ಅಮ್ಮನನು ಅಪ್ಪಿರುವ ಎಳೆಯ ಕಂದನ ತೆರದಿ
ಮೈಸೂರ ಕಂಕುಳಲಿ ಕೊಡಗ ನಾಡು
ಗಿರಿಶಿಖರ ಮಲೆಮೌನ, ಕಾಡುಕಳುಪುವ ಕಂಪು
ತೊರೆಯನೀರಿನ ಗೀತ ಸೊಗದ ಬೀಡು!
ಕಾವೇರಿ ಬರುತಿಹಳು ಕೊಡಗಿನಲಿ ಜನಿಸುತ್ತ
ಅಂಕು ಡೊಂಕಿನ ಕೊಂಕು ಬಿಂಕದಿಂದ,
ಸಂದೇಶ ತರುತಿಹಳು ಕೊಡಗ ನಾಡೊಳಗಿಂದ
ಜಗಕೆಲ್ಲ-ಬಂದುದನು ನೋಡಿರೆನುತ!
ಕೊಡಗಸೀಮೆಯ ಬೆಡಗು ಮಲೆಗಳಾ ಮೌನವನು
ಬಾಲೆಯರ ಬಿನ್ನಾಣ, ಬಿಂಕದಾಟ,
ರಮಣಿಯರ ಭೀರುತನ, ಎಲ್ಲವನು ಬಿಂಬಿಸುತ
ಕೊಡಗ ಪುತ್ರಿಯು ಭರದಿ ಹರಿಯುತಿಹಳು!
ಕೊಡಗ ಕಿತ್ತಳೆಹಣ್ಣು ನೋಡಿ ನೆನಪಾಯ್ತೆನಗೆ
ಮಡಿಕೇರಿ ಬಳಿಯಿರುವ ಕೊಡಗ ಕುವರಿ,
-ನೋಡಿದುದು ಒಂದೆ ಚಣ, ಮೂಡಿದಳು ಮನದಲ್ಲಿ
ಮರೆಯಲಾರೆನು ಅವಳ ನಿಲುವ ಚೆಲುವ!
ಬೆಳ್ಳಿಯಂಚಿನ ಕಪ್ಪುಬಣ್ಣ ಸೀರೆಯನುಟ್ಟು
ಸಡಗರದಿ ಒಡನಾಡಿಯೊಡಗೂಡುತ
ಮುಗಿಲ ಬಣ್ಣದ ರವಿಕೆ ತೊಟ್ಟಿಹಳು, ಮಲ್ಲಿಗೆಯ
ಮುಡಿದಿಹಳು, ಜೋಲುತಿದೆ ಜಡೆಯು ಕೆಳಗೆ!
ಕಳಿತ ಕಿತ್ತಳೆ ವರ್ಣ ಮಿದುವಾದ ಕೆನ್ನೆಗಳು,
ತೆಳೆಯಂತೆ ರಸ ತುಂಬಿದಾತುಟಿಗಳು,
ನಿಲುವಿನಲಿ ವೈಯಾರ, ನೋಟದಲಿ ದಿಟ್ಟತನ
ಬಿನ್ನಾಣ ಬೆಡಗುಗಳ ಹಾಸಮಯಿಯು!
ನೋಡಿದುದು ಒಂದೆ ಚಣ ಮೂಡಿದಳು ಮನದಲ್ಲಿ
ನೋಡಬೇಕೆಂಬುವಾ ಬಯಕೆ ಬಹಳ!
ಕನಸಿನಲಿ ಕುಣಿಯುತ್ತ ಕಲೆಯುತ್ತ ಕಾಣುವುದು
ಅವಳ ರೂಪವು-ಅದುವೆ ಕೊಡಗ ಕರೆಯು!
*****