ನನ್ನ ಮದುವೆ ಆದ ಮೊದಲ ವರ್ಷದ (೧೯೬೧) ದೀಪಾವಳಿಗೆ ಮಾವನವರಿಂದ ಆಮಂತ್ರಣ ಬಂದಿತ್ತು. ಮಾವನ ಮನೆ ತಲುಪಿದಾಗ ಅಲ್ಲಿ ಇನ್ನೂ ಇಬ್ಬರು ಅಳಿಯಂದಿರು ಆಗಲೇ ಬಂದು ಬೀಡುಬಿಟ್ಟಿದ್ದರು. ಅಳಿಯಂದಿರು ತಂದಿರುವ ಪಟಾಕಿ, ಮತಾಪು, ಸಿಹಿ ತಿಂಡಿಗಳ ಪ್ಯಾಕೆಟ್ಗಳನ್ನು ಮೊಮ್ಮಕ್ಕಳು ಅಜಮಾಯಿಶಿ ಮಾಡುತ್ತಿದ್ದರು. ನನ್ನ ಸರಕನ್ನು ಬಿಚ್ಚಿ ಎಲ್ಲರ ಮುಂದೆ ಹರಡಿದೆ. ಬರೀ ಸಿಹಿ ತಿಂಡಿಗಳ ಸಮ್ಮಿಶ್ರ ಸರ್ಕಾರವೋ ಎಂಬಂತೆ ಅವುಗಳೇ ರಾರಾಜಿಸುತ್ತಿದ್ದವು.
ಮಧ್ಯೆ ಮಧ್ಯೆ ಕಾಫಿ ಸಮಾರಾಧನೆ ನಡೆಯುತ್ತಿತ್ತು. ಅತ್ತೆಯವರಿಗೆ ಸಂಭ್ರಮವೋ ಸಂಭ್ರಮ. ಕಾಫಿ ವಿತರಿಸುವಾಗ ಕೊಟ್ಟವರಿಗೇ ಮತ್ತೆ ಮತ್ತೆ ಬಂದು ಕೊಡುವರು. ಕೊಂಚ ಮರೆವಿನ ಸ್ವಭಾವದವರು. “ಹಬ್ಬದ ಅಡುಗೆ ಸಿದ್ಧವಾಗುತ್ತಿದೆ. ಯಾವ ಸಿಹಿ ಭಕ್ಷ ನೀವುಗಳು ಇಷ್ಟಪಡುತ್ತೀರಾ? ಒಬ್ಬಟ್ಟು ಮಾಡಲೇ?” ಅತ್ತೆಯವರು ಕೇಳಿದರು. ಎಲ್ಲರೂ “ಏನೂ ಸಿಹಿ ತಿಂಡಿ ಮಾಡುವ ತೊಂದರೆ ತೆಗೆದುಕೊಳ್ಳಬೇಡಿ. ಅಷ್ಟೊಂದು ವೆರೈಟಿ ಸಿಹಿ ತಿಂಡಿಗಳು ಮೇಳೈಸಿವೆ. ಅವನ್ನೆಲ್ಲಾ ವಿಚಾರಿಸಿಕೊಳ್ಳಬೇಡವೆ?” ಎನ್ನುತ್ತ ಒಕ್ಕೊರಳಿನಿಂದ ಅತ್ತೆಯವರ ಹುಮ್ಮಸ್ಸಿಗೆ ತಣ್ಣೀರು ಎರಚಿದರು. “ಹೌದು, ಅವರುಗಳು ಹೇಳುತ್ತಿರುವುದು ಸರಿಯಾಗಿಯೇ ಇದೆ; ಈಗ ತಂದಿರುವ ಸಿಹಿಗಳನ್ನಲ್ಲಾ ಬೆರಸಿ ‘ಮಿಕ್ಸರ್’ ಮಾಡಿಬಿಟ್ಟು, ಅದೊಂದು ಮಾದರಿಯ ಸಿಹಿಯಾಗಿ ಬಿಡುತ್ತದೆ. ಬರೀ ಪಾಯಸವನ್ನು ಮಾಡು. ಪಾಯಸ ಮಾತ್ರ ತುಂಬಾ ಚೆನ್ನಾಗಿರಲಿ, ಹದವಾಗಿರಲಿ, ಈ ಊಟದಲ್ಲಿ ಹೊರಗಡೆಯಿಂದ ತಂದಿರುವ ಸ್ವೀಟ್ ಗಳು ಆಷ್ಟು ಹಿತವಾಗಿರುವುದಿಲ್ಲ’ ಏನಿದ್ದರೂ ಪಾಯಸದ ಸಮಾನ ಮತ್ತೊಂದು ಸಿಹಿ ಇರುವುದಿಲ್ಲ” ಎಂದರು ನಮ್ಮ ಮಾವನವರು. ಅವರು ಆಡುವ ಮಾತಿಗೆ ಮನೆಯಲ್ಲಿ ಎದುರಿಲ್ಲ.
ಪೂಜೆ ಮುಗಿದು ತೀರ್‍ಥ ಪ್ರಸಾದಗಳ ವಿನಿಯೋಗ ಆದನಂತರ ಊಟಕ್ಕೆ ಸಿದ್ಧತೆ ನಡೆಯಿತು. ಬಾಳೆ ಎಲೆಗಳಲ್ಲಿ ಸುತ್ತಲೂ ಬಿಸಿಬಿಸಿಯಾಗಿ ಮಾಡಿರುವ ಪಲ್ಯ, ಕೋಸಂಬರಿ, ಚಿತ್ರಾನ್ನ, ಗೊಜ್ಜು ಇತ್ಯಾದಿಗಳ ಮೇಳ. ಎಲ್ಲರೂ ಊಟಕ್ಕೆ ಕುಳಿತೆವು. ಮೊಮ್ಮಗ ಶ್ರೀಹರಿ ಕದ್ದು ಕದ್ದು ಪಾಯಸದ ರುಚಿ ನೋಡುತ್ತಿದ್ದ. ನಾವು ಊಟ ಮಾಡಲು ಸಿದ್ದರಾಗುವುದೇ ತಡ, ಶ್ರೀಹರಿ ‘ಅಜ್ಜೀ, ಅಜ್ಜೀ, ಪಾಯಸ ಸಪ್ಪೆ’ ಕೂಗಿಕೊಂಡ. ಮತ್ತೆ ಇನ್ನೆರಡು ಮಕ್ಕಳು ‘ಹೌದು ಅಜ್ಜೀ, ಪಾಯಸ ತುಂಬಾ ಸಪ್ಪೆ, ಬಾಯಿಗೆ ಇಡೋಕೆ ಆಗೊಲ್ಲ’ ಎಂದವು. ‘ಯಾಕಮ್ಮ ಪಾಯಸಕ್ಕೆ ಕಡಿಮೆ ಬೆಲ್ಲ ಹಾಕಿದ್ದೀಯಾ? ಎಲ್ಲರೂ ಸಪ್ಪೆ ಎನ್ನುತ್ತಿದ್ದಾರೆ. ‘ನನ್ನವಳು ಬಾಯಿ ಹಾಕಿದಳು. ಮರವೆಯ ಅತ್ತೆಯವರಿಗೆ ಜ್ಞಾನೋದಯವಾಯಿತು. ತಾವು ಬೆಲ್ಲದ ಪಾಕವನ್ನು ಇಟ್ಟಿದ್ದು ಪಾಯಸ ಕುದಿಯುತ್ತಿರುವಾಗ ಹಾಕೋಣವೆಂದು ಅಂದುಕೊಂಡಿದ್ದರು ಏನೋ ಗಡಿಬಿಡಿ, ಸಂಭ್ರಮದ ಭರಾಟೆಯಲ್ಲಿ ದೂರದಲ್ಲಿದ್ದ ಪಾಕದ ಪಾತ್ರೆ ಕಣ್ಣಿಗೆ ಬೀಳದೆ ಮಾಡಿದ ಪಾಯಸ ಬೆಲ್ಲದಿಂದ ವಂಚಿತವಾಯಿತು. ತುಂಬಾ ನೊಂದುಕೊಂಡರು ‘ಎಲ್ಲರೂ ನಿಧಾನವಾಗಿ ಊಟ ಮಾಡಿರಿ. ಇನ್ನು ಎರಡು ನಿಮಿಷಗಳಲ್ಲಿ ಪಾಯಸ ಸಿದ್ದವಾಗಿಬಿಡುತ್ತದೆ’ ಎಂದು ಹೇಳಿ ಸಂಭಾಳಿಸಿಕೊಂಡರು.
“ಈಗ ಇಲ್ಲಿ ಜಮಾಯಿಸಿರುವ ಸ್ವೀಟ್ಗಳ ಕೂಟವೇ ಮಜಭೂತಾಗಿದೆ; ಈಗ ನಿನ್ನ ಪಾಯಸ ಯಾರಿಗೆ ಬೇಕೇ?” ಮಾವನವರು ನುಡಿದರು. ಊಟದ ಮಧ್ಯೆ ‘ನಗೆ ಕೂಟ’ ಸಂಭ್ರಮ ತಂದಿತ್ತು. ಪ್ರತಿ ದೀಪಾಪಳಿಗೂ ಈ ಘಟನೆಯ ನೆನಪು ಹಸಿರಾಗುತ್ತದೆ. ಮಾಡಿಟ್ಟ ಪಾಯಸ ಹಾಗೆಯೇ ಉಳಿದಿತ್ತು!
*****