ನನ್ನ ಬುದ್ದಿಗೆ ತೋಚಿದ್ದನ್ನು ಮಾಡಿಯೇ ತೀರ ಬೇಕೆಂಬ ಛಲ ನನ್ನದು. ಹಿಂದೆ ತಿಳಿಸಿದಂತೆ ನಾನು ಬರೆದ ಅನೇಕ ನಾಟಕಗಳ ಹಸ್ತಪ್ರತಿಗಳನ್ನು ಹೇಗಾದರೂ ಮಾಡಿ ಕಂಪನಿ ಕಲಾವಿದರ ಮೂಲಕ ರಂಗದ ಮೇಲೆ ನೋಡಲೇಬೇಕೆಂಬ ಹೆಬ್ಬಯಕೆಯಾದಾಗ ಚೀಲದ ತುಂಬ ನಾನು ಬರೆದ ನಾಟಕ, ಪುಸ್ತಕಗಳನ್ನು ಹೊತ್ತುಕೊಂಡು ಕಂಪನಿ ಇದ್ದಡೆಗಳಲ್ಲಿ ಬಸ್ ಹತ್ತುತ್ತಿದ್ದೆ. ೧೯೭೪ ನೇ ಇಸವಿ ಅಂತ ಕಾಣ್ತದೆ. ಬಿಜಾಪುರದಲ್ಲಿ ಸಂಗಮೇಶ್ವರ ನಾಟಕ ಸಂಘ ಇದೆ ಎಂದು ಯಾರೋ ಹೇಳಿದರು. ಅಲ್ಲಿಗೆ ಹೋದೆ. ಕಂಪನಿಯವರು ನನ್ನನ್ನು ನೋಡಿದ ತಕ್ಷಣ “ಇನ್ನು ಯಾವ ನಾಟಕ ಬರೀ ತಾನೇಂತ” ಹೇಳಿ ತಿರಸ್ಕರಿಸಿದರು. ನಿರಾಶೆಯಿಂದ ಹೊರಬರುವಾಗ ರಾಮದುರ್ಗದಲ್ಲಿ ಒಂದು ಕಂಪನಿ ಇದೆ ಅಂತ ಯಾರೋ ಹೇಳಿದರು. ಅಲ್ಲಿಗೆ ಬಸ್ ಹತ್ತಿದೆ.
ರಾಮದುರ್ಗದಲ್ಲಿ ಕಂಪನಿಗೆ ಹುಡುಕುತ್ತಾ ಹೋಗಿ ಕೇಳಿದಾಗ “ಅದೆಲ್ಲಾ ಮಾಲೀಕರ ಅಧಿಕಾರ, ಸೌದತ್ತಿಯಲ್ಲಿ ಮಾಲೀಕರಿತ್ತಾರ ಕೇಳಿಕೊಂಡು ಬರ್‍ಬೇಕು” ಎಂದು ಹೇಳಿದರು. ಸ್ವಲ್ಪ ಆಸೆ ಚಿಗುರೊಡೆದಂತಾಗಿ ಅಲ್ಲಿಗೆ ಬಸ್ ಹತ್ತಿದೆ. ಸಂಜೆ ಹೊತ್ತಾಗಿತ್ತು. ಮಾಲೀಕರ ಮನೆಯನ್ನು ಕೇಳುತ್ತಾ ಹೋಗಿ ಅವರನ್ನು ಭೇಟಿ ಮಾಡಿದಾಗ, ಇನ್ನೂ ನಾಲ್ಕೈದು ನಾಟಕಗಳು ಸ್ಟೇಜ್ ಆಗಬೇಕಾಗಿರುವುದು ಬಾಕಿ ಇದೆ. ಮುಂದೆ ಇನ್ನೊಂದು ವರ್ಷ ಬಿಟ್ಟಿ ಬನ್ರಿ ಎಂದು ನಿರುಸ್ಸಾಹ ತೋರಿಸಿದರು. ನನಗೆ ಜಿಗುಪ್ಸೆಯಾಗಿ ಬಸ್‍ಸ್ಟಾಂಡ್‍ಗೆ ಬಂದೆ. ಅಲ್ಲಿ ಯಾರೋ ಚಿಂದೋಡಿ ಲೀಲಮ್ಮನವರ ಕಂಪನಿ ಹುಬ್ಬಳ್ಳಿಯೊಳಗಿದೆ, ಎಂದು ಮಾತನಾಡಿದನ್ನು ಕಂಡು, ಅಲ್ಲಿಗೆ ಬಸ್ ಹತ್ತಿದೆ. ಬಸ್ ಜಾರ್ಜ್‍ಗೆಂದೇ ಆಗಲೇ ಐದಾರುನೂರು ರೂಪಾಯಿ ಖರ್ಚಾಗಿ ಇನ್ನೊಂದು ಎರಡು ನೂರು ರೂಪಾಯಿ ಜೋಬಿನಲ್ಲಿ ಉಳಿದಿತ್ತು. ಆ ಹಣ ಮುಗಿಯುವುದರೊಳಗೆ ನಾನು ಗುರಿ ಮುಟ್ಟುತೀನಾ..? ಎಂದು ಯೋಚಿಸುತ್ತಿದ್ದೆ. ತಡಮಾಡದೇ ಹುಬ್ಬಳ್ಳಿ ಬಸ್ ಹತ್ತಿದೆ. ಅದೇನು ಚಿಕ್ಕ ಊರೇ? “ಮಿನಿ ಬಾಂಬೆ” ಎಂದು ಕರೆಯುತ್ತಾರೆ. ಅಲ್ಲಿ ಕಂಪನಿ ಹುಡುಕೋದೆ ದೊಡ್ಡ ಸಾಹಸದ ಮಾತಾಯಿತು. ಅಂತೂ ರಾತ್ರಿ ೯ ಗಂಟೆಗೆ ಕಂಪನಿ ವಿಳಾಸ ಸಿಕ್ತು. ರಸ್ತೆ ಮೇಲಿನ ಗಾಡಿಯಲ್ಲಿ ತಿಂಡಿ ತಿಂದು, ನಾಟಕದ ಟಿಕೆಟ್ ತಗೊಂಡು ಒಳಹೋಗಿ ಕುಳಿತೆ.
ಮೊದಲು ದೊಡ್ಡ ಕಂಪನಿಯಾದ್ದರಿಂದ ಯೋಚನೆ ಮಾಡಿ ಹೆಜ್ಜೆ ಇಡಬೇಕೆಂದು ತಿಳಿದುಕೊಂಡು, ನಾಟಕಕ್ಕೆ ಹೋಗಿದ್ದೆ. ವರ್ಣರಂಜಿತ ಲೈಟ್‍ಗಳು, ಬಣ್ಣಬಣ್ಣದ ಕವಾಟುಗಳು, ಜೀವಂತವೇ ಆಗಿರುವಂತಹ ಕಾಡು ಮತ್ತು ರಸ್ತೆ ಸೀನುಗಳು. ಪಾತ್ರಧಾರಿಗಳು ಬಂದು ಹೋಗುವ ರೀತಿ, ಹಾಸ್ಯದ ಹೊಳಪು, ಖಳನಾಯಕನ ಪರಾಕ್ರಮ, ನಾಯಕ ನಾಯಕಿಯರ ದುಃಖ ತಪ್ತ ಭಾವ, ಪ್ರಣಯ ಪರಂಧಾಮ, ಇವುಗಳೆಲ್ಲವನ್ನು ನೋಡಿ, ರೋಮಾಂಚನ ಗೊಂಡು, ಇಂತಹ ಕಂಪನಿಯಲ್ಲಿ ನನ್ನ ನಾಟಕ ಪ್ರದರ್ಶನ ಗೊಂಡರೆ ಎಷ್ಟು ಚೆನ್ನ? ಎಂದು ನೆನಪಿಸಿಕೊಂಡೆ. ಅಷ್ಟೊತ್ತಿಗೆ ನಾಟಕ ಮುಗಿದೇ ಹೋಗಿತ್ತು. ಎಲ್ಲರೂ ಹೊರಬಂದಾಗ ನಾನು ಉಳಿಯುವುದಾದರೂ ಎಲ್ಲಿ? ಎಂಬ ಚಿಂತೆ ಕಾಡಿತು. ಮನೆ, ಮಠ, ಇಲ್ಲದಿರುವಾಗ ಬಸ್ ಸ್ಟಾಂಡ್ ದಿಕ್ಕು ಎನ್ನುವಂತೆ ಅಲ್ಲಿಗೆ ಬಂದು ಹಿಂಗೆ ಕಂಬಕ್ಕೆ ಒರಗಿಕೊಂಡು ನಿದ್ದೆ ಹೋದೆ. ಜನಗಳ ಸದ್ದುಗದ್ದಲಿನಿಂದ ಎದ್ದು ನೋಡಿದಾಗ ಏಳುಗಂಟೆಯಾಗಿತ್ತು. ಲಗುಬಗೆಯಿಂದ ಮುಖ ಮಾರ್ಜನ ಮಾಡಿಕೊಂಡು, ಚಾ.. ಕುಡಿದು, ಚಿಂದೋಡಿ ಲೀಲಾರವರು ಇರುವ ಮನೆಯನ್ನು ಹುಡುಕುತ್ತಾ ಹೊರಟೆ. ಅಂತೂ ಅವರಿವರಿಂದ ತಿಳಿದುಕೊಂಡು ಹೋದೆ. ಮೂರನೇ ಮಹಡಿ ಮೇಲೆ ಅವರ ಮನೆ, ತಿಂಡಿ ತಿನ್ನದೆ ಇದ್ದುದ್ದರಿಂದ ಕಾಲಿನಲ್ಲಿ ಶಕ್ತಿ ಇಲ್ಲದಿದ್ದರೂ ನಾಟಕಕ್ಕಾಗಿ ಏರಲೇಬೇಕಾಯಿತು. ಬಾಗಿಲು ಹತ್ತಿರ ಶಾರ್ದೂಲದಂತಹ ನಾಯಿಯನ್ನು ಕಟ್ಟಿದ್ದರು ಒಳಹೋಗಲಿಕ್ಕೆ ದಾರಿಯೇ ಇರಲಿಲ್ಲ. ಏನು ಮಾಡುವುದು? ಚಿಂದೋಡಿ ಲೀಲಾ ರವರನ್ನು ನೋಡಲೇಬೇಕಲ್ಲಾ… ಆಗಲೇ ಮನೆ ಬಿಟ್ಟು ಎರಡು ಮೂರು ದಿನವಾಗಿತ್ತು. ಬಟ್ಟೆಯಲ್ಲಾ ಮಾಸಿ ಕೊಳಕಾಗಿ
ಹೋಗಿದ್ದೆವು.
ಕೈಚೀಲವನ್ನು ಹೆಗಲಿಗೇರಿಸಿಕೊಂಡು, ನಾಯಿಯನ್ನು ದಾಟಿ ಹೋಗಬೇಕೆನ್ನುವಷ್ಟರಲ್ಲಿ ಆ ನಾಯಿಯ ದೃಷ್ಟಿಗೆ ನಾನು ಹುಚ್ಚನೆಂದು ಕಂಡಿರಬೇಕು. ಒಂದೇ ಸಲ ನೆಗೆದು, ನನ್ನ ಮೈಕೈಯನ್ನು ಚಿಂದಿ ಚಿತ್ರಾನ್ನಮಾಡಿಬಿಟ್ಟಿತು. ಬ್ಯಾಗಿನೊಳಗಿನ ನಾಟಕ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಪೈಜಾಮ ಹರಿದುಹೋಗಿ ರಕ್ತ ವಸರುತ್ತಿತ್ತು. ನನ್ನ ಜುಬ್ಬದ ಒಂದು ತೋಳೇ ಕಿತ್ತುಹೋಗಿತ್ತು. ನನ್ನ ಕಿರುಚಾಟದ ಧ್ವನಿಯನ್ನು ಕೇಳಿದ ಸಹಾಯಕರೊಬ್ಬರು ಹೊರಬಂದು ನಾಯಿಯನ್ನು ಕಂಟ್ರೋಲ್‍ಗೆ ತಂದರು. ನನ್ನ ಆಕಾರವಿಕಾರಗಳನ್ನು ನೋಡಿದ ಅವರು “ಏನ್ ಬೇಕಾಗಿತ್ತಪ್ಪ ನಿನಗೆ? ಭಿಕ್ಷೆ ಕೇಳಕ್ಕೆ ಮೂರನೇ ಮಹಡಿಗ್ಯಾಕಪ್ಪಾ ಬಂದೀ?” ಎಂದು ರೇಗಿದರು. ನಾನು ಪುಸ್ತಕಗಳನ್ನು ಚೀಲಕ್ಕೆ ಹಾಕುತ್ತಾ ನಾನು ಬಿಕ್ಷುಕನಲ್ರೀ, ನಾನೊಬ್ಬ ಕವಿ. ಅಮ್ಮವ್ರನ್ನ ನೋಡಬೇಕಾಗಿತ್ತು. ಭೇಟಿ ಮಾಡಿಸ್ರಿ ಎಂದು ವಿನಂತಿಸಿದೆ. ನನ್ನ ವಿಕೃತ ರೂಪವನ್ನು ನೋಡಿದ ಅವನು ಕವಿಗಳ ಹೆಸರಿನಲ್ಲಿ ಮೋಸ ಮಾಡ್ಕೊಂಡು ಬೇಕಾದಷ್ಟು ಜನ ಬರ್ತಾರೆ ಎಂದಂದುಕೊಳ್ಳುತ್ತಾ, ಒಳಹೋದವನು ೫ ನಿಮಿಷ ಬಿಟ್ಟು ಹೊರಬಂದ.
“ನೋಡಪ್ಪಾ… ಆಮಾವ್ರು ಇನ್ನೂ ಜಳಕ ಮಾಡಿಲ್ಲ. ನೀನು ಸೀದಾ ಕಂಪನಿ ಬೋರ್ಡಿಂಗ್‍ಗೆ ಹೋದರೆ ಅಲ್ಲಿ ಊಟ ಕೊಡ್ತಾರ. ಉಂಡು ಮುಂದಕ್ಕೆ ಹೋಗಬೇಕಂತೆ” ಎಂದೆಂದ. ಭಿಕ್ಷಕ್ಕೆ ಬಂದ ರೀತಿಯಲ್ಲಿ ಮುಂದಕ್ಕೆ ಹೋಗು, ಎಂದಂದ್ನಲ್ಲಾ? ಒಂದು ಕಡೆ ಈ ಭಂಟನ ಕಾಟ, ಇನ್ನೊಂದು ಕಡೆ ಈ ನಾಯಿಯ ಕಾಟ, ಹರಿದು ಚಿಂದಿಯಾದ ಬಟ್ಟೆಗಳು. ಮೈಕೈಯೆಲ್ಲಾ ರಕ್ತ ಸೋರಿ ನೋವಾಗಲಾರಂಭಿಸಿತು. ಆ ನೋವಿನಲ್ಲಿಯೇ ನಾನು ಅವನು ಹೇಳಿದ ಬೋರ್ಡಿಂಗ್ ಹೋಗದೆ ಇನ್ಯಾವತ್ತೂ ಈ ಕಂಪನಿ ನಾಟಕಗಳ ಸಹವಾಸ ಬೇಡ, ಎಂದು ರಕ್ತಸಿಕ್ತಗೊಂಡು ಚಿಂದಿಯಾದ ಬಟ್ಟೆಯಲ್ಲಿ ಊರಿನೆಡೆಗೆ ಟ್ರೈನ್ ಹತ್ತಿದೆ.
*****