಿ ಕುಸಿದು ಬಿದ್ದವನ ಪಾರ್ಥಿವ ಶರೀರವನ್ನು ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಪ್ರಾಚಾರ್ಯರು ಮೆರವಣಿಗೆಯಲ್ಲಿ ತಂದು ಕೆ.ವಿ.ಜಿ. ಆಸ್ಪತ್ರೆಗೆ ಒಪ್ಪಿಸಬೇಕು. ದಿನಕರ ದೇಸಾಯಿಯವರು ಹೇಳಿದಂತೆ ಸತ್ತ ಮೇಲಾದರೂ ದೇಹ ಸೇವೆಗೆ ನಿಲ್ಲಲಿ.
ಇಲ್ಲೀಗ ಹೀಗೆ ಸತ್ತುಹೋಗಿ ಬಿಟ್ಟರೆ ಏನಾಗುತ್ತದೆ…
ಹೆಣ ಸರಕಾರಿ ಆಸ್ಪತ್ರೆಗೆ ಪೋಸ್ಟು ಮಾರ್ಟಂಗೆ ಹೋಗುತ್ತದೆ. ಅಲ್ಲಿ ಅಡ್ಡಕ್ಕೆ ಉದ್ದಕ್ಕೆ ಅದನ್ನು ಚಕಚಕನೆ ಕೊಯಿದು ಏನೇನೋ ವರದಿ ಬರೆದು, ದೇಹಕ್ಕೆ ಹೊಲಿಗೆ ಹಾಕಿ ಕಳುಹಿಸಿ ಬಿಡುತ್ತಾರೆ.
ಹಾಗೆಛಿದ್ರಛಿದ್ರವಾದ ದೇಹವನ್ನು ಕೆ.ವಿ.ಜಿ. ಮೆಡಿಕಲ್ಲು ಕಾಲೇಜಲ್ಲಿ ವೈದ್ಯಕೀಯ ಉದ್ದೇಶಗಳಿಗೆ ಬಳಸುವಂತಿಲ್ಲ.
ಛೇ ನಾನಂದುಕೊಂಡಂತೆ ಆಗುತ್ತಿಲ್ಲ. ಸತ್ತ ಮೇಲೆ ಈ ದೇಹ ಸೇವೆಗೆ ಸಿಗುವುದಿಲ್ಲ.
ಏನೂ ಆಗಲ್ಲ ಸರ್. ಜೀಪುಂಟು ಬನ್ನಿ. ಕೆ.ವಿ.ಜಿ. ಆಸ್ಪತ್ರೆಗೆ ಕರಕೊಂಡು ಹೋಗುತ್ತೇನೆ.
ನನ್ನನ್ನು ಹಿಡಿದುಕೊಂಡಿದ್ದವರು ಜೀಪಿಗೇರಿಸಲು ನೋಡಿದರು.
ಊಹುಂ. ಕುಳಿತುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.
ಕಾರಲ್ಲಿ ಆದೀತು ನೋಡೋಣ.
ಊಹುಂ. ನನ್ನ ದೇಹದಲ್ಲಿ ಬಲವೇ ಇಲ್ಲ.
ಒಂದು ನಿಮಿಷ ಇವರನ್ನು ಹಿಡಿದುಕೊಳ್ಳಿ. ನಾನು ೧೦೮ ಕ್ಕೆ ಫೋನು ಮಾಡುತ್ತೇನೆ.
—
ಕಣಕ್ಕೂರು ಫೋನು ಮಾಡಿದರು. ಅಂಬ್ಯುಲೆನ್ಸು ಬಂತು. ಸಿಬ್ಬಂದಿ ನನ್ನನ್ನು ಸ್ಟ್ರೆಚರಿನಲ್ಲಿ ಮಲಗಿಸಿತು.
ಕೆ.ವಿ.ಜಿ. ಮೆಡಿಕಲ್ಲು ಕಾಲೇಜು ಆಸ್ಪತ್ರೆಯೆದುರು ನನ್ನನ್ನು ಇಳಿಸಿದಾಗ ಪ್ರಾಚಾರ್ಯ ದಾಮೋದರ ಗೌಡರು, ಪ್ರಾಧ್ಯಾಪಕ ಗಡಣ, ಕೆ.ವಿ.ಜಿ. ಸಂಸ್ಥೆಗಳ ಸಿಬ್ಬಂದಿ, ಒಂದಷ್ಟು ವಿದ್ಯಾರ್ಥಿಗಳು, ಅಕಾಡೆಮಿ ಉಪಾಧ್ಯಕ್ಷ ಡಾ|| ಚಿದಾನಂದ್, ಅವರ ಪತ್ನಿ ಶೋಭಕ್ಕ, ಮೆಡಿಕಲ್ಲು ಕಾಲೇಜು ಆಡಳಿತಾಧಿಕಾರಿ ಅಟ್ಲೂರು ರಾಮಕೃಷ್ಣ, ನೆಟ್ ಕಾಂ ಸುಧಾಕರ ರೈ ಇನ್ನೂ ಕೆಲವು ಆತಂಕದ ಮುಖಗಳು ಕಾಣಿಸಿದವು.
ಚಿದಾನಂದ ಡಾಕ್ಟರು ಮುಗುಳ್ನಕ್ಕು ಕೇಳಿದರು.
ಇದೇನು ಮಾಡ್ಕೂಂಡ್ರಿ ಶಿಶಿಲ.
ನಾನೂ ನಕ್ಕೆ.
ಒಂದು ಡಿಫರೆಂಟು ಎಕ್ಸ್‌ಪೀರಿಯನ್ಸು ಸರ್.
ನನ್ನ ದೇಹ ಎಕ್ಸ್‌ರೇ ಕೋಣೆಗೆ ಚಲಿಸಿತು.
ಎಡಗಾಲು, ಬಲಗಾಲು, ಎದೆ, ತಲೆನಾಲ್ಕು ಎಕ್ಸ್‌ರೇಗಳಾದವು.
ಅದಾಗಿ ದೇಹ ಕ್ಯಾಜುವಲ್ಟಿಗೆ ಸಾಗಿತು.
ಅಲ್ಲಿಗೆ ರಾಜು ಡಾಕ್ಟರು ಬಂದರು. ಆರ್ಥೋದಲ್ಲಿ ಆ ಯುವಕನದು ಬಲು ದೊಡ್ಡ ಹೆಸರು.
ಅವರೊಡನೆ ಒಂದಷ್ಟು ವೈದ್ಯಕೀಯ ವಿದ್ಯಾರ್ಥಿಗಳು, ನರ್ಸುಗಳು ಮತ್ತು ನಾಲ್ಕೈದು ವೈದ್ಯರು.
ನಾಲ್ಕು ಎಕ್ಸ್‌ರೇಗಳನ್ನು ದಾದಿಯೊಬ್ಬಳು ತಂದು ರಾಜು ಡಾಕ್ಟರ ಕೈಗಿತ್ತಳು.
ರಾಜು ಡಾಕ್ಟರು ಎಡಕಾಲ ಎಕ್ಸ್‌ರೇ ನೋಡಿದರು. ಅವರ ಮುಖದಲ್ಲಿ ಆತಂಕ ಮಡುಗಟ್ಟ ತೊಡಗಿತು.
ಅವರೊಡನಿದ್ದ ಒಬ್ಬರು ವೈದ್ಯರ ಆತಂಕ ಮಾತಿನ ರೂಪತಳೆದು ಹೊರಬಂದೇ ಬಿಟ್ಟಿತು.
ಏನ್ ಗ್ರಾಚಾರ ಸಾ…… ಇದೆಲ್ಲ
—
ಸಾವಿನ ಕದ ತಟ್ಟಿದ್ದ ನನ್ನಲ್ಲಿ ಯಾವ ಆತಂಕವೂ ಇರಲಿಲ್ಲ. ತೀರಾ ಸಹಜ ಸ್ವರದಲ್ಲಿ ಕೇಳಿದೆ.
ಯಾಕೆ ಡಾಕ್ಟರ್… ಏನಾಯಿತು…
ರಾಜು ಡಾಕ್ಟರು ಸಂತೈಸಿದರು.
ಏನಿಲ್ಲ, ಏನಿಲ್ಲ. ಆಪರೇಶನ್ ಆಗ್ಬೇಕಾಗತ್ತೆ. ನಾಳೆನೇ ಮಾಡಿ ಬಿಡೋಣ. ನಿಮ್ಮ ಮನೆಯಲ್ಲಿ ಯಾರಿದ್ದಾರೆ…
ಮೂರು ವಾರಗಳ ಹಿಂದೆ ಆಪರೇಶನ್ ಮಾಡಿಸ್ಕೂಂಡು ನನ್ನ ಹಾದಿ ಕಾಯುತ್ತಿರುವ ಶೈಲಿಯ ಆತಂಕ ಭರಿತ ಮುಖ ಕಣ್ಣ ಮುಂದೆ ಹಾದು ಹೋಯಿತು.
ನಮ್ಮ ಹಳೆ ಮನೆಯಲ್ಲಿ ಬಾಡಿಗೆಗಿರುವ ಕೃಷ್ಣಣ್ಣ ಅವಳಿಗೀಗಾಗಲೇ ಸುದ್ದಿ ಮುಟ್ಟಿಸಿರುತ್ತಾರೆ.
ಅವರನ್ನು ಕಂಡಾಗೆಲ್ಲಾ ನಾನು ಸ್ಕೂಟರಿಗೇರಿಸಿಕೊಳ್ಳುತ್ತಿದ್ದೆ. ಸಾಧಾರಣವಾಗಿ ನನ್ನ ಪಿಲಿಯನ್ ಸೀಟು ಖಾಲಿ ಇರುವುದಿಲ್ಲ. ಇಂದು ಒಂದು ವೇಳೆ ಕೃಷ್ಣಣ್ಣ ಇರುತ್ತಿದ್ದರೆ ಅವರ ಕತೆ ಏನಾಗುತ್ತಿತ್ತೊ…
ಆದರೆ ನಾನು ಬಿದ್ದು ಹತ್ತು ನಿಮಿಷವಾಗುವಾಗ ಕೃಷ್ಣಣ್ಣ ಅಲ್ಲಿಗೆ ಮುಟ್ಟಿದ್ದರು. ಚೆಲ್ಲಾಪಿಲ್ಲಿಯಾದ ತರಕಾರಿ ಹೆಕ್ಕಿ ಚೀಲದಲ್ಲಿ ತುಂಬಿಸಿದ್ದರು. ಎಲ್ಲೋ ಹಾರಿ ಹೋಗಿದ್ದ ಕನ್ನಡಕ ನಾನು ಸ್ಟ್ರೆಚರಿಗೇರುವಾಗ ನನ್ನ ಕೈ ಸೇರಿತ್ತು.
ಶೈಲಿಗೆ ಹೇಳಿ ತೀರಾ ಮೈನರ್ ಆಕ್ಸಿಡೆಂಟು ಎಂದು. ಗಾಬರಿಯಾಗದಂತೆ ನೋಡಿಕೊಳ್ಳಿ. ಸುಧಾಕರನನ್ನು ರಾತ್ರಿ ಜತೆಗಿರಲು ಕಳುಹಿಸಿ.
ಕೃಷ್ಣಣ್ಣ ತೀರಾ ಕುಳ್ಳ ಮನುಷ್ಯ. ಜನ ಸಾಧು. ಹುಲ್ಲನ್ನೂ ಹಿಮಾಲಯದೆತ್ತರಕ್ಕೆ ಹಿಗ್ಗಿಸಿ ಬಿಡುವ ಗಾಬರಿ ಸ್ವಭಾವದವರು. ಅವರಿಗೆ ಸರಿಯಾಗಿ ಸುಳ್ಳು ಹೇಳಲು ಬರುತ್ತಿರಲಿಲ್ಲ.
ಅವರು ಹೇಳುವಾಗ ಏನೇನು ಎಡವಟ್ಟು ಮಾಡಿಕೊಳ್ಳುತ್ತಾರೊ… ಅದನ್ನು ಕೇಳಿ ಗಾಬರಿ ಬಿದ್ದು ಶೈಲಿ ಇಂದೇ ಬಾರದಿದ್ದರೆ ಸಾಕು.
ಇವರು ಸರಿಯಾಗಿಯೇ ಹೇಳಿದರೂ ರಕ್ತದಿಂದ ತೊಯ್ದು ಹೋಗಿರುವ ಬಿಳಿ ಶರಟು ಶೈಲಿಗೆ ನಿಜವನ್ನು ತಿಳಿಸದಿರಲು ಸಾಧ್ಯವಿಲ್ಲ.
ನಾನು ಯೋಚಿಸುತ್ತಿರುವಂತೆ ಶೈಲಿಯ ಫೋನು ಬಂತು.
—-
ನಿಮ್ಮದು ಬಹಳ ಬ್ಯಾಡ್ ಇಂಜುರಿ ಅಂತ ರಾಜು ಡಾಕ್ಟರು ಹೇಳಿದ್ರಂತೆ. ಈಗ ಯಶೋದಾ ಮೇಡಂ ತಿಳಿಸಿದ್ರು. ನಿಮ್ಮ ಶರಟು ನೋಡಿ ಗಾಬರಿಯಾಗ್ತಿದೆ. ತುಂಬಾ ಜನರಿಂದ ನನಗೆ ಫೋನುಗಳು ಬರ್ತಿವೆ. ಏನ್ ಗ್ರಾಚಾರ ಶಿಶಿಲರದ್ದು ಎಂದು ಎಲ್ಲರೂ ಕೇಳ್ತಿದ್ದಾರೆ. ನಾನು ಆಸ್ಪತ್ರೆಗೆ ಬರ್ತೇನೆ.
ಮೂರು ತಿಂಗಳ ವಿಶ್ರಾಂತಿ ಅಗತ್ಯವಿದ್ದವಳಿಗೆ ಸಿಕ್ಕಿರುವುದು ಕೇವಲ ಮೂರು ವಾರಗಳ ವಿಶ್ರಾಂತಿ. ಈ ಸ್ಥತಿಯಲ್ಲಿ ನನ್ನನ್ನು ನೋಡಿದರೆ ಅವಳನ್ನು ಮತ್ತೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.
ಆಮೇಲೆ ಯಾರು ಯಾರನ್ನು ನೋಡಿಕೊಳ್ಳುವುದು…
ಅಂಥದ್ದೇನೂ ಇಲ್ಲ. ಸುಮ್ಮೆ ಗಾಬರಿಯಾಗ್ಬೇಡ. ಗ್ರಾಚಾರ ನೆಟ್ಟಗಿದೆ. ಇಲ್ದಿದ್ರೆ ಅಲ್ಲೆ ಸ್ಪಾಟ್್ ಫಿನಿಶ್. ಯೋಚಿಸ್ಬೇಡ. ಪಾಪಿ ಚಿರಾಯು.
ಅದು ಹಾಯ್ ಬೆಂಗಳೂರಿನ ರವಿ ಬೆಳಗರೆಯ ಡಯಲಾಗು. ಆ ಮಾತುಗಳು ಅವಳ ತಲ್ಲಣಗಳನ್ನು ಕಡಿಮೆ ಮಾಡಲಾರವೆಂದು ನನಗೆ ಖಚಿತವಾಗಿ ಗೊತ್ತಿತ್ತು.
ಮಾತು ಮುಗಿದಾಗ ಪ್ರಿನ್ಸಿಪಾಲ್ ದಾಮೋದರ ಗೌಡರು, ಚಂದ್ರಶೇಖರ ದಾಮ್ಮೆ ಯವರೊಡನೆ ಕಾಣಿಸಿಕೊಂಡರು.
೧೯೭೮ರಲ್ಲಿ ನಾನು ಸುಳ್ಯದಲ್ಲಿ ಉದ್ಯೋಗಕ್ಕೆ ಸೇರಿಕೊಂಡ ವರ್ಷ ನನಗೆ ಭಯಾನಕ ನ್ಯುಮೋನಿಯಾ ಆಗಿ ಅದು ಟಿ.ಬಿ.ಗೆ ತಿರುಗಿ ಪರಿಸ್ಥತಿ ಚಿಂತಾಜನಕವಾದಾಗ ಇದೇ ದಾಮೋದರ ಗೌಡರು ತಮ್ಮ ಲ್ಯಾಂಬಿ ಸ್ಕೂಟರಲ್ಲಿ ದಾಮ್ಮೆಯವರೊಡನೆ ನಮ್ಮ ಊರಿಗೆ ಹೋಗಿ ಮನೆಗೆ ವಿಷಯ ತಿಳಿಸಿ ಬಂದಿದ್ದರು. ಆಗ ನಮ್ಮೂರಿಗೆ ಲ್ಯಾಂಡ್‌ಫೋನು ಇರಲಿಲ್ಲ. ಮೊಬೈಲ್ ಎಂಬೊಂದು ಮಾಯಾಂಗನೆಯ ಆವಿಷ್ಕಾರ ಆಗಿರಲಿಲ್ಲ.
ಅಷ್ಟು ಹೊತ್ತಿಗೆ ವಿಭಾಗ ಮುಖ್ಯಸ್ಥ ಬೆಳಿಯಪ್ಪ ಗೌಡರು ಯಶೋದಾ ಮೇಡಂ ಜತೆ ಬಂದರು.
ಒಂದು ಕಾಲದಲ್ಲಿ ನಮ್ಮ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ನಾವು ನಾಲ್ವರು ಅಧ್ಯಾಪಕರಿದ್ದೆವು ಬಾಲಚಂದ್ರ ಗೌಡರು, ಬೆಳ್ಳಿಯಪ್ಪ ಗೌಡರು, ನಾನು ಮತ್ತು ಯಶೋದಾ ರಾಮಚಂದ್ರ.
ನಮ್ಮದು ಶ್ರೀಲಂಕಾ ಸಾಮ್ರಾಜ್ಯ. ನಾನು ವಿಭೀಷಣ. ನೀವು ಮತ್ತು ಬಾಲಚಂದ್ರ ಗೌಡರು ನನ್ನ ಅಣ್ಣಂದಿರು. ಈಕೆ ನಮ್ಮೆಲ್ಲರ ತಂಗಿ ಎಂದು ನಾನು ವಿನೋದಕ್ಕೆ ಹೇಳುವುದಿತ್ತು.
—
ಅದಕ್ಕೆ ಪೂರಕವಾಗಿ ಯಶೋದಾ ಮೇಡಂರನ್ನು ಕಂಡಾಗ ಬೆಳ್ಳಿಯಪ್ಪ ಗೌಡರು ಏನು ಹೊಡೆಯಿತು ಮಾರಿ ತಂಗಿ ನಿನಗೆ ಎಂದು ಪಾರ್ತಿಸುಬ್ಬನ ಪಂಚವಟಿ ಪ್ರಸಂಗದ ಪದ್ಯವನ್ನು ತಮ್ಮ ಕೋಕಿಲ ಕಂಠದಿಂದ ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದರು.
ಅದೂ ಇದೂ ಮಾತಾಡುವಾಗ ರಾತ್ರಿ ಒಂಬತ್ತು.
ಚಿದಾನಂದ ಡಾಕ್ಟ್ರು, ರಾಜು ಡಾಕ್ಟ್ರು ಮತ್ತು ಅಟ್ಲೂರು ರಾಮಕೃಷ್ಣ ಕ್ಯಾಜುವಲ್ಟಿಗೆ ಬಂದರು.
ಎಕ್ಸ್‌ರೇ ನೋಡಿದ್ದೇವೆ. ನಿಮಗೆ ಹೈ ಬೀಪಿ ಇದೆ. ಶುಗರ್ ಇಲ್ಲ. ಅದೊಂದು ಪುಣ್ಯ. ನಾಳೆನೇ ಆಪರೇಶನ್ನಿಗೆ ಯತ್ನಿಸುತ್ತೇವೆ. ಮಂಗಳೂರಿನಿಂದ ಒಂದು ಟೂಲು ಬರಲಿಕ್ಕಿದೆ. ಅದು ಲೇಟಾದರೆ ಆಪರೇಶನ್ ಎರಡು ದಿನ ಮುಂದಕ್ಕೆ ಹೋಗುತ್ತದೆ.
ಅಲ್ಲಿಯವರೆಗೆ ನಾನು ಈ ಕ್ಯಾಜುವಲ್ಟಿಯಲ್ಲೇ ಇರಬೇಕಾ…
ಚಿದಾನಂದ ಡಾಕ್ಟರ ಮುಖದಲ್ಲಿ ಮಾಸದ ಮುಗುಳ್ನಗೆ. ಅದು ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಅಸ್ತ್ರ.
ಎರಡು ದಿನ ಇಲ್ಲೇ ಇರಿ. ಮತ್ತೆ ನಿಮ್ಮನ್ನು ಸ್ಪೆಷಲ್ ರೂಮಿಗೆ ಶಿಫ್ಟು ಮಾಡುವಾ.
ನಾನು ತಲೆಯಾಡಿಸುವ ಹೊರತು ಬೇರೇನನ್ನೂ ಮಾಡುವಂತಿರಲಿಲ್ಲ.
ರಾಜು ಡಾಕ್ಟ್ರುಸರಿ, ನಿದ್ದೆ ಮಾಡಿ, ಗುಡ್‌ನೈಟ್್ ಎಂದರು.
ಅವರ ಮುಖದಲ್ಲಿ ನಗುವಿರಲಿಲ್ಲ.
ಕಾಂತಮಂಗಲದಿಂದ ಸುಧಾಕರ ಬಂದ. ಶೈಲಿ ಅವನಲ್ಲಿ ಊಟ ಕಳಿಸಿದ್ದಳು.
ಹಸಿವೆಯಾದರೂ ಊಟ ಮಾಡಲಿಲ್ಲ.
ನನಗೆ ಏಳಲಾಗುತ್ತಿಲ್ಲ. ಬೆನ್ನಿಗೆ ಒಂದು ಯುರೋ ಬ್ಯಾಗು ಜೋಡಿಸಿದ್ದಾರೆ. ಟೂ ಮಾಡುವುದು ಹೇಗೆ…
ಮಲಗಿದಲ್ಲೇ ಕೆಳಗಿಟ್ಟು…….ಛೆ….
ಅದಾಗಿ ಯಾರಿಂದಲೋ ಗುದ ಸ್ವಚತೆ ಮಾಡಿಸಿಕೊಳ್ಳಬೇಕು. ಛೆ….
ಬೇಡ ಸುಧಾಕರ. ಇಂದು ಊಟ ಬೇಡ. ನಾಳೆ ನೋಡೋಣ. ನೀನು ಮಲಗಿಕೋ.
ಪಕ್ಕದ ಮಂಚದಲ್ಲಿ ಸುಧಾಕರ ಮಲಗಿಕೊಂಡ.
—
ನಾನು ನಿದ್ದೆ ಮಾಡಲು ವಿಫಲಯತ್ನ ನಡೆಸಿದೆ.
ಸುಧಾಕರನ ಗೊರಕೆ ಕೇಳಿಸತೊಡಗಿತು. ಅದು ಚಡಾವು ಏರಲಾಗದ ಲೋಡು ಲಾರಿಯ ಆರ್ತನಾದದಂತಿತ್ತು.
*****
ಪುಸ್ತಕ: ಏನ್ ಗ್ರಾಚಾರ ಸಾ