ಆ ಕಾಡಿನಲ್ಲಿ ಪಿಂಗಲಕನೆಂಬ ಸಿಂಹವು ಮೃಗಗಳಿಗೆಲ್ಲ ಅರಸಾಗಿ ರಾಜ್ಯಭಾರ ಮಾಡಿಕೊಂಡಿತ್ತು. ಒಂದು ದಿನ ಆ ಸಿಂಹ ತನ್ನ ಪರಿವಾರವನ್ನೆಲ್ಲ ಕರೆಯಕೊಂಡು ನದಿಯಲ್ಲಿ ನೀರು ಕುಡಿಯಬೇಕು ಎಂದು ಬಂತು. ಆವೇಳೆಗೆ ಸರಿಯಾಗಿ ಸಂಜೀವಕನು ಎಲ್ಲಿಯೋ ಇದ್ದು ಒಂದು ಗುಟರೆಯನ್ನು ಹಾಕಿತು. ಆಗುಟರೆಯು ಗುಡುಗಿಗಿಂತ ಬಲವಾಗಿದ್ದು ದಿಕ್ಕು ದಿಕ್ಕುಗಳಲ್ಲೆಲ್ಲಾ ಮೊಳಗಿತು. ಆ ಮೊಳಗು ಕೇಳಿ ಸಿಂಹಕ್ಕೆ ಅಬ್ಬಾ ಎನ್ನಿಸಿತು. “ಈ ಗರ್ಜನವೇ ಇಷ್ಟು ಭಾರಿಯಾಗಿದೆಯಲ್ಲಾ! ಇನ್ನು ಈ ಗರ್ಜನವನ್ನು ಮಾಡಿದ ಪ್ರಾಣಿ ಎಂಥದು ಇರಬಹುದು. ಈ ಕಾಡಿನಲ್ಲಿದ್ದರೆ ನಾವು ಇನ್ನು ಬದುಕುವಂತಿಲ್ಲ” ಎನ್ನಿಸಿ ಅದಕ್ಕೆ ದಿಗಿಲಾಯಿತು. ಆದರೂ ತನ್ನ ಅಂಜಿಕೆಯನ್ನು ತೋರಿಸಿಕೊಳ್ಳದೆ ಗಂಭೀರವಾಗಿ ಅಲ್ಲಿಯೇ ಒಂದು ಆಲದ ಮರದ ಬುಡದಲ್ಲಿ, ಕುಳಿತುಕೊಂಡಿತು.
ಸಿಂಹವು ಎಷ್ಟೇ ಅಗಲಿ ರಾಜನಲ್ಲವೇ? ಸಿಂಹವು ಕುಳಿತ ಕಡೆ ಅದನ್ನು ನಡುವೆ ಬಿಟ್ಟುಕೊಂಡು ಅದರ ಮಂತ್ರಿಗಳು ಕುಳಿತರು. ಅವರ ಸುತ್ತಲೂ ರಾಜದೂತರು ಕುಳಿತರು. ಅವರ ಸುತ್ತಲೂ ಸಣ್ಣ ಕೆಲಸಗಳನ್ನು ಮಾಡಿಕೊಂಡು ಸಿಕ್ಕಿದುದನ್ನು ತಿಂದುಕೊಂಡು ಕಾಲಹಾಕುವ ಸಣ್ಣ ಜನರು ಕುಳಿತುಕೊಂಡರು ಯಾರಿಗೂ ಸಿಂಹವೇಕೆ ಹೀಗೆ ಕುಳಿತುಕೊಂಡಿತು ಎಂಬುದು ತಿಳಿಯದು.
ಹೀಗೆ ರಾಜನು ಪರಿವಾರದೊಡನೆ ಸುಮ್ಮನೆ ಕುಳಿತಿರುವುದನ್ನು ಕರಟಕ ದಮನಕ ಎಂಬ ಎರಡು ನರಿಗಳು ಕಂಡುವು. ಅವು ಈ ಪಿಂಗಲಕರಾಜನ ಬಳಿ ಮಂತ್ರಿಗಳಾಗಿದ್ದ ನರಿಗಳ ಮಕ್ಕಳು. ಈಚೆಗೆ ರಾಜನಿಗೆ ಏಕೋ ಬೇಡವಾಗಿ ಅವುಗಳಿಗೆ ಮಂತ್ರಿ ಪದವಿಯು ತಪ್ಪಿತು. ಅಧಿಕಾರವು ತಪ್ಪಿದ್ದರೂ ಅವು ಯಾವಾಗಲೂ ರಾಜನ ಜೊತೆ ಜೊತೆಯಲ್ಲಿಯೇ ಇರುತ್ತಿದ್ದುವು. ಅವು ರಾಜನು ಹೀಗೆ ಕುಳಿತಿರುವುದನ್ನು ಕಂಡು ತಮ್ಮ ತಮ್ಮಲ್ಲಿ ಮಾತನಾಡಿಕೊಂಡುವು. ದಮನಕನು “ಭದ್ರ, ಕರಟಕ, ನಮ್ಮ ಒಡೆಯನು ನೀರು ಕುಡಿಯುವುದಕ್ಕೆಂದು ನದಿಗೆ ಬಂದವನು ಏಕೆ ನದಿಗೆ ಇಳಿಯದೆ ಹೀಗೆ ಆ ಮರದ ಬುಡದಲ್ಲಿ ಕುಳಿತು ಬಿಟ್ಟನು?” ಎಂದು ಕೇಳಿತು. ಕರಟಕನು- “ಅದು ಏನಾದರೂ ಮಾಡಿಕೊಳ್ಳಲಿ ನಮಗೇನು? ಕೇಳಿಲ್ಲವೆ ನೀನು?
ಮಾಡಬಾರದ ಕೆಲಸ ಮಾಡಲು| ನರನು ಕೇಡನು ಪಡೆವನು ॥
ಕೀಲ ಕೇಳಲು ಹೋಗಿವಾನರ ಪ್ರಾಣ ಬಿಟ್ಟುದ ಕಾಣೆಯಾ ॥ ೧೩ ॥
ದಮನಕನು ಅದು: ಹೇಗೆ? ಎಂದು ಕೇಳಲು ಕರಟಕನು ಹೇಳಿತು.
*****
ಕೀಲು ಕಿತ್ತ ಕೋತಿಯ ಕಥೆ ಓದಿ.









